Site icon Vistara News

Coconut thief : ಇವನು ಸಾಮಾನ್ಯನಲ್ಲ, ಕಾರಲ್ಲಿ ಬಂದು ಎಳನೀರು ಕದಿಯೋ ರಮ್ಮಿ ಪ್ಲೇಯರ್!

Tender Coconut thief

ಬೆಂಗಳೂರು: ನೀವು ಮನೆ ದರೋಡೆ ಮಾಡೋರನ್ನು ಕೇಳಿದ್ದೀರಿ, ಹಣ, ಚಿನ್ನಾಭರಣ, ವಾಹನ ಕಳವು ಮಾಡೋರ ಬಗ್ಗೆ ಓದಿದ್ದೀರಿ. ಆದರೆ, ಇಲ್ಲೊಬ್ಬ ಕಳ್ಳನಿದ್ದಾನೆ. ಅವನಿಗೆ ಹಣ ಬೇಡ, ಚಿನ್ನಾಭರಣ ಬೇಡ, ಅವನ ಕಣ್ಣಿರುವುದು ಎಳನೀರಿನ ಮೇಲೆ!‌ ಎಳನೀರು ಕಳ್ಳ (Coconut thief) ಎಂದ ಕೂಡಲೇ ತೆಂಗಿನ ಮರ ಹತ್ತಿ ಕದೀತಾನೆ ಅಂದುಕೊಳ್ಳಬೇಡಿ. ಅವನದು ಏನಿದ್ದರೂ ಬೀದಿ ಕಳ್ಳತನ (Street theft). ಫುಟ್‌ ಪಾತ್‌ಗಳ ಮೇಲೆ ಎಳನೀರು ಮಾರಾಟ ಮಾಡ್ತಾರಲ್ಲಾ.. ಅವರು ರಾತ್ರಿ ಮನೆಗೆ ಹೋಗುವಾಗ ಉಳಿದ ಎಳನೀರನ್ನು ಚೆನ್ನಾಗಿ ಮೂಟೆ ಕಟ್ಟಿ ಇಟ್ಟು ಹೋಗ್ತಾರಲ್ಲ. ಅವುಗಳನ್ನು ಕದಿಯೋದೇ ಇವನ ಹವ್ಯಾಸ!

ಕಳೆದ ಮೂರು ತಿಂಗಳಿನಿಂದ ಎಳನೀರು ಕದಿಯುತ್ತಿದ್ದ ಇವನು ಇದೀಗ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯ ಹೆಸರು ಮೋಹನ್‌. ತಮಿಳುನಾಡು ಮೂಲದ ಮೋಹನ್ ಈಗ ಮಡಿವಾಳ ನಿವಾಸಿ.

ಮೋಹನ್‌ನ ಇನ್ನೊಂದು ವಿಶೇಷತೆ ಏನೆಂದರೆ ಅವನೇನೂ ಅತಿ ಚಿಲ್ಲರೆ ಕಳ್ಳನಲ್ಲ. ಅವನು ಬರೋದು ವ್ಯಾಗನ್‌ ಆರ್‌ ಕಾರಿನಲ್ಲಿ. ಕಾರಿನಲ್ಲಿ ಬಂದು ಎಳನೀರು ಕದ್ದುಕೊಂಡು ಹೋಗುವ ಕಳ್ಳನಿವನು. ಈತನ ಕೈಯಿಂದ ಅವನು ಲೇಟೆಸ್ಟ್‌ ಆಗಿ ಕದ್ದಿರುವ 90 ಎಳನೀರು, ಕಾರು ಮತ್ತು ಒಂದು ಬುಲೆಟನ್ನು ವಶಕ್ಕೆ ಪಡೆಯಲಾಗಿದೆ.

ಅವನ ಲೇಟೆಸ್ಟ್‌ ಕಳವು ಗಿರಿನಗರದಲ್ಲಿ

ಗಿರಿನಗರದ ಮಂಕುತಿಮ್ಮನ ಪಾರ್ಕ್‌ ಬಳಿ ಇರುವ ಫುಟ್‌ಪಾತ್‌ನಲ್ಲಿ ರಾಜಣ್ಣ ಎಂಬವರು ಎಳನೀರು ವ್ಯಾಪಾರ ಮಾಡುತ್ತಾರೆ. ಕೆಲವುದ ದಿನದ ಹಿಂದೆ ಅವರು ಸಂಜೆ ಹೊತ್ತಿಗೆ 1200 ಎಳನೀರು ಖರೀದಿ ಮಾಡಿದ್ದರು. ಅದರಲ್ಲಿ 50 ಎಳನೀರನ್ನು ಮಾರಾಟ ಮಾಡಿದ ಬಳಿಕ 1150 ಎಳನೀರುಗಳನ್ನು ಟಾರ್ಪಾಲ್‌ ಹಾಕಿ ಮುಚ್ಚಿಟ್ಟಿದ್ದರು. ಆದರೆ, ಮರುದಿನ ಬಂದು ನೋಡಿದಾಗ ಅಷ್ಟೂ ಎಳನೀರು ಕಳವಾಗಿತ್ತು.

