ಬೆಂಗಳೂರು: ರಾಜಧಾನಿಯ 30ಕ್ಕೂ ಅಧಿಕ ಶಾಲೆಗಳಿಗೆ Kharijjitas@bebble.com ಎಂಬ ಮೇಲ್ ಐಡಿಯಿಂದ ಬಂದಿರುವ ಉಗ್ರರ ಬೆದರಿಕೆ ಪತ್ರದ (Bomb threat) ಬಗ್ಗೆ ಸಮಗ್ರ ತನಿಖೆಗೆ ಆದೇಶ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಬೆಳಗ್ಗೆ ಶಾಲೆಗಳು ತೆರೆದುಕೊಳ್ಳುತ್ತಿದ್ದಂತೆಯೇ ಈ ಮೇಲ್ ಪತ್ರ ಬಂದಿರುವುದು ಗೊತ್ತಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪತ್ರದಲ್ಲಿ ಉಲ್ಲೇಖ ಮಾಡಿರುವ ಮಾದರಿಯಲ್ಲಿ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಆತಂಕ ಕಡಿಮೆಯಾಯಿತಾದರೂ ಪತ್ರದಲ್ಲಿರುವ ಬರೆದಿರುವ ಅಂಶಗಳು ಭಯ ಹುಟ್ಟಿಸುವಂತಿವೆ.
ಈ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪೊಲೀಸರು ಪ್ರಾಥಮಿಕ ವರದಿ ಕೊಟ್ಟಿದ್ದಾರೆ. ಯಾರು ಆ ರೀತಿ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ. ಈ ರೀತಿ ಯಾರೂ ಕೂಡ ಮಾಡಬಾರದುʼʼ ಎಂದು ಹೇಳಿದರು.
ʻʻಪೋಷಕರು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಎಲ್ಲ ಶಾಲೆಗಳಿಗೂ ಬಿಗಿ ಭದ್ರತೆ ಒದಗಿಸಲು ಸೂಚಿಸಿದ್ದೇನೆʼʼ ಎಂದು ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ ಹೇಳಿದರು.
ದೇವಸ್ಥಾನಗಳಿಗೂ ಬಾಂಬ್ ಹಾಕುವ ಬೆದರಿಕೆ ಹಾಕಲಾಗಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದಾಗ, ಬಾಂಬ್ ಬೆದರಿಕೆ ಬಗ್ಗೆ ತನಿಖೆ ಮಾಡೋಕೆ ಪೊಲೀಸ್ ಇಲಾಖೆಗೆ ಹೇಳಿದ್ದೇನೆ. ಎಲ್ಲಿಂದ ಬಂತು, ಏನು ಬಂತು ಅಂತ ಮಾಡುತ್ತಾರೆ ಎಂದರು. ಬೆದರಿಕೆ ಪತ್ರದ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: Bomb threat : ಮುಸ್ಲಿಮರಾಗಿ, ಇಲ್ಲವೇ ನಿಮ್ಮ ಮಕ್ಕಳನ್ನು ಕೊಲ್ತೇವೆ; ಶಾಲೆಗಳಿಗೆ ಬಂದ ಬೆದರಿಕೆ
ಪೊಲೀಸರಿಂದ ಮಾಹಿತಿ ಪಡೆದ ಗೃಹ ಸಚಿವ ಪರಮೇಶ್ವರ್
ಇದೇ ವೇಳೆ, ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣದ ಕುರಿತು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದರು. ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಎಲ್ಲ ಸ್ಕ್ವೈಡ್‌ಗಳನ್ನು ಕಳುಹಿಸಿ ತಪಾಸಣೆ ನಡೆಸಬೇಕು. ಕಟ್ಟೆಚ್ಚರಿಕೆ ವಹಿಸುವಂತೆ ನಿರ್ದೇಶಿಸಿದರು.
ಬೆದರಿಕೆ ಬಂದಿರುವ 15 ಶಾಲೆಗಳಲ್ಲಿಯೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ. ಕಳೆದ ವರ್ಷವು ಇದೇ ರೀತಿ ಕರೆ ಬಂದಿತ್ತು ಎನ್ನಲಾಗುತ್ತಿದೆ. ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಗಂಭೀರವಾಗಿ ಪರಿಗಣಿಸಲಾಗಿದೆ. ಬಾಂಬ್ ಬೆದರಿಕೆಯ ಇಮೇಲ್ ಬಗ್ಗೆ ಪರಿಶಿಲೀಸುವಂತೆ ಸಿಐಡಿ ಅಧಿಕಾರಿಗಳಿಗೆ ಪರಮೇಶ್ವರ್ ಸೂಚಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೂಲ ಪತ್ತೆ ಹಚ್ಚುವವರೆಗೂ ಬಿಡುವುದಿಲ್ಲ. ತುಮಕೂರಿನಿಂದ ಬೆಂಗಳೂರಿಗೆ ವಾಪಾಸ್ ಆದ ನಂತರ ಇಲಾಖೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪೋಷಕರು ಮಕ್ಕಳು ಆತಂಕಪಡುವುದು ಬೇಡ ಎಂದು ಪರಮೇಶ್ವರ್ ತಿಳಿಸಿದ್ದಾರೆ.