ಬೆಂಗಳೂರು: ಬೆಂಗಳೂರಿನಲ್ಲಿ ಹೆಚ್ಚಿನ ಮಳೆಯಿಂದ ಉಂಟಾಗಿರುವ ಮಳೆ ಹಾನಿ ಚರ್ಚೆ ಸಂದರ್ಭದಲ್ಲಿ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿ ಕುರಿತು ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿದರು.
ಇದಕ್ಕೆ ಉಪಪ್ರಶ್ನೆ ಕೇಳಲು ಮುಂದಾದ ಕೃಷ್ಣಭೈರೇಗೌಡ, ಸುಮಾರು 800 ಕಿ.ಮೀ. ರಾಜಕಾಲುವೆ ಬೆಂಗಳೂರಿನಲ್ಲಿದೆ. ಇದರಲ್ಲಿ ಸುಮಾರು 400 ಕಿ.ಮೀ. ರಾಜಕಾಲುವೆಯನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಉಳಿದ 400 ಕಿ.ಮೀ. ಅಭಿವೃದ್ಧಿಗೆ 1,500 ಕೋಟಿ ರೂ. ನೀಡುವುದಾಗಿ ಈ ಹಿಂದೆ ಸಿಎಂ ಘೋಷಣೆ ಮಾಡಿದ್ದರು.
ಈ ಕಾಮಗಾರಿಗೆ ಟೆಂಡರ್ ಆಗುತ್ತಿದ್ದು, ಈ ಕಾಮಗಾರಿ ಮುಗಿದ ನಂತರವೂ ಇನ್ನೂ 300 ಕಿ.ಮೀ. ರಾಜಕಾಲುವೆ ಅಭಿವೃದ್ಧಿಗಾಗಿ ಉಳಿದುಕೊಳ್ಳುತ್ತದೆ. ಇದರ ಅಭಿವೃದ್ಧಿಗೆ ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕು ಎಂದರು.
ಕೃಷ್ಣ ಬೈರೇಗೌಡರ ಮಾತಿಗೆ ಉತ್ತರ ನೀಡಲು ಆರಂಭಿಸಿದ ಸಿಎಂ ಬೊಮ್ಮಾಯಿ, ಕೃಷ್ಣ ಬೈರೇಗೌಡರು ಮಾತನಾಡಿದರೆ ಅದರಲ್ಲಿ ರಾಜಕೀಯ ಭಾಷಣ ಇರಲೇಬೇಕು ಎಂದು ಕಾಲೆಳೆದರು. ಇದಕ್ಕೆ ಹಾಸ್ಯದ ಧಾಟಿಯಲ್ಲೇ ಉತ್ತರ ನೀಡಿದ ಕೃಷ್ಣ ಬೈರೇಗೌಡ, ರಾಜಕೀಯದಲ್ಲಿ ಅನೇಕ ಸಂದರ್ಭದಲ್ಲಿ ತಮ್ಮ ಮಾರ್ಗದರ್ಶನದಲ್ಲೇ ನಾನು ಮುಂದುವರಿಯುತ್ತಿದ್ದೇನೆ ಎಂದರು.
ಈ ಮಾತಿಗೆ ತಬ್ಬಿಬ್ಬಾದ ಸಿಎಂ ಬೊಮ್ಮಾಯಿ, ನಾವು ಮಾರ್ಗದರ್ಶನ ಮಾಡುವ ಹಂತವನ್ನು ಮೀರಿ ಕೃಷ್ಣ ಬೈರೇಗೌಡು ಬೆಳೆದಿದ್ದಾರೆ. ನೀವು ದೊಡ್ಡೋರಿದ್ದೀರಿ ಎಂದರು. ಮತ್ತೆ ಮಾತನಾಡಿದ ಕೃಷ್ಣ ಬೈರೇಗೌಡ, ತಾವು ಆಗಿಂದಾಗ್ಗೆ ಮಾರ್ಗದರ್ಶನ ನೀಡಿದ್ದೀರಿ ಎಂದರು. ಇದನ್ನು ಸಿಎಂ ಮತ್ತೆ ನಿರಾಕರಿಸಿದರು.