ರಾಜಣ್ಣ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆ ಭಾಗದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದಾಗ ಮಧ್ಯರಾತ್ರಿಯ ಬಳಿಕ ವ್ಯಕ್ತಿಯೊಬ್ಬ ವ್ಯಾಗನ್‌ ಆರ್‌ ಕಾರಿನಲ್ಲಿ ಬಂದು ಎಲ್ಲಾ ಎಳನೀರನ್ನು ಕದ್ದುಕೊಂಡು ಹೋಗುವುದು ಖಂಡಿತ. ಕಾರಿನ ನಂಬರ್‌ ಆಧಾರದಲ್ಲಿ ಅದು ಮಡಿವಾಳ ನಿವಾಸಿ ಮೋಹನ್‌ಗೆ ಸೇರಿದ್ದು ಎನ್ನುವುದು ಸ್ಪಷ್ಟವಾಗಿ ಆತನನ್ನು ಬಂಧಿಸಲಾಗಿದೆ.

ಕಾರಿನೊಳಗೆ ಕದ್ದ ಎಳನೀರು!

ಅವನು ಹೆಸರಿಗೆ ಮಾತ್ರ ಊಬರ್‌ ಚಾಲಕ

ಬಂಧಿತ ಮೋಹನ್‌ ವೃತ್ತಿಯಲ್ಲಿ ಹೆಸರಿಗೆ ಒಬ್ಬ ಊಬರ್‌ ಚಾಲಕ. ತನ್ನ ವ್ಯಾಗನ್‌ ಆರ್‌ ಕಾರನ್ನು ಊಬರ್‌ಗೆ ಕನೆಕ್ಟ್‌ ಮಾಡಿದ್ದ. ಆದರೆ, ಅವನು ಯಾವತ್ತೂ ಊಬರ್‌ ಬಾಡಿಗೆ ಮಾಡಿದ್ದೇ ಇಲ್ಲ. ಪಿಕ್ ಅಪ್‌ ಆ್ಯಂಡ್ ಡ್ರಾಪ್ ಮಾಡುತ್ತಿರಲಿಲ್ಲ. ಎಳನೀರು ಕದಿಯಲೆಂದೇ ಅವನು ಊಬರ್ ಹೆಸರು ಬಳಸಿ ವ್ಯಾಗನರ್ ಕಾರು ಪಡೆದಿದ್ದ!

ಮೊದಲು ಅವನೂ ಎಳನೀರು ವ್ಯಾಪಾರಿನೇ!

ಮೋಹನ್‌ನ ಕಳವಿನ ಕಥೆ ಇಂಟ್ರೆಸ್ಟಿಂಗ್‌ ಆಗಿ ಇದೆ. ನಿಜವೆಂದರೆ ಮೋಹನ್‌ ಒಬ್ಬ ಎಳನೀರು ವ್ಯಾಪಾರಿಯೇ. ನಗರದಲ್ಲೇ ಎಳನೀರು ಮಾರುತ್ತಿದ್ದ. ಆದರೆ, ಅದರ ನಡುವೆ ಅವನಿಗೆ ಒಂದು ದುರಾಭ್ಯಾಸ ಹುಟ್ಟಿಕೊಂಡಿತು. ಅದುವೇ ರಮ್ಮಿ ಸರ್ಕಲ್‌ ಎಂಬ ಆನ್‌ಲೈನ್‌ ಗೇಮ್‌. ಅವನು ರಮ್ಮಿ ಸರ್ಕಲ್‌ನಲ್ಲಿ ಹಣ ಕಳೆದುಕೊಂಡು ಮೂರು ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದ.

ಇಷ್ಟೆಲ್ಲ ಸಾಲ ಮಾಡಿದ ಬಳಿಕ ಅದನ್ನು ಮರು ಪಾವತಿ ಮಾಡುವುದಕ್ಕೆ ಕೇವಲ ಎಳನೀರು ಮಾರಿದರೆ ಸಾಲದು ಎಂದು ಅಂದುಕೊಂಡು ಎಳನೀರು ಕದ್ದರೆ ಆಗಬಹುದು ಅಂತ ಪ್ಲ್ಯಾನ್‌ ಮಾಡಿದ. ಇದು ಸಿಕ್ಕಾಪಟ್ಟೆ ಕ್ಲಿಕ್‌ ಆಯಿತು. ಅವನು ಎಳನೀರು ಕದ್ದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಕೊಳ್ಳುವವರಿಗೆ ಇವನು ಈಗ ಎಳನೀರು ಸಪ್ಲೈ ಮಾಡೋ ಕೆಲಸ ಮಾಡುತ್ತಿದ್ದಾನೆ ಅನಿಸಿತ್ತು. ಈಗ ಆತ ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಎಳನೀರು ಕಳ್ಳ ಮತ್ತು ಅವನ ಕಾರು

Exit mobile version