Site icon Vistara News

Coffee-Tea Scam: ಸಿದ್ದರಾಮಯ್ಯ ಮನೆಯಲ್ಲಿ ಕಾಫಿ-ಟೀ-ತಿಂಡಿಗೆ 200 ಕೋಟಿ ರೂ. ವೆಚ್ಚ: ಬಿಜೆಪಿ ನಾಯಕ ಎನ್‌.ಆರ್‌. ರಮೇಶ್‌ ಆರೋಪ

coffee-tea-scam-accusation against siddaramaiah

#image_title

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅವರ ಮನೆಗೆ ಆಗಮಿಸುವ ಅತಿಥಿಗಳಿಗೆ ಕಾಫಿ-ಟೀ-ತಿಂಡಿ ನೀಡುವ ಸಲುವಾಗಿ ಬರೊಬ್ಬರಿ 200 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಸುಳ್ಳು ಲೆಕ್ಕ (Coffee-Tea Scam) ನೀಡಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ.

ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಎನ್‌.ಆರ್‌. ರಮೇಶ್‌ ದಾಖಲೆಗಳನ್ನು ಬಿಡುಗಡೆ ಮಾಡಿದರು. • ಸಿದ್ಧರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಕೇವಲ ಕಾಫೀ – ತಿಂಡಿ – ಬಿಸ್ಕೆಟ್‍ ಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿರುವ ಬೃಹತ್ ಹಗರಣ ಇದಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಕಛೇರಿಯ ಸಿಬ್ಬಂದಿವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಯ ಅಂದಿನ ಅಧಿಕಾರಿಗಳು ಭಾಗಿಗಳಾಗಿ ನಡೆಸಿರುವ ಬೃಹತ್ ಹಗರಣ ಇದು. ಇದರಲ್ಲಿ ಎಲ್‌. ಕೆ. ಅತೀಕ್‌, ಇ.ವಿ. ರಮಣ ರೆಡ್ಡಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

2013-14 ರಿಂದ 2017-18 ರವರೆಗಿನ 05 ವರ್ಷಗಳ ಅವಧಿಯಲ್ಲಿ – ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ / ಗಣ್ಯರ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ.

5 ವರ್ಷಗಳಲ್ಲಿನ 410 ರಜಾ ದಿನಗಳನ್ನೂ ಸೇರಿಸಿಕೊಂಡರೆ ಪ್ರತಿಯೊಂದು ದಿನಕ್ಕೆ ಸರಾಸರಿ 11 ಲಕ್ಷ ರೂಪಾಯಿ ವೆಚ್ಛ ಆಗುತ್ತದೆ. • 410 ರಜಾ ದಿನಗಳನ್ನು ಹೊರತುಪಡಿಸಿದರೆ ಪ್ರತಿಯೊಂದು ದಿನಕ್ಕೆ ಸರಾಸರಿ 14 ಲಕ್ಷ ರೂಪಾಯಿ ವೆಚ್ಛ ಆಗುತ್ತದೆ.

ಅಧಿಕೃತ ದಾಖಲೆಗಳು ಹೇಳುವಂತೆ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಅತಿಥಿ – ಗಣ್ಯರ ಉಪಚಾರಗಳಿಗೆಂದು ವೆಚ್ಛ ಮಾಡಿರುವ ವರ್ಷಾವಾರು ವಿವರ ಈ ಕೆಳಕಂಡಂತಿದೆ.
2013-14 : ₹. 36,03,03,078/-
2014-15 : ₹. 38,26,68,575/-
2015-16 : ₹. 36,66,19,743/-
2016-17 : ₹. 44,73,92,077/-
2017-18 : ₹. 44,93,09,554/-
ಒಟ್ಟು : ₹. 200,62,93,027/-

ಅಧಿಕಾರಿಗಳು ನಕಲಿ ದಾಖಲೆಗಳ ರಾಶಿಯನ್ನೇ ತಯಾರಿಸಿ ನಂಬಲಸಾಧ್ಯವಾದಂತಹ ಲೆಕ್ಕವನ್ನು ನೀಡಿದ್ದಾರೆಂಬ ಆರೋಪ ಮಾಡಿದ ರಮೇಶ್‌, ಇದು ಕೇಳಲು ಹಾಸ್ಯ ಪ್ರಸಂಗದಂತಿದ್ದರೂ ಸಹ ದಾಖಲೆಗಳು ಅಸಲೀ ಸತ್ಯವನ್ನು ಬಿಚ್ಚಿಡುತ್ತಿವೆ. ಅಂದಿನ ಮುಖ್ಯಮಂತ್ರಿಗಳ ಕಛೇರಿಯ ಈ ನಂಬಲಸಾಧ್ಯವಾದ ವೆಚ್ಛಗಳ ಬಗ್ಗೆ Office of the Principal Accountