Site icon Vistara News

ಕಾಂಗ್ರೆಸ್‌ ಟ್ವೀಟ್‌ ಎಫೆಕ್ಟ್‌: ದಿನಕ್ಕೆ 2 ಗಂಟೆ ಹೆಚ್ಚು ಕೆಲಸ ಮಾಡಲು ಸಿಎಂ ಬೊಮ್ಮಾಯಿ ನಿರ್ಧಾರ !

bommai press byte

ಬೆಂಗಳೂರು: ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಆರಂಭಿಸಿದ ಸಿಎಂ ಬದಲಾವಣೆ ಕುರಿತ ಚರ್ಚೆಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮಾಡಲು ನನಗೆ ಹೆಚ್ಚಿನ ಪ್ರೇರಣೆ ಸಿಕ್ಕಿದೆ ಎಂದಿದ್ದಾರೆ.

ಮೈಸೂರು ಪ್ರವಾಸಕ್ಕೆ ಹೊರಡುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ, ಕಾಂಗ್ರೆಸ್‌ನವರು ತಮ್ಮನ್ನು ತಾವು ಏನೋ ಎಂದುಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಅತಂತ್ರ ಇದೆ. ಅದನ್ನು ರಾಜ್ಯದ ತುಂಬಾ ಹರಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದನ್ನು ರಾಜ್ಯದ ಜನರು ನಂಬುವುದಿಲ್ಲ. ಇದೆಲ್ಲದರಿಂದ ನಾನು ಸ್ಥಿತಪ್ರಜ್ಞೆಯವನಾಗಿದ್ದೇನೆ. ಏಕೆಂದರೆ ಈ ಮಾತುಗಳಿಗೆ ಯಾವುದೇ ಆಧಾರ ಇಲ್ಲ ಎಂಬ ಸತ್ಯ ನನಗೆ ಗೊತ್ತಿದೆ.

ಇದೊಂದು ರಾಜಕೀಯ ಪ್ರೇರಿತ ಕೆಲಸ. ಕಾಂಗ್ರೆಸ್‌ನವರು ಇದೇ ಮೊದಲನೆಯ ಬಾರಿ ಹೀಗೆ ಮಾಡಿಲ್ಲ. ಇದನ್ನು ರಾಜ್ಯದ ಜನರು ನಂಬುವುದಿಲ್ಲ. ಇದೆಲ್ಲದರಿಂದ ನನ್ನ ನಿರ್ಣಯಗಳು ಮತ್ತಷ್ಟು ಗಟ್ಟಿಯಾಗಿವೆ. ರಾಜ್ಯದ ಹಿತಾಸಕ್ತಿ ಕಾಯಲು ಮತ್ತಷ್ಟು ಪ್ರೇರಣೆ ಲಭಿಸಿದೆ. ಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ, ಪಕ್ಷದ ಚಟುವಟಿಕೆಗಳ ಕಡೆಗೆ ಇನ್ನೂ ಹೆಚ್ಚಿನ ಗಮನ ನೀಡುತ್ತೇನೆ. ಪ್ರತಿದಿನ ಇನ್ನೂ ಎರಡು ಗಂಟೆ ಹೆಚ್ಚು ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಸಿಎಂ ಸ್ಥಾನ ಬದಲಾವಣೆ ಕುರಿತು ಸುರೇಶ್‌ ಗೌಡ ಮಾತಿಗೆ ಪ್ರತಿಕ್ರಿಯಿಸಿ, ಕೆಲವರ ಮಾತಿಗೆಲ್ಲ ಮಹತ್ವ ನೀಡುವ ಅಗತ್ಯವಿಲ್ಲ ಎಂದರು.

ಚಾಮರಾಜಪೇಟೆ ಮೈದಾನದಲ್ಲಿ ಉತ್ಸವ

ಚಾಮರಾಜಪೇಟೆಯ ಈದ್ಗಾ ಮೈದಾನದ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಮೈದಾನ ಕಂದಾಯ ಇಲಾಖೆಗೆ ಸೇರಿದ್ದು. ಕಂದಾಯ ಇಲಾಖೆ ಎಂದಮೇಲೆ ಅದು ಸರ್ಕಾರಕ್ಕೆ ಸೇರಿದ್ದು. ಸರ್ಕಾರದ ನೀತಿ ನಿಯಮಗಳ ಪ್ರಕಾರ ಸಭೆ ಉತ್ಸವಗಳು ನಡೆಯಲಿವೆ. ಕಾನೂನು ಪ್ರಕಾರ ನಡೆಸುವುದಕ್ಕೆ ಕ್ರಮ ವಹಿಸುತ್ತೇವೆ. ಗಣೇಶ ಕೂರಿಸುವುದಕ್ಕೆ ಬಿಡುವುದಿಲ್ಲ ಎಂದು ಯಾರು ಏಣು ಹೇಳಿದರು ಎನ್ನುವುದು ನನಗೆ ಮುಖ್ಯವಲ್ಲ. ನನಗೆ ಕಾನೂನು ಮುಖ್ಯ ಎಂದು ಶಾಸಕ ಜಮೀರ್‌ ಅಹ್ಮದ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.

Exit mobile version