ಬೆಂಗಳೂರು: ರೌಡಿ ಹಿನ್ನೆಲೆ ಉಳ್ಳವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ವಿವಾದ ಭುಗಿದೇಳುತ್ತಿರುವುದನ್ನು ಗಮನಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಒಟ್ಟಾರೆ ಫಜೀತಿಯೇ ಬೇಡ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.
ರೌಡಿ ಸೈಲೆಂಟ್ ಸುನಿಲ್ ಜತೆಗೆ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ. ಮೋಹನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹಾಗೂ ರೌಡಿ ಹಿನ್ನೆಲೆಯ ಫೈಟರ್ ರವಿ ಬಿಜೆಪಿಗೆ ಸೇರ್ಪಡೆ ಆಗಿದ್ದರ ಕುರಿತು ಸೋಮವಾರ ವಿವಾದವಾಗಿತ್ತು.
ಈ ಕುರಿತು ಮಂಗಳವಾರ ಬೆಳಗ್ಗೆ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ಕಾಂಗ್ರೆಸ್‌ನಲ್ಲಿ ಎಷ್ಟು ರೌಡಿ ಶೀಟರ್‌ಗಳಿದ್ದಾರೆ ಲೆಕ್ಕ ಹಾಕಿಕೊಳ್ಳಲಿ ಎಂದಿದ್ದರು. ಇದೇ ಸಮಯಕ್ಕೆ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರಸಾರವಾಗಿದ್ದ ಟ್ವೀಟ್‌ನಲ್ಲಿ, ತಿಹಾರ್ ಜೈಲಿಗೆ ಹೋಗಿ ಬಂದವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ನೇರವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಿವಕುಮಾರ್, ನಾನೇನು ರೌಡಿ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿರಲಿಲ್ಲ. ನನ್ನ ಮೇಲೆ ಯಾವುದೇ ರೌಡಿ ಆಪಾದನೆಗಳಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ, ಅಮಿತ್ ಷಾ ಜೈಲಿಗೆ ಹೋಗಿ ಬಂದಿರಲಿಲ್ಲವೇ ಎಂದು ರೇಗಾಡಿದ್ದರು.
ಇದೆಲ್ಲದರ ನಂತರ ವಿವಾದ ಏಕೊ ತಮ್ಮನ್ನೇ ಸುತ್ತಿಕೊಳ್ಳುತ್ತಿದೆ ಎಂದು ಅರಿತ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. “ಕಾಂಗ್ರೆಸ್ ಪಕ್ಷದ ಟ್ವೀಟ್ ಗೆ ಸಂಬಂಧಿಸಿದಂತೆ ರೌಡಿ ಶೀಟರ್ ಗಳ ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ”
“ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿರುವಂತೆ ಸೈಲೆಂಟ್ ಸುನೀಲ್ ರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ” ಎಂದಿದ್ದಾರೆ. ರೌಡಿ ಶೀಟರ್ ಗಳ ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು ಎನ್ನುವ ಮೂಲಕ ಈ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸುವುದು ಸೂಕ್ತ ಸಂದೇಶವನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ | Criminal politics | ನಾನು ಜೈಲಿಗೆ ಹೋಗಿದ್ದು ರೌಡಿ ಶೀಟರ್ ಆಗಿ ಅಲ್ಲ, ಯಡಿಯೂರಪ್ಪನೂ ಹೋಗಿಲ್ವ?: ಡಿಕೆಶಿ