ಬೆಂಗಳೂರು: ರಾಜಕಾಲುವೆ ಒತ್ತುವರಿ, ರಸ್ತೆ ಗುಂಡಿ ಸೇರಿ ಬೆಂಗಳೂರಿನ ನಾಗರಿಕರನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಈ ಹಿಂದಿನ ಸರ್ಕಾರಗಳ ಆಡಳಿತವೇ ಕಾರಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾಗದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಬೊಮ್ಮಾಯಿ ಮಾತನಾಡಿದರು. ವೈಟ್‌ಫೀಲ್ಡ್ ಮುಖ್ಯ ರಸ್ತೆಯ ವರ್ತೂರು ಕೋಡಿಗೆ ಭೇಟಿ ನೀಡಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸುತ್ತಮುತ್ತ ಭಾರಿ ಮಳೆ ಹಾನಿಯಾಗಿರುವುದನ್ನು ಪರಿಶೀಲಿಸಿದರು. ವರ್ತೂರು ಕೆರೆಗೆ ಸಂಪರ್ಕಿಸುವ ಕಾಲುವೆ ಕೋಡಿ ಹರಿದು ಹಾನಿಯಾಗಿರುವುದನ್ನು ಅಧಿಕಾರಿಗಳು ಗಮನಕ್ಕೆ ತಂದರು.
ಶಾಂತಿನಿಕೇತನ್ ಲೇಔಟ್, ಎ ಜೆ ಆರ್ ಲೇಔಟ್‌ಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವುದನ್ನು ಗಮನಿಸಿದರು. ಎಕೋ ಸ್ಪೇಸ್ ಮುಂಭಾಗದ ರಸ್ತೆಯಲ್ಲಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಕಿರಿಕಿರಿಯಾಯಿತು.
ರೌಂಡ್ಸ್ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಕಳೆದೊಂದು ವಾರದಿಂದ ಮಳೆ ಬರುತ್ತಿದೆ. ಮಹದೇವಪುರ, ಬೊಮ್ಮನಹಳ್ಳಿ ಭಾಗಗಳಲ್ಲಿ ಅತೀ ಹೆಚ್ಚು ಹಾನಿ, ಸಮಸ್ಯೆ ಆಗಿದೆ. ಈ ಭಾಗಗಳಲ್ಲಿ ಹೆಚ್ಚು ಕೆರೆಗಳಿರುವುದರಿಂದ ಹಾನಿಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ತುಂಬಿ, ರಾಜಾಕಾಲುವೆಗಳಿಗೆ ನೀರು ಹರಿದಿದೆ. ಕೆರೆ ನೀರು,ಮಳೆ ನೀರು ಸೇರಿ ರಾಜಕಾಲುವೆ ಸಾಮರ್ಥ್ಯ ಮೀರಿ ಹರಿದು ಸಮಸ್ಯೆ ಆಗಿದೆ ಎಂದರು.
ರಾಜಕಾಲುವೆಗಳ ಒತ್ತುವರಿಯಿಂದಾಗಿಯೂ ಸಮಸ್ಯೆ ಹೆಚ್ಚಾಗಿದೆ ಎಂದ ಸಿಎಂ ಬೊಮ್ಮಾಯಿ, ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಒತ್ತುವರಿ ತೆರವು ಬಳಿಕ ರಾಜಕಾಲುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಕಡೆ ಎಸ್ಟಿಮೇಟ್ ಮಾಡಿ ರಾಜಕಾಲುವೆಗಳ ನಿರ್ಮಾಣ ಮಾಡುತ್ತೇವೆ. ಶಾಶ್ವತ ರಾಜಕಾಲುವೆಗಳ ನಿರ್ಮಾಣ ಮಾಡಲಿದ್ದೇವೆ ಎಂದರು.
ಕಳೆದ ಬಾರಿ ಸಿಟಿ ರೌಂಡ್ಸ್ ವೇಳೆ ಭೇಟಿ ನೀಡಿದ್ದ ಕೆ. ಆರ್. ಪುರ, ಮಹಾಲಕ್ಷ್ಮಿ ಲೇಔಟ್, ಸಾಯಿಲೇಔಟ್‌ಗಳಲ್ಲಿ ಸಮಸ್ಯೆ ಮುಂದುವರಿದಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಅಲ್ಲೆಲ್ಲ ರೈಲ್ವೆ ಲೈನ್ ಇದೆ ಹೀಗಾಗಿ ಸಮಸ್ಯೆ ಬಗೆಹರಿದಿಲ್ಲ ಎಂದರು.
