ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಭಾನುವಾರ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಜತೆಗಿದ್ದರು.
ಅನುಭವಿ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ವಿಸ್ತಾರ ನ್ಯೂಸ್ ಮಾಧ್ಯಮ ಸಂಸ್ಥೆ ರೂಪುಗೊಂಡಿರುವುದು ಸಂತಸ ತಂದಿದೆ. ಹಲವಾರು ಅನುಭವಿ ಪತ್ರಕರ್ತರು ಮತ್ತು ಪ್ರತಿಭಾನ್ವಿತ ತಾಂತ್ರಿಕ ಸಿಬ್ಬಂದಿ ವಿಸ್ತಾರ ನ್ಯೂಸ್ ಜತೆ ಕೈ ಜೋಡಿಸಿರುವುದರಿಂದ ಉತ್ತಮ ಗುಣಮಟ್ಟದ ಸುದ್ದಿ-ಮಾಹಿತಿ ಜನರಿಗೆ ಸಿಗಲಿದೆ. ವಿಸ್ತಾರ ಮಾಧ್ಯಮ ಸಂಸ್ಥೆ ಪತ್ರಿಕೋದ್ಯಮದ ಘನತೆ, ಗುಣಮಟ್ಟ ಮತ್ತು ಸತ್ಯ ನಿಷ್ಠೆಯನ್ನು ಎತ್ತಿ ಹಿಡಿಯಲಿದೆ; ನಾಡು ಮತ್ತು ನಾಡಿನ ಜನರ ಪರ ದನಿ ಎತ್ತಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಸ್ತಾರ ಮೀಡಿಯಾ ಈಗಾಗಲೇ ವಿಸ್ತಾರ ನ್ಯೂಸ್ ವೆಬ್‌ಸೈಟ್ (www.vistaranews.com) ಮತ್ತು ಯುಟ್ಯೂಬ್ ಚಾನೆಲ್‌ಗಳ ಮೂಲಕ ಜನರಿಗೆ ಉಪಯುಕ್ತ ಮಾಹಿತಿ ನೀಡುತ್ತಿದೆ. ಈ ಸುದ್ದಿ ಮತ್ತು ಮಾಹಿತಿಗಳು ಅತ್ಯುತ್ತಮ ಗುಣಮಟ್ಟ ಹೊಂದಿವೆ. ವಿಸ್ತಾರ ವೆಬ್‌ಸೈಟ್ ವೈವಿಧ್ಯಮಯ ವಿಷಯಗಳ ಪ್ರಸ್ತುತಿಯಿಂದಾಗಿ ಕೇವಲ ಎರಡೇ ತಿಂಗಳಲ್ಲಿ ಮನೆಮಾತಾಗಿದೆ. ಈಗಾಗಲೇ ನಿತ್ಯ ಲಕ್ಷಾಂತರ ಮಂದಿ ವಿಸ್ತಾರ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ವಿಸ್ತಾರ ನ್ಯೂಸ್ ಟಿವಿ ಚಾನೆಲ್ ಕೂಡ ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ | ಡಾ. ವಿಜಯ ಸಂಕೇಶ್ವರ ಅವರನ್ನು ಭೇಟಿ ಮಾಡಿದ ಹರಿಪ್ರಕಾಶ್ ಕೋಣೆಮನೆ
ವಿಸ್ತಾರ ನ್ಯೂಸ್ ಕಚೇರಿಯೊಳಗಿನ ಎಲ್ಲ ವಿಭಾಗಗಳನ್ನು ಪರಿಶೀಲಿಸಿದ ಸಿಎಂ ಬೊಮ್ಮಾಯಿ ಅವರು, ಸಂಸ್ಥೆ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೈಟೆಕ್ ಸ್ಟುಡಿಯೊಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಪ್ಪಟ ಕನ್ನಡಿಗರ ಮತ್ತು ಪ್ರಾಮಾಣಿಕ ಪತ್ರಕರ್ತರ ಮಾಧ್ಯಮ ಸಂಸ್ಥೆಯನ್ನಾಗಿ ವಿಸ್ತಾರ ನ್ಯೂಸ್‌ಅನ್ನು ಕಟ್ಟಿ ಬೆಳೆಸಲಾಗುತ್ತಿದೆ. ಇದರ ಯಶಸ್ಸು ಸಮಸ್ತ ಕನ್ನಡಿಗರ ಯಶಸ್ಸು ಎಂದು ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಬೊಮ್ಮಾಯಿ ಅವರಿಗೆ ವಿವರಿಸಿದರು.
ವಿಸ್ತಾರ ಮೀಡಿಯಾದಲ್ಲಿ ಈಗಾಗಲೇ 350ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಾದ್ಯಂತ ತಾಲೂಕು ಮತ್ತು ಹೋಬಳಿ ಮಟ್ಟದಲ್ಲೂ ವಿಸ್ತಾರ ಸುದ್ದಿ ಜಾಲ ರೂಪಿಸಿದ್ದೇವೆ. ಟಿವಿ ಚಾನೆಲ್‌ಗೆ ಅತ್ಯಾಧುನಿಕ ಸಾಧನಗಳನ್ನು ಬಳಸಿದ್ದೇವೆ ಎಂದು ವಿಸ್ತಾರ ಮೀಡಿಯಾದ ಆಡಳಿತ ನಿರ್ದೇಶಕ (ಎಂ.ಡಿ) ಎಚ್.ವಿ. ಧರ್ಮೇಶ್ ಅವರು ತಿಳಿಸಿದರು.
ಸಿಎಂ ಜತೆಯಲ್ಲಿದ್ದ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಅವರು ವಿಸ್ತಾರ ನ್ಯೂಸ್‌ಗೆ ಶುಭ ಕೋರಿದರು.
ವಿಸ್ತಾರ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕ ಶರತ್ ಎಂ. ಎಸ್., ಸಿಒಒ-ಸಿಟಿಒ ಡಿ. ಪರಶುರಾಮ್, ವಿಪಿ-ಮಾರ್ಕೆಟಿಂಗ್ ಸಿ ಎಂ ನವನೀತ್, ಇನ್‌ಪುಟ್-ಔಟ್‌ಪುಟ್ ಮುಖ್ಯಸ್ಥ ಮಂಜುನಾಥ್ ಪಿ, ವಿಸ್ತಾರ ಡಿಜಿಟಲ್ ಎಡಿಟರ್ ರಮೇಶ್ ಕುಮಾರ್ ನಾಯಕ್ ಮತ್ತು ಸ್ಪೆಷಲ್ ಆಪರೇಷನಲ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ, ರಾಜಕೀಯ ವಿಭಾಗದ ಮುಖ್ಯಸ್ಥ ಮಾರುತಿ ಪಾವಗಡ ಜತೆಗಿದ್ದರು.
ಇದನ್ನೂ ಓದಿ | ʼವಿಸ್ತಾರʼ ಕಚೇರಿಗೆ ಡಾ. ಮಹೇಶ ಜೋಶಿ ಭೇಟಿ; ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಮೆಚ್ಚುಗೆ