Site icon Vistara News

CM Ibrahim : ಯಾರನ್ನು ಕೇಳಿ ಮೈತ್ರಿ ಮಾಡಿದ್ರಿ ಎಂದ ಸಿಎಂ ಇಬ್ರಾಹಿಂ; ಅ. 16ರಂದು ಜೆಡಿಎಸ್‌ಗೆ ರಾಜೀನಾಮೆ?

CM ibrahim

#image_title

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನಡೆದಿರುವ ಚುನಾವಣಾ ಮೈತ್ರಿಯ (BJP-JDS Alliance) ವಿರುದ್ಧ ಜೆಡಿಎಸ್‌ ರಾಜ್ಯಾದ್ಯಕ್ಷ ಸಿಎಂ. ಇಬ್ರಾಹಿಂ (CM Ibrahim) ಅಬ್ಬರಿಸಿದ್ದಾರೆ. ʻʻಇಬ್ಬರು ಕೂತು ಮಾತನಾಡಿದರೆ ಮೈತ್ರಿ ಆಗಲ್ಲ. ನಾನು ರಾಜ್ಯಾಧ್ಯಕ್ಷನಿದ್ದೇನೆ. ಚುನಾಯಿತ ಆಧ್ಯಕ್ಷನಿದ್ದೇನೆʼʼ ಎಂದು ಗುಡುಗಿದ ಅವರು ಮೈತ್ರಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಅಕ್ಟೋಬರ್‌ 16ರಂದು ಕರೆದಿರುವ ಸಮಾನ ಮನಸ್ಕರ ಸಭೆಯಲ್ಲಿ (Meeting on October 16) ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಪ್ರಕಟಿಸಿದರು. ಅಂದು ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ (CM Ibrahim may Resign to JDS) ನೀಡುವ ಸಾಧ್ಯತೆ ದಟ್ಟವಾಗಿದೆ.

ಮೈತ್ರಿಯ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕರೆ ಮಾಡಿದ್ದರೂ ತಾನು ಸ್ವೀಕರಿಸಿಲ್ಲ. ಬೇರೆಯವರ ಬಳಿ ಮಾತನಾಡಿಸಲು ಯತ್ನಿಸಿದರೂ ಪ್ರತಿಕ್ರಿಯಿಸಿಲ್ಲ. ಅಕ್ಟೋಬರ್‌ 16ರ ಬಳಿಕ ಮಾತನಡುವುದಾಗಿ ಹೇಳಿದ್ದೇನೆ ಎಂದು ಸಿಎಂ ಇಬ್ರಾಹಿಂ ಶನಿವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಮೂರು ಸೀಟಿಗಾಗಿ ಬೇರೆಯವರ ಮನೆಗೆ ಹೋಗಬೇಕಾ?

ʻʻದೇವೇಗೌಡರು ದೇಶದ ಟಾಲೆಸ್ಟ್ ಲೀಡರ್. ಅವರ ಮನೆಗೆ ರಾಷ್ಟ್ರಪತಿ ಬರ್ತಾರೆ. ಅಂಥವರು ಮೂರು ಸೀಟ್‌ಗಾಗಿ ಬೇರೆಯವರ ಮನೆಗೆ ಹೋಗಬೇಕಾ?ʼʼ ಎಂದು ಪ್ರಶ್ನಿಸಿದ ಇಬ್ರಾಹಿಂ ಅವರು ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮೈತ್ರಿಯೇ ಆಗಿಲ್ಲ ಎಂದರು.

CM Ibrahim as JDS President

ಎರಡು ಪಕ್ಷದ ನಡುವೆ ಮೈತ್ರಿಯೇ ಆಗಿಲ್ಲ ಎಂದ ಇಬ್ರಾಹಿಂ

ʻʻಎರಡು ಪಕ್ಷಗಳ ನಡುವೆ ಮೈತ್ರಿ ಆಗಿಯೇ ಇಲ್ಲ. ನಾನು ರಾಜ್ಯಾಧ್ಯಕ್ಷ ಆಗಿದ್ದೇನೆ. ನನ್ನನ್ನೇ ಮೈತ್ರಿ ಸಭೆಗೆ ಕರೆದಿಲ್ಲ. ನನ್ನ ಬಳಿ ಮಾತನಾಡಿಲ್ಲ. ಅದು ಹೇಗೆ ಮೈತ್ರಿ ಆಗುತ್ತದೆ? ಇವರ ಸಿದ್ಧಾಂತ ಅವರು ಒಪ್ಪಿಲ್ಲ.. ಅವರ ಸಿದ್ದಾಂತ ಇವರು ಒಪ್ಪಿಲ್ಲ ಅದು ಹೇಗೆ ಮೈತ್ರಿ ಆಗುತ್ತೆ?ʼʼ ಎಂದು ಪ್ರಶ್ನಿಸಿದ ಅವರು, ಈ ಮೈತ್ರಿಗೆ ಕಾರ್ಯಕರ್ತರ ಬೇಸರವಿದೆ ಎಂದು ಹೇಳಿದರು.

