ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಅಲ್ಲದೆ, ಪ್ರತಿ ವರ್ಷ ಮಳೆಯಿಂದ ಸಾಕಷ್ಟು ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಬುಧವಾರ (ಮೇ 22) ಬಿಬಿಎಂಪಿ, ಬಿಡಿಎ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ( BBMP, BDA and BWSSB) ಅಧಿಕಾರಿಗಳೊಂದಿಗೆ ಸಿಟಿ ರೌಂಡ್ಸ್ (CM City Rounds) ಮಾಡಿದ್ದು, ಮಳೆ ಹಾನಿ ಪ್ರದೇಶಗಳನ್ನು ಪರಿವೀಕ್ಷಿಸಿದರು. ಈ ವೇಳೆ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈಜಿಪುರ ಫ್ಲೈ ಓವರ್ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸಿಎಂ ಸಿದ್ದರಾಮಯ್ಯ, ಟೆಂಡರ್ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಈಜಿಪುರ ಫ್ಲೈ ಓವರ್ ಕಾಮಗಾರಿಯನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡರು. ಕಳೆದ ಆರು ವರ್ಷಗಳಿಂದ ಈ ಕಾಮಗಾರಿ ನನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ. 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್ ಕಾಮಗಾರಿ ವಿಳಂಬಕ್ಕೆ ಏನು ಕಾರಣ ಎಂದು ಪ್ರಶ್ನೆ ಮಾಡಿದರು.
ಆಗದಿದ್ದರೆ ಬೇರೆಯವರಿಗೆ ಗುತ್ತಿಗೆ ನೀಡಿ
ಆಗ ವಿವರಣೆ ನೀಡಿದ ಅಧಿಕಾರಿಗಳು, ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿನಾಂಕ 20-11-2023 ರಂದು BSCPL ಎಂಬ ಕಂಪೆನಿಗೆ ಕಾರ್ಯಾದೇಶ ನೀಡಲಾಗಿತ್ತು. ಟೆಂಡರ್ ಷರತ್ತಿನ ಪ್ರಕಾರ 15 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ, ಕಳೆದ ಆರು ತಿಂಗಳಲ್ಲಿ ಕೇವಲ ಶೇ. 4ರಿಂದ 6 ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್ ನೀಡಿ, ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯ ಹಣ ಕೊಟ್ಟಿದ್ದರೂ ಆರು ತಿಂಗಳಲ್ಲಿ ಕೇವಲ 4% ಕಾಮಗಾರಿ ಮಾಡಿದ್ದೀಯಲ್ಲಾ, ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಪ್ರಜ್ಞೆ ಬೇಡವೇ? ನಿಮ್ಮ ಕೈಯಲ್ಲಿ ಆಗದಿದ್ದರೆ ಜಾಗ ಖಾಲಿ ಮಾಡಿ ಎಂದು ಕಂಪನಿ ಪ್ರತಿನಿಧಿಗಳಿಗೆ ಸಿಎಂ ಸಿದ್ದರಾಮಯ್ಯ ಇದೇ ವೇಳೆ ಎಚ್ಚರಿಕೆ ನೀಡಿದರು.
ಸಿಲ್ಕ್ ಬೋರ್ಡ್ ಸಮಸ್ಯೆ ಪರಿಹಾರಕ್ಕೆ ಪರಿಶೀಲನೆ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸೂರು ಮುಖ್ಯ ರಸ್ತೆ ಬಳಿಯ ಸಿಲ್ಕ್ ಬೋರ್ಡ್ ಬಳಿ ಬಂದ ಸಿಎಂ ಸಿದ್ದರಾಮಯ್ಯ ಅವರು ಸ್ಥಳ ಪರಿಶೀಲನೆ ನಡೆಸಿದರು. ಮೆಟ್ರೋ ಕಾಮಗಾರಿಯಿಂದಾಗಿ ಚರಂಡಿ ವಿಸ್ತೀರ್ಣ ಕಡಿಮೆಯಾಗಿದೆ. ಹೀಗಾಗಿ ಮಳೆ ಹೆಚ್ಚಾಗಿ ಬಂದಾಗ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂಬುದನ್ನು ಗಮನಕ್ಕೆ ತರಲಾಯಿತು.
ಕ್ರಿಯಾ ಯೋಜನೆ ರೂಪಿಸಿ
ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು 4.5 ಕೋಟಿ ಕಾಮಗಾರಿ ಅಗತ್ಯವಿದೆ ಹಾಗೂ ಸರ್ಕಾರದ ಉನ್ನತಾಧಿಕಾರ ಸಮಿತಿಯ ಅನುಮತಿ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿವರಿಸಿದರು. ಪರ್ಯಾಯ ವ್ಯವಸ್ಥೆಯ ಕಾಮಗಾರಿ ಕೈಗೊಳ್ಳಲು ಸಮ್ಮತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಉನ್ನತಾಧಿಕಾರ ಸಮಿತಿ ಸಭೆಯ ಮುಂದೆ ಈ ವಿಷಯವನ್ನು ಮಂಡಿಸಲು ಸೂಚಿಸಿದರು. ಜತೆಗೆ ಈ ಯೋಜನೆಯನ್ನು ಮುಂದಿನ 10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದರು. ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: CM City Rounds: ವಿಜಯನಗರ ರಾಜಕಾಲುವೆ; ಈ ವರ್ಷದೊಳಗೆ ಪರಿಹರಿಸದಿದ್ದರೆ ಮುಖ್ಯ ಎಂಜಿನಿಯರ್ ಸಸ್ಪೆಂಡ್: ಸಿಎಂ ವಾರ್ನಿಂಗ್
ಮಡಿವಾಳ ಕೆರೆ ರಾಜಕಾಲುವೆ ನೀರನ್ನು ಪಂಪ್ ಮಾಡಿ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೋಡಿ ಚಿಕ್ಕನಹಳ್ಳಿ ಬಳಿ ಇರುವ ರಾಜಕಾಲುವೆಯಿಂದ ನೀರು ಹೊರಗೆ ಹರಿದು, ಮನೆಗಳಿಗೆ ನುಗ್ಗುವ ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಯಿತು. ಆಗ ಮಾತನಾಡಿದ ಸಿಎಂ, ಇಲ್ಲಿನ ಪ್ರವಾಹ ನಿಯಂತ್ರಣಕ್ಕೆ ಜಾಕ್‌ವೆಲ್ ಮೂಲಕ ರಾಜಕಾಲುವೆಯಿಂದ ಹೊರ ಬರುವ ನೀರನ್ನು ಪಂಪ್ ಮಾಡಿ ಮಡಿವಾಳ ಕೆರೆಗೆ ಹರಿಸಲು ಸೂಚನೆ ನೀಡಿದರು. 4.3 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸಲು ಸೂಚಿಸಿದರು.