ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಅಲ್ಲದೆ, ಪ್ರತಿ ವರ್ಷ ಮಳೆಯಿಂದ ಸಾಕಷ್ಟು ನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಬುಧವಾರ (ಮೇ 22) ಬಿಬಿಎಂಪಿ, ಬಿಡಿಎ ಹಾಗೂ ಬಿಡಬ್ಲ್ಯೂಎಸ್‌ಎಸ್‌ಬಿ ( BBMP, BDA and BWSSB) ಅಧಿಕಾರಿಗಳೊಂದಿಗೆ ಸಿಟಿ ರೌಂಡ್ಸ್ (CM City Rounds) ಮಾಡಿದ್ದು, ಮಳೆ ಹಾನಿ ಪ್ರದೇಶಗಳನ್ನು ಪರಿವೀಕ್ಷಿಸಿದರು.
ಸಿಟಿ ರೌಂಡ್ ಸ್ಪಾಟ್-1
- ಸ್ಥಳ: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
- ವಿಧಾನಸಭಾ ಕ್ಷೇತ್ರ: ವಿಜಯನಗರ
- ಯಾವ ವಾರ್ಡ್: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್
- ಸಮಸ್ಯೆ ಏನು?: ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಏನು?
ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಿದ್ದರಾಮಯ್ಯ ಅವರಿಗೆ ವಿವರಿಸಿದರು. ಆಗ ಸಿಎಂ ಪ್ರತಿಕ್ರಿಯೆ ನೀಡಿ, ಪ್ರವಾಹ ನಿಯಂತ್ರಣ ಕಾಮಗಾರಿಗೆ 11.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಈ ರಾಜಕಾಲುವೆಗೆ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಸೂಚಿಸಿದರು. ಸಮಸ್ಯೆ ಬಗೆಹರಿಸಲು ಕೊಟ್ಟ ಕಾಲ ಮಿತಿಯನ್ನು ಮಳೆಗಾಲದೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಎಚ್ಚರಿಕೆ: ಈ ವರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು. ಇಲ್ಲದಿದ್ದರೆ ಅಮಾನತು ಮಾಡುವುದಾಗಿ ಚೀಫ್ ಎಂಜಿನಿಯರ್‌ಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಸಿಟಿ ರೌಂಡ್ ಸ್ಪಾಟ್ – 2
- ಸ್ಥಳ: ನಾಯಂಡಹಳ್ಳಿ
- ವಿಧಾನಸಭಾ ಕ್ಷೇತ್ರ: ವಿಜಯನಗರ
- ಯಾವ ವಾರ್ಡ್: ನಾಯಂಡಹಳ್ಳಿ ವಾರ್ಡ್
- ಸಮಸ್ಯೆ ಏನು?: ರಾಜಕಾಲುವೆಯಲ್ಲಿ ಮಳೆಗಾಲ ಪ್ರವಾಹ ಉಂಟಾಗುತ್ತಿದೆ. ಫ್ಲೈಓವರ್ ನಿರ್ಮಿಸಿದ್ದರಿಂದ ರಾಜಕಾಲುವೆಯ ವಿಸ್ತಾರ ಕಡಿಮೆ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಏನು?
ನೀರು ಸರಾಗವಾಗಿ ಹರಿದುಹೋಗಲು ಹೆಚ್ಚುವರಿ ಕಾಲುವೆ ಅಗತ್ಯವಿದೆ. ಏಳುಕೋಟಿ ವೆಚ್ಚದ ಕಾಮಗಾರಿ ಅನುಮೋದನೆಯಾಗಿದ್ದು, ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದನೆ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ವಿವರಿಸಿದರು. ಅದರಂತೆ ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದನೆ ನೀಡಿ, ಕೂಡಲೇ ಬಿಬಿಎಂಪಿಯು ಕಾಮಗಾರಿ ಕೈಗೆತ್ತಿಕೊಳ್ಳಲು ಅನುವು ಮಾಡುವಂತೆ ಎರಡೂ ಇಲಾಖೆಗಳಿಗೆ ಸೂಚನೆ ನೀಡಿದರು.
ಕಾಲಮಿತಿ: ಈ ವರ್ಷದೊಳಗೆ ಕಾಮಗಾರಿ ಅಂತ್ಯವಾಗಬೇಕು
ಸಿಟಿ ರೌಂಡ್ ಸ್ಪಾಟ್: ಬಿಟಿಎಂ ಮೆಟ್ರೋ ಸ್ಟೇಷನ್
- ವಾರ್ಡ್- ಬಿಟಿಎಂ ಲೇಔಟ್
- ವಿಧಾನಸಭೆ ಕ್ಷೇತ್ರ: ಬಿಟಿಎಂ ಲೇಔಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಸಂಚಾರ, ಸ್ಥಳ ಪರಿಶೀಲನೆ ವೇಳೆಗೆ ಬಿಟಿಎಂ ಮೆಟ್ರೋ ಸ್ಟೇಷನ್‌ಗೆ ಭೇಟಿ ನೀಡಿ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್ ಡೆಕ್ಕರ್ – 2 ಟಯರ್ ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲಿಸಿದರು. ಮೂರು ಕಿ.ಮೀ. ಉದ್ದದ ಈ ವ್ಯವಸ್ಥೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ಸಂಚಾರ ದಟ್ಟಣೆ ನಿವಾರಣೆಗೆ ಈ ಡಬ್ಬಲ್ ಡೆಕ್ಕರ್ ಮಾದರಿಯನ್ನು ನಗರದ ಇತರ ಭಾಗಗಳಲ್ಲಿಯೂ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಗೆ ಪರಿಹಾರ ರೂಪವಾಗಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
ಇದಲ್ಲದೆ, ಸುಗಮ ಸಂಚಾರಕ್ಕಾಗಿ, ಬಿಟಿಎಂ ನಿಂದ ಬನಶಂಕರಿ ಕಡೆಗೆ ಹೋಗುವಾಗ, ರಾಘವೇಂದ್ರಸ್ವಾಮಿ ಟೆಂಪಲ್ ಸರ್ಕಲ್, ಜಯನಗರ 5ನೇ ಬ್ಲಾಕ್‌ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇಲ್ಲಿ ಅಂಡರ್ ಪಾಸ್ ನಿರ್ಮಿಸಲು ಸೂಚಿಸಿದರು.
ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ. ಅನಾಹುತ ಆಗ್ಲಿ ಅಂತನಾ: ಸಿಎಂ ಗರಂ
ಸಿಟಿ ರೌಂಡ್ಸ್ ವೇಳೆ ಸಿಎಂ ಕಣ್ಣಿಗೆ ರಸ್ತೆ ಬದಿ ಇದ್ದ ಒಣ ಮರಗಳು ಕಣ್ಣಿಗೆ ಬಿದ್ದವು. ಈ ವೇಳೆ ಗರಂ ಆದ ಸಿಎಂ ಸಿದ್ದರಾಮಯ್ಯ, ಒಣಗಿದ ಮರ ಯಾಕೆ ಬಿಟ್ಟುಕೊಂಡಿದ್ದೀರಿ? ಅನಾಹುತ ಆಗ್ಲಿ ಅಂತನಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಬನಶಂಕರಿ 2ನೇ ಹಂತದ 100 ಅಡಿ (2nd stage 100 ft.) ರಸ್ತೆಯ ಒಣಗಿದ ಮರಗಳನ್ನು ತೆರವುಗೊಳಿಸಬೇಕು. ನಗರದಾದ್ಯಂತ ಇರುವ ಒಣ ಮರ, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು, ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು, ಪದ್ಮನಾಭನಗರ ಫ್ಲೈಓವರ್ ಬಳಿ ಹಾನಿಯಾಗಿರುವ ಫುಟ್ ಪಾತ್ ಅನ್ನು ಶೀರ್ಘವಾಗಿ ದುರಸ್ತಿಗೊಳಿಸಲು ಹಾಗೂ ಮೆಟ್ರೋ ಮತ್ತು ಫ್ಲೈ ಓವರ್ ಕಾಮಗಾರಿಯಿಂದಾಗಿ ಅಲ್ಲಲ್ಲಿ ಹಾಕಲಾಗಿದ್ದ ಡೆಬ್ರಿಸ್‌ಗಳನ್ನು ಆಗಿಂದಾಗಲೇ ತೆರವುಗೊಳಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಇದನ್ನೂ ಓದಿ: Phone tapping: ಗೃಹ ಸಚಿವರಿಗೆ ಅಶೋಕ್ ರೈಟಿಂಗ್‌ನಲ್ಲಿ ಕಂಪ್ಲೇಂಟ್ ಕೊಡಲಿ; ಫೋನ್ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು
ಇಂದು ಎಲ್ಲೆಲ್ಲಿ ಸಿಎಂ, ಡಿಸಿಎಂ ಸಿಟಿ ರೌಂಡ್ಸ್?
- ಮೈಸೂರು ರಸ್ತೆ – ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ರಾಜಕಾಲುವೆ ಪರಿಶೀಲನೆ..
- ಮೈಸೂರು ರಸ್ತೆ – ನಾಯಂಡಹಳ್ಳಿ ಜಂಕ್ಷನ್ ಬಳಿಯ ರಾಜಕಾಲುವೆ ಪರಿಶೀಲನೆ.
- ಜೆಪಿ ನಗರ – ರಾಗಿಗುಡ್ಡ ಜಂಕ್ಷನ್ ವೀಕ್ಷಣೆ
- ಕೊಡಿಚಿಕ್ಕನಹಳ್ಳಿ ರಸ್ತೆ ಅನುಗ್ರಹ ಲೇಔಟ್ ನಲ್ಲಿರುವ ರಾಜಕಾಲುವೆ ಪರಿಶೀಲನೆ
- ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ರಾಜಕಾಲುವೆ ಕಾಮಗಾರಿ ಪರಿಶೀಲನೆ
- ಎಚ್ಎಸ್ಆರ್ ಲೇಔಟ್ ರಾಜಕಾಲುವೆ ಕಾಮಗಾರಿ ಪರಿಶೀಲನೆ
- ಆಗರ ಕೆರೆ – ನಿರ್ಮಾಣ ಹಂತದಲ್ಲಿರುವ ರಾಜಕಾಲುವೆ ಪರಿಶೀಲನೆ
- ಬೆಳ್ಳಂದೂರು ಕೆರೆ ಕೊಡಿ ಸೇತುವೆ ವೀಕ್ಷಣೆ
- ಎಚ್ಎಎಲ್ ಸಮೀಪದ ಯಮಲೂರು ರಸ್ತೆಯಲ್ಲಿರುವ ರಾಜಕಾಲುವೆ ವೀಕ್ಷಣೆ