ʻʻನಾನು ಕುಮಾರಸ್ವಾಮಿ ಅವರ ಜತೆ ಇಲ್ಲಿಯವರೆಗೂ ಮಾತನಾಡಿಲ್ಲ. ಕುಮಾರಸ್ವಾಮಿ ಅವರು ನನಗೆ ಸಹೋದರ, ದೇವೇಗೌಡರು ತಂದೆ ಸಮಾನ. ಆದರೂ ದೆಹಲಿಗೆ ಹೋದಾಗಲೂ ನನಗೆ ಒಂದು ಮಾತು ಹೇಳಿಲ್ಲ. ಏನು ಚರ್ಚೆ ಮಾಡಿದ್ರಿ ಅದು ಹೇಳಿಲ್ಲ. ಪಕ್ಷದ ಅಧ್ಯಕ್ಷನಿಗೇ ಹೇಳಿಲ್ಲʼʼ ಎಂದು ಅವರು ನುಡಿದರು.

ಮೈತ್ರಿ ಪಕ್ಷದ ತೀರ್ಮಾನ ಅಂತ ಕರೆಯಲು ಪಕ್ಷದ ಮಟ್ಟದಲ್ಲಿ ಚರ್ಚೆ ಆಗಬೇಕು. ಪಕ್ಷದ ಮಟ್ಟದಲ್ಲಿ ಚರ್ಚೆ ಆಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಸಭೆ ನಡೆಸಿ ತೀರ್ಮಾನ ಅಂದ್ರಿ. ನನ್ನ ಬಳಿಯೇ ಮಾತನಾಡದೆ ಯಾವ ಕೋರ್‌ ಕಮಿಟಿ ಎಂದು ಕೇಳಿದರು ಇಬ್ರಾಹಿಂ.

ʻʻನಾನು ಜನತಾದಳ ಸೇರಲು ದೇವೇಗೌಡರು ಕಾರಣ. ಸೆಕ್ಯುಲರ್ ಸಿದ್ದಾಂತ ಅಂತ ಹೋದೆ. ಅಂದು ಪರಿಷತ್ ಸದಸ್ಯ ಸ್ಥಾನ ಬಿಟ್ಟು ಹೋದೆ. ಈಗ ಪಕ್ಷದ ಅಧ್ಯಕ್ಷನಾಗಿದ್ದೇನೆ. ಮುಂದೇನು ಎನ್ನುವುದು ಅಕ್ಟೋಬರ್‌ 16ರಂದು ತೀರ್ಮಾನ ಆಗಲಿದೆʼʼ ಎಂದು ಹೇಳಿದರು ಇಬ್ರಾಹಿಂ.

ಇದನ್ನೂ ಓದಿ: BJP-JDS Alliance : ಜೆಡಿಎಸ್‌ನ ಮುಸ್ಲಿಂ ನಾಯಕರು ಅತಂತ್ರ; ಸಿಎಂ ಇಬ್ರಾಹಿಂಗೆ ಮತ್ತೆ ಕಾಂಗ್ರೆಸ್‌ ಪಾದವೇ ಗತಿ?

ಮದುವೆ ಅಂದ್ರೆ ಷರತ್ತು ಇರಬೇಕಾಗಲ್ಲ!

ನೀವು ಮೈತ್ರಿ ಮಾಡಿಕೊಂಡಾಗ ಬಿಜೆಪಿಯ 25 ಸಂಸದರು ಏನು ಮಾಡ್ತಿದ್ದರು. ಮಹದಾಯಿ, ಕಾವೇರಿ ನಿಲುವಿನ ಬಗ್ಗೆ ಚರ್ಚೆ ಆಯಿತಾ? ಮೈತ್ರಿ, ಮದುವೆ ಅಂತೀರಲ್ಲಾ? ಮದುವೆ ಅಂದ್ರೆ ಷರತ್ತು ಏನು.? ಯಡಿಯೂರಪ್ಪ ಅವರನ್ನೇ ಮೈತ್ರಿಗೆ ಕರೆದಿಲ್ಲ. ಯಾವ ರೀತಿಯ ಮೈತ್ರಿ ಇದು ಎಂದು ಕೇಳಿದರು ಸಿ.ಎಂ. ಇಬ್ರಾಹಿಂ.

