ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಸಂದರ್ಭದಲ್ಲಿ ಅನೇಕ ಪ್ರದೇಶಗಳು ಜಲಾವೃತವಾಗುತ್ತವೆ ಎನ್ನುವ ಕುರಿತು ಮಾತನಾಡುತ್ತಿದ್ದ ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರಿಂದ, ಮಾತಿನ ಮಧ್ಯೆಯೇ ಮೈಲ್ ಪಡೆದುಕೊಂಡು ಸಿಎಂ ಬಸವರಾಜ ಬೊಮ್ಮಾಯಿ (CM Bommai) ಸ್ಪಷ್ಟನೆ ನೀಡಿದ್ದಾರೆ.
ಮಹದೇವಪುರ ಕ್ಷೇತ್ರದ ಗರುಡಾಚಾರಪಾಳ್ಯದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಮಾತನಾಡಿದ ಸಿಎಂ, ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜೊತೆಗೆ 110 ಹಳ್ಳಿಗಳಿಂದ ಕೂಡಿರುವ ಕ್ಷೇತ್ರ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಹೊಂದಿದೆ. ಸಹಜವಾಗಿ ದೇವಸ್ಥಾನಗಳು, ಸಮುದಾಯ ಭವನಗಳ ನಿರ್ಮಾಣದ ಅಗತ್ಯವಿದೆ. ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯವನ್ನು ಈ ದೇವಸ್ಥಾನದ ಅಭಿವೃದ್ಧಿಗೆ ಶಾಸಕ ಅರವಿಂದ ಲಿಂಬಾವಳಿ ಯವರೂ ಕಾರಣೀಭೂತರಾಗಿದ್ದಾರೆ. ಇದು ಮೊದಲು ಗ್ರಾಮವಾಗಿದ್ದು ಈಗ ನಗರದ ಮಧ್ಯಭಾಗವಾಗಿದೆ. ಗ್ರಾಮೀಣ ಸೊಗಡು ಹಾಗೂ ಆಧುನಿಕ ನಗರದ ಎಲ್ಲಾ ವ್ಯವಸ್ಥೆಗಳೂ ಇವೆ. ಗ್ರಾಮೀಣ ಪರಂಪರೆ, ಸಂಸ್ಕೃತಿ ಯನ್ನು ಬಿಡದೆ ನಡೆಸಿಕೊಂಡು ಬಂದಿರುವುದಕ್ಕೆ ಈ ಮಂಜುನಾಥ್ ದೇವಾಲಯವೇ ಸಾಕ್ಷಿ ಎಂದರು. ಕಾರ್ಯಕ್ರಮದಲ್ಲಿ ಸಚಿವ ಎಂ.ಟಿ. ಬಿ ನಾಗರಾಜ್, ಶಾಸಕ.ಅರವಿಂದ ಲಿಂಬಾವಳಿ ಸೇರಿ ಅನೇಕರು ಉಪಸ್ಥಿತರಿದ್ದರು.
ನಂತರ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಲಾರಂಭಿಸಿದರು. ಮಾತಿನ ನಡುವೆ ಬೆಂಗಳೂರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಮಳೆ ಬಂದಾಗಲೆಲ್ಲ ಅನೇಕ ಪ್ರದೇಶಗಳು ಮುಳುಗುತ್ತದೆ. ಆಗ ಮಾತ್ರ ಅಧಿಕಾರಿಗಳು ಹೋಗುತ್ತಾರೆ, ಶಾಶ್ವತ ಪರಿಹಾರವೇ ಇಲ್ಲ. ಅವರಿಗೆ ಒಮ್ಮೆ ಮಳೆ ಬಂದಾಗ ಗೊತ್ತಾಗುವುದಿಲ್ಲವೇ? ಶಾಶ್ವತ ಪರಿಹಾರವನ್ನು ಕೊಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಆದರೆ ಭರವಸೆಯನ್ನು ನಾವು ಒಪ್ಪುವುದಿಲ್ಲ ಎಂದು ಮಾತು ಮುಂದುವರಿಸಿದ್ದರು.
ಇದನ್ನೂ ಓದಿ : Karnataka Election: ಪ್ರಧಾನಿ ಮೋದಿ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಅಂದುಕೊಳ್ಳಬೇಕಿಲ್ಲ: ಸಿಎಂ ಬೊಮ್ಮಾಯಿ
ಈ ಸಮಯದಲ್ಲಿ ಸ್ವಲ್ಪ ಕಸಿವಿಸಿಗೊಂಡ ಸಿಎಂ ಬಸವರಾಜ ಬೊಮ್ಮಾಯಿ, ಸ್ವಾಮೀಜಿ ಅವರಿಂದ ಮೈಕ್ ಪಡೆದುಕೊಂಡರು. ಭರವಸೆಯಲ್ಲ. ಈಗಾಗಲೆ ಹಣ ನೀಡಿ ಕಾಮಗಾರಿ ನಡೆದಿದೆ. ನಾನು ಬರಿಯ ಭರವಸೆ ನೀಡುವುದಿಲ್ಲ. ಆದರೆ ಆಗುತ್ತೇನೆ ಎನ್ನುತ್ತೇನೆ, ಆಗದಿದ್ದರೆ ಆಗುವುದಿಲ್ಲ ಎನ್ನುತ್ತೇನೆ. ನನಗೆ ಯಾರದ್ದೂ ಭಯವಿಲ್ಲ. ನಾನು ಬೇರೆಯವರ ರೀತಿಯಲ್ಲ ಎಂದು ಸ್ಪಷ್ಟನೆ ನೀಡಿದರು.