ಬೆಂಗಳೂರಿಗೆ ಅನೇಕ ವಿಷಯದಲ್ಲಿ ಖ್ಯಾತಿ ಇದೆ ಎಂದ ಸಿಎಂ ಬೊಮ್ಮಾಯಿ, ಬೆಂಗಳೂರು ಯೋಜನಾಬದ್ದವಾಗಿ ಬೆಳೆದಿಲ್ಲ ಎನ್ನುವುದು ಕೂಡ ಸತ್ಯ ಎಂದರು. ಕಳೆದ 8-10 ವರ್ಷದಲ್ಲಿ ಪೂರ್ತಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆಗ ಇಷ್ಟೆಲ್ಲಾ ಸವಾಲುಗಳು ಕೂಡ ಇರಲಿಲ್ಲ. ಆಗ ನಡೆದ ಕೆಲ ಯೋಜನೆಗಳು ಕಳಪೆಯದ್ದಾಗಿವೆ. ಹಿಂದಿನ ಸರ್ಕಾರಗಳು ಭ್ರಷ್ಟಾಚಾದಿಂದ ಕೂಡಿದ ಯೋಜನೆಗಳನ್ನು ರೂಪಿಸಿದ್ದು, ಬಿಬಿಎಂಪಿಯನ್ನು ತಮ್ಮಿಷ್ಟಕ್ಕೆ ನಡೆಸಿಕೊಂಡಿವೆ. ಇದೆಲ್ಲದಕ್ಕೆ ದಾಖಲೆ ಬೇಕಿದ್ದರೂ ನೀಡುತ್ತೇವೆ ಎಂದರು.
ಅಧಿಕಾರಿಗಳಿಗೆ ಕ್ಲಾಸ್
ಮಳೆ ಹಾನಿ ವೀಕ್ಷಣೆ, ಪರಿಶೀಲನೆ ಬಳಿಕ ಮಹದೇವಪುರ ಕ್ಷೇತ್ರದ ಪ್ರಮುಖರು, ಅಧಿಕಾರಿಗಳ ಜತೆ ಸಿಎಂ ಸಭೆ ನಡೆಸಿದರು. ಸೂಕ್ತವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ಬೊಮ್ಮಾಯಿ, ಇಂಜಿನಿಯರ್‌ಗಳು ಕಾರ್ಯಪ್ರವೃತ್ತನಾಗಬೇಕು. ಯಾವುದೇ ಒತ್ತುವರಿಯಾದರೂ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಸಮಸ್ಯೆ ಬಂದಾಗ ಮಾತ್ರ ಚರ್ಚೆ ಮಾಡುತ್ತೀರೇ ಹೊರತು ರಾಜಕಾಲುವೆ ಮೇಲೆ ರಸ್ತೆ ಮಾಡಿದ್ದಾರೆ, ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು ಎದ್ದು ನಿಂತಿವೆ ಎನ್ನುವುದನ್ನು ಗಮನಿಸಿಲ್ಲ. ಅಕ್ರಮವಾಗಿ ಬೇಕಾದ್ದನ್ನು ಮಾಡಿಸುತ್ತೀರ. ಮಳೆ ನೀರು ಕೊಯ್ಲು ಸರಿಯಾಗಿ ಆಗಿದೆ ಎಂದು ಸುಳ್ಳು ಹೇಳುತ್ತೀರ. ದೊಡ್ಡ ಬಿಲ್ಡರ್‌ಗಳಿಂದ ಒತ್ತುವರಿಗೆ ಯಾರೂ ಸಹಾಯ ಮಾಡಿದ್ದಾರೆ ೆನ್ನುವುದನ್ನು ತನಿಖೆ ನಡೆಸಿ ವರದಿ ಪಡೆಯುತ್ತೇನೆ ಎಂದರು.
ಮೋಹನದಾಸ್ ಪೈಗೆ ಲಿಂಬಾವಳಿ ಪ್ರತ್ಯುತ್ತರ
ಬೆಂಗಳೂರಿನ ಮೂಲಸೌಕರ್ಯ ಕುರಿತು ಟ್ವೀಟ್ ಮೂಲಕ ತಿಳಿಸಿರುವ ಉದ್ಯಮಿ ಮೋಹನದಾಸ್ ಪೈ ಕುರಿತು ಶಾಸಕ ಅರವಿಂದ ಲಿಂಬಾವಳಿ ಪರೋಕ್ಷವಾಗಿ ಟೀಕೆ ಮಾಡಿದರು. ನಮ್ಮಲ್ಲಿ ಕೆಲವರು ರಸ್ತೆಗುಂಡಿಗಳ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ನೋಡಿ, ಇಂತಹ ಸಮಸ್ಯೆ ಇದೆ ಎಂದು ಪ್ರಧಾನಿ ಮೋದಿಯವರಿಗೆ ಕೂಡ ಟ್ವೀಟ್ ಮಾಡುತ್ತಾರೆ. ಸಿಎಂ ಬಳಿ ಹೇಳಿದರೂ ಸಾಕು, ಸಮಸ್ಯೆ ಬಗೆಹರಿಯುತ್ತದೆ. ಅದರೆ ನೇರವಾಗಿ ಪ್ರಧಾನಿಗೆ ಹೇಳುವುದಕ್ಕೆ ಹೋಗುತ್ತಾರೆ. ಸಮಸ್ಯೆ ಬಗೆ ಹರಿಸಬೇಕು ಎಂಬ ಉದ್ದೇಶವಿದೆಯೋ ಅಥವಾ ಬೇರೆ ಉದ್ದೇಶ ಇದೆಯೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ | ರಾಜಧಾನಿ ಅವ್ಯವಸ್ಥೆ ಬಗ್ಗೆ ಮತ್ತೆ ಮೋಹನ್‌ದಾಸ್ ಪೈ ಗರಂ, ಬೆಂಗಳೂರು ಉಳಿಸಿ ಎಂದು ಮೋದಿಗೆ ಮನವಿ