ಪ್ರಶ್ನೆ ಮುಂದುವರಿದಿರುವಾಗ, ಸಿದ್ದರಾಮಯ್ಯ ಅವರು ನಿಮ್ಮನ್ನು ತಯಾರಿ ಮಾಡಿ ಕಳಿಸಿದ್ದಾರೆ ಎಂದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ತಮ್ಮ ಮಾರ್ಗದರ್ಶನದಲ್ಲೇ ಕೃಷ್ಣ ಬೈರೇಗೌಡರೇ ತಿಳಿಸಿದ್ದಾರೆ. ಇದು ಆನ್ ರೆಕಾರ್ಡ್ ಎಂದರು. ಮತ್ತೆ ಕೃಷ್ಣ ಬೈರೇಗೌಡ ಮಾತನಾಡಿ, ನಾನು ಕೃಷಿ ಸಚಿವನಾಗಿದ್ದಾಗ ಗೌಪ್ಯವಾಗಿ ನನ್ನನ್ನು ಭೇಟಿ ಮಾಡಿ ಹಣ ಸಂಗ್ರಹದ ಬಗ್ಗೆ ಮಾರ್ಗದರ್ಶನ ಮಾಡಿದ್ದಿರೋ ಇಲ್ಲವೋ? ನೀವು ಮಾಡಿದ ಉಪಕಾರವನ್ನು ಸ್ಮರಣೆ ಮಾಡಲೇಬೇಕು ಎಂದರು.
ಅದೇಕೊ ಈ ವಿಚಾರ ರಾಜಕೀಯವಾಗಿ ಡ್ಯಾಮೇಜ್ ಮಾಡುವ ಹಂತಕ್ಕೆ ವಿಚಾರ ಹೋಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಮನಗಂಡರು. ಸ್ವತಃ ಸಿಎಂ ಮಾರ್ಗದರ್ಶನ ಮಾಡುತ್ತಾರೆ ಎಂದು ಪ್ರತಿಪಕ್ಷದ ಶಾಸಕರೊಬ್ಬರು ಹೇಳಿದಾಗ ತೊಂದರೆ ಆಗಬಹುದೆಂದು ಊಹಿಸಿ, ರಾಜ್ಯದ ಅನುಕೂಲಕ್ಕೆ ಹಾಗೆ ಮಾಡಿದ್ದೇನೆ ಹೋಗಲಿ ಬಿಡಪ್ಪ. ಕೃಷ್ಣ ಬೈರೇಗೌಡರು, ನಾವು ಮಾರ್ಗದರ್ಶನ ಮಾಡುವುದಕ್ಕಿಂತ ಹೆಚ್ಚಾಗಿ ಬೆಳೆದಿದ್ದಾರೆ ಎಂದು ಚರ್ಚೆಗೆ ಮುಕ್ತಾಯ ಹಾಡಿದರು.
ಸ್ಲೂಯಿಸ್ ಗೇಟ್ ಅಳವಡಿಕೆ
ಬೆಂಗಳೂರಿನ 160 ಕೆರೆಗಳಿಗೂ ಸ್ಲೂಯಿಸ್ ಗೇಟ್ ಅಳವಡಿಕೆಗೆ ಆದೇಶ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕೃಷ್ಣ ಬೈರೇಗೌಡರ ಪ್ರಶ್ನೆ ಕುರಿತು ಚರ್ಚೆ ನಡೆಯುವ ವೇಳೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿದರು. ಈಗ ನಡೆಯುತ್ತಿರುವ ರಾಜಕಾಲುವೆ ಒತ್ತುವರಿ ಕಾರ್ಯಾಚರಣೆ ನಿಲ್ಲುವುದು ಬೇಡ. ಎಲ್ಲ ಕೆರೆಗಳಿಗೂ ಸ್ಲೂಯಿಸ್ ಗೇಟ್ ಅಳವಡಿಸದೇ ಇದ್ದರೆ ಭಾರಿ ತೊಂದರೆ ಆಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಉಳಿದ 300 ಕಿ.ಮೀ. ರಾಜಕಾಲುವೆ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತದೆ. ಈಗಾಗಲೆ ಇರುವ ಮಾಸ್ಟರ್ ಪ್ಲಾನ್ ಜತೆಗೆ, ಮುಂದಿನ ಅವಶ್ಯಕತೆಗೆ ತಕ್ಕಂತೆ ಮತ್ತಷ್ಟು ಬದಲಾವಣೆ ಮಾಡಿಕೊಂಡು ಜಾರಿ ಮಾಡಲಾಗುತ್ತದೆ. ಮಹದೇವಪುರದ 69 ಕೆರೆಗಳವರೆಗೆ ಬೆಂಗಳೂರಿನ 160 ಕೆರೆಗಳಿಗೂ ಸ್ಲೂಯಿಸ್ ಗೇಟ್ ಅಳವಡಿಸಲು ಆದೇಶ ನೀಡಲಾಗಿದೆ ಎಂದರು.
ಇದನ್ನೂ ಓದಿ | ಮಹದೇವಪುರದಲ್ಲಿ ಇಂದೂ ಮುಂದುವರಿಯಲಿದೆ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ಒತ್ತುವರಿ?