Site icon Vistara News

CM Siddaramaiah : ಇಸ್ರೋ ಅಂಗಳದಲ್ಲಿ ಸಿಎಂ ಸಿದ್ದರಾಮಯ್ಯ; ಚಂದ್ರನ ಗೆದ್ದವರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಗೌರವ

CM Siddaramaiah at ISRO

ಬೆಂಗಳೂರು: ಚಂದ್ರಯಾನ 3 ಯಶಸ್ವಿಯಾಗುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿದ ಮಹತ್ಸಾಧನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಳಕಿತರಾಗಿದ್ದಾರೆ. ಬುಧವಾರ ಸಂಜೆ 6:04ಕ್ಕೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ನೆಲೆಯೂರಿದ ಕ್ಷಣವನ್ನು ಕಣ್ತುಂಬಿಕೊಂಡಿದ್ದ ಅವರು ಗುರುವಾರ ನೇರವಾಗಿ ಇಸ್ರೋ ಕಚೇರಿಗೇ ಹೋಗಿ ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದರು.

ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಬೋಸರಾಜ್‌ ಅವರು ಇಸ್ರೋ ಅಧ್ಯಕ್ಷ ಎಸ್.‌ ಸೋಮನಾಥ್‌ ಅವರನ್ನು ಗೌರವಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು. ಸೋಮನಾಥ ಹಾಗೂ ಇತರ ವಿಜ್ಞಾನಿಗಳನ್ನು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಗೌರವಿಸಿ ಸಿಹಿ ವಿತರಿಸುವ ಮೂಲಕ ಸಂತಸ ಹಂಚಿಕೊಂಡರು. ಅವರ ಜತೆ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್‌. ಬೋಸರಾಜು ಅವರೂ ಇದ್ದರು.

Siddaramaiah at ISRO

ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಚಂದ್ರಯಾನ ಯಶಸ್ಸಿನಲ್ಲಿ ಭಾಗಿಯಾದ ಇಸ್ರೋ ಅಧ್ಯಕ್ಷರಾದ ಎಸ್‌. ಸೋಮನಾಥ್‌ ಮತ್ತು ಎಲ್ಲ ವಿಜ್ಞಾನಿಗಳನ್ನು ಸರ್ಕಾರದ ವತಿಯಿಂದ ಗೌರವಿಸಲಾಗುತ್ತದೆ. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಿ ಗೌರವ ಸಲ್ಲಿಸಲಾಗುವುದು ಎಂದು ಪ್ರಕಟಿಸಿದರು.

Siddaramaiah at ISRO

ಚಂದ್ರಯಾನ ನಮಗೆಲ್ಲ ಹೆಮ್ಮೆ ತರುವಂತಹ ವಿಚಾರ. ನಾನು ಕೂಡ ಬುಧವಾರ ವಿಕ್ರಂ ಲ್ಯಾಂಡರ್‌ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ. ಖುಷಿ ಆಯ್ತು, ಬಹಳ ಹೆಮ್ಮೆ ಅನಿಸಿತು ಎಂದು ಸಿದ್ದರಾಮಯ್ಯ ಹೇಳಿದರು.

ಇದೊಂದು ದೊಡ್ಡ ಸಾಧನೆ. ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮಪಡುತ್ತಿದ್ದಾರೆ. ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಇದು. ಇಸ್ರೋ ತಂಡವನ್ನು ಸನ್ಮಾನಿಸಲು ನಾವು ವಿಶೇಷ ಸಮಾರಂಭ ಮಾಡ್ತೇವೆ ಎಂದು ಸಿದ್ದರಾಮಯ್ಯ ನುಡಿದರು.

Siddaramaiah at ISRO

ಸೆಪ್ಟೆಂಬರ್‌ 2 ನಂತರ ಸನ್ಮಾನದ ದಿನಾಂಕ ನಿಗದಿ

ವಿಜ್ಞಾನಿಗಳು ಹಗಲು ಇರುಳು ಎನ್ನದೆ ಇದಕ್ಕಾಗಿ ಶ್ರಮಿಸಿದ್ದಾರೆ. ದೇಶದ ಒಟ್ಟು ಒಂದು ಸಾವಿರ ವಿಜ್ಞಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಿಂದಲೇ 500 ಜನ ಪಾಲ್ಗೊಂಡಿದ್ದಾರೆ. ಸೆಪ್ಟೆಂಬರ್ 02ರ ನಂತರ ಸನ್ಮಾನ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ ಎಂದರು.

Siddaramaiah at ISRO

ನಾವೆಲ್ಲ ಹೆಮ್ಮೆ ಪಡುವ ಸಾಧನೆ ಇದು. ಅದರಲ್ಲೂ ಕನ್ನಡಿಗರಾಗಿ ನಮಗೆ ಇದು ವಿಶೇಷವಾದ ಖುಷಿ ಕೊಡುವ ಸಂಗತಿ. ವೈಯಕ್ತಿಕವಾಗಿ ನನಗೆ ಬಹಳ ಸಂತೋಷ ತಂದಿದೆ ಎಂದು ಸಿದ್ದರಾಮಯ್ಯ ಮುಕ್ತವಾಗಿ ಹೇಳಿದರು.

Siddaramaiah at ISRO

ಇಸ್ರೋಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಅಲ್ಲಿನ ವಿಜ್ಞಾನಿಗಳ ಜತೆ ಆತ್ಮೀಯವಾಗಿ ಬೆರೆತರು. ಸಿಹಿ ತಿನಿಸಿದರು. ಅಲ್ಲಿದ್ದ ವಿಜ್ಞಾನಿಗಳು ಕೂಡಾ ಸಿದ್ದರಾಮಯ್ಯ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು.

ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ ಸಿದ್ದರಾಮಯ್ಯ ನಿಮ್ಮೆಲ್ಲರ ನಿದ್ದೆ ಇಲ್ಲದ ರಾತ್ರಿಗಳ ಶ್ರಮದಿಂದಾಗಿ ಭಾರತ ಇದೀಗ ವಿಶ್ವವೇ ತಿರುಗಿ ನೋಡುವಂಥ ಸಾಧನೆಗೆ ಕಾರಣವಾಗಿದೆ. ನಿಮಗೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

Siddaramaiah at ISRO

ವಿಜ್ಞಾನಿಗಳು ಸಿದ್ದರಾಮಯ್ಯ ಅವರಿಗೆ ಇಸ್ರೋ ಚಂದ್ರಯಾನದ ರೋಮಾಂಚಕ ಕ್ಷಣಗಳನ್ನು ವಿವರಿಸಿದರು. ಸಿಎಂ ಅವರು ಕೂಡಾ ಅವುಗಳನ್ನು ಚಕಿತರಾಗಿ ಆಲಿಸಿದರು.

ಇಸ್ರೋ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ . ಜಗತ್ತಿನಲ್ಲಿಯೇ ರಷ್ಯಾ, ಅಮೆರಿಕ, ಚೈನಾ ದೇಶಗಳನ್ನು ಬಿಟ್ಟರೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿರಿಸಿರುವ ನಾಲ್ಕನೇ ದೇಶ ಭಾರತ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದು ಕೊಂಡಾಡಿದರು.

Siddaramaiah at ISRO

ಸಿದ್ದರಾಮಯ್ಯ ಅವರು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಅವರನ್ನು ಪ್ರತ್ಯೇಕವಾಗಿ ಕೂರಿಸಿಕೊಂಡು ಮಾತನಾಡಿ, ಇಂಥ ಸಾಧನೆ ಮಾಡಿದ ಹೆಮ್ಮೆಯನ್ನು ಕೊಂಡಾಡಿದರು. ರಾಜ್ಯ ಸರ್ಕಾರದಿಂದಲೂ ಬೆಂಬಲ ಘೋಷಿಸಿದರು.

Siddaramaiah at ISRO

ಚಂದ್ರಯಾನ ಸಾಹಸದಲ್ಲಿ ಭಾಗಿಯಾದ ವಿಜ್ಞಾನಿಗಳಲ್ಲಿ ಪ್ರಮುಖರನ್ನು ಸಿದ್ದರಾಮಯ್ಯಾ ಅವರಿಗೆ ಪರಿಚಯ ಮಾಡಿಕೊಡಲಾಯಿತು. ಅತ್ಯಂತ ಸರಳವಾಗಿದ್ದು ಉನ್ನತವಾಗಿ ಯೋಚಿಸುವ ಈ ವಿಜ್ಞಾನಿಗಳನ್ನು ಕಂಡು ಸಿದ್ದರಾಮಯ್ಯ ಬೆರಗಾದರು.

Siddaramaiah at ISRO

ವಿಜ್ಞಾನಿಗಳು ಸಿದ್ದರಾಮಯ್ಯ ಅವರ ಜತೆಗೆ ಸೆಲ್ಫಿ ಪಡೆದುಕೊಂಡರು. ಅಂತಿಮವಾಗಿ ಎಲ್ಲರೂ ಜತೆಯಾಗಿ ಗ್ರೂಪ್‌ ಫೋಟೊ ಪಡೆದುಕೊಂಡು ಖುಷಿಪಟ್ಟರು. ಸಿದ್ದರಾಮಯ್ಯ ಅವರು ನಗುನಗುತ್ತಾ ಬೀಳ್ಕೊಂಡರು.

Exit mobile version