ಬೆಂಗಳೂರು: ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಮತ್ತು ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ನೂತನ ತಾಯಿ-ಮಕ್ಕಳ ಆಸ್ಪತ್ರೆ, ಬೋಧನಾ ಕಟ್ಟಡ, ಶವಾಗಾರ ಕಟ್ಟಡ, ನೂತನ ಮಾದರಿ ಅಡುಗೆ ಮನೆ, ಲಾಂಡ್ರಿ ಕಟ್ಟಡ, ವೈದ್ಯಕೀಯ ಘನ ತ್ಯಾಜ್ಯ ಘಟಕದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲೇ ಜಯದೇವ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿಗಳು, ಇನ್ನು ಮುಂದೆ ದಿನದ 24 ಗಂಟೆ ಜಯದೇವದಲ್ಲಿ ಎಲ್ಲಾ ರೀತಿಯ ಆರೋಗ್ಯ ಸೇವೆ ಒದಗಿಸಬೇಕು. ಇದಕ್ಕೆ ತಕ್ಕ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಇದನ್ನೂ ಓದಿ: Bengaluru Power Cut: ಆ.28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆ ವೈದ್ಯರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ. ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಗುಣಮಟ್ಟದಲ್ಲಿರಬೇಕು ಎನ್ನುವುದು ಸರ್ಕಾರದ ಗುರಿ ಎಂದು ತಿಳಿಸಿದರು.
ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟ ಮತ್ತು ಶುಚಿತ್ವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಬರಬೇಕು. ಆಗ ಮಾತ್ರ ಸರ್ಕಾರ ಕೊಡುವ ಅನುದಾನಕ್ಕೆ ಅರ್ಥ ಬರುತ್ತದೆ ಎಂದರು.
ಅಪಘಾತ ವಲಯಗಳ ಹತ್ತಿರದಲ್ಲೇ ಟ್ರಾಮಾ ಸೆಂಟರ್‌ಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಗಾಯಾಳುಗಳ ಜೀವ ಉಳಿಸಲು ಗೋಲ್ಡನ್ ಹವರ್ ಬಹಳ ಮುಖ್ಯ ಎನ್ನುವುದನ್ನು ಪರಿಗಣಿಸಿ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.
ನಾನು ಬಜೆಟ್‌ನಲ್ಲಿ ಹೇಳಿದ್ದನ್ನು ಜಾರಿ ಮಾಡಿ
ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಜವಾಬ್ದಾರಿಯಿಂದ ಜಾರಿ ಮಾಡಿ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ವೇದಿಕೆಯಿಂದಲೇ ಸಿಎಂ ಸೂಚನೆ ನೀಡಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂದಿಟ್ಟ ಬೇಡಿಕೆಗಳನ್ನು ಅನುಮೋದಿಸಿ ಹಣ ಬಿಡುಗಡೆ ಮಾಡಿದ್ದೇನೆ. ನೂತನ ಆಸ್ಪತ್ರೆ ಕಟ್ಟಡವನ್ನೂ ನಾನೇ ಉದ್ಘಾಟಿಸುತ್ತೇನೆ. ಬೇಗ ಕೆಲಸ ಮುಗಿಸಿ ಎಂದು ಸಚಿವರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Kannada New Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರ ನ.15ಕ್ಕೆ ರಿಲೀಸ್
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.