ಮುಸ್ಲಿಮರು ಮತ ಹಾಕಿಲ್ಲ ಎನ್ನುವುದು ಸರಿಯಲ್ಲ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಮುಸ್ಲಿಮರು ಮತ ಹಾಕಿಲ್ಲ ಎನ್ನುವುದು ಸುಳ್ಳು. ನಿಜವೆಂದರೆ ಶೇಕಡಾ 20ರಷ್ಟು ಮುಸ್ಲಿಂ ಮತ ಬಂದಿದೆ. ನಿಜವಾಗಿ ಆಗಿದ್ದು ಏನೆಂದರೆ ಒಕ್ಕಲಿಗರ ಮತ ಕಾಂಗ್ರೆಸ್ ಗೆ ಹೋಗಿದೆ ಎಂದು ವಿವರಿಸಿದರು ಇಬ್ರಾಹಿಂ.

ರಾಮನಗರದಲ್ಲೂ ಮುಸ್ಲಿಮರು ನಿಖಿಲ್‌ಗೆ ಮತ ಹಾಕಿದ್ದಾರೆ. ಆದರೆ, ಒಕ್ಕಲಿಗರ ವೋಟ್ ಕಾಂಗ್ರೆಸ್ ಗೆ ಟ್ರಾನ್ಸಫರ್ ಆಗಿದೆ. ಹೀಗಾಗಿ ಅಲ್ಲಿ ಕಾಂಗ್ರೆಸ್‌ ಗೆಲ್ಲಲು ಕಾರಣವಾಯಿತು. ನಿಜವಾಗಿ ಆಗುತ್ತಿರುವುದು ಏನೆಂದೆ ಒಕ್ಕಲಿಗರು ಜೆಡಿಎಸ್‌ನಿಂದ ದೂರವಾಗುತ್ತಿದ್ದಾರೆ ಎಂದು ಇಬ್ರಾಹಿಂ ನುಡಿದರು.

ದೇವೇಗೌಡರ ಜತೆ ಒಂದು ಸುತ್ತು ಚರ್ಚೆ

ಮೈತ್ರಿ ವಿಚಾರದಲ್ಲಿ ದೇವೇಗೌಡರ ಜತೆ ಮಾತನಾಡುವುದಾಗಿ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಒಪ್ಪದಿದ್ದರೆ ಮುಂದಿನ ನಡೆ ಏನು ಎನ್ನುವುದು ತೀರ್ಮಾನವಾಗುತ್ತದೆ ಎಂದು ಹೇಳಿದರು ಸಿ.ಎಂ. ಇಬ್ರಾಹಿಂ. ಈ ಮೈತ್ರಿ ಸರಿ ಇದೆಯಾ? ಎನ್ನುವುದೇ ಅ. 16ರ ಸಭೆಯ ಅಜೆಂಡಾ ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಕರೆದ ಸಭೆಗೆ ಹೋಗುತ್ತಿಲ್ಲ

ಎಚ್‌.ಡಿ ಕುಮಾರಸ್ವಾಮಿ ಅವರು ಅ. 1ರಂದು ಸಭೆ ಕರೆದಿದ್ದಾರೆ. ಆ ಸಭೆಗೆ ನಾನು ಹೋಗುವುದಿಲ್ಲ ಎಂದು ಸಿ.ಎಂ. ಇಬ್ರಾಹಿಂ ಸ್ಪಷ್ಟಪಡಿಸಿದರು.

ʻʻಮೈತ್ರಿ ವಿಚಾರದಲ್ಲಿ ನೀವು ನಿಲುವು ಬದಲಾಯಿಸದಿದ್ದರೆ ಕಾಲವೇ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಧರ್ಮವನ್ನು ನೀನು ಕಾಪಾಡು. ಧರ್ಮ ನಿನ್ನನ್ನು ಕಾಪಾಡುತ್ತೆ ಅಂದಿದ್ದಾರೆ ಪ್ರಾಜ್ಞರು. ಅಂಬೇಡ್ಕರ್ ಮತ್ತು ಬಸವ ತತ್ವ ಪಾಲನೆ ಮಾಡುವವನು ನಾನುʼʼ ಎಂದು ಹೇಳಿದರು.

Exit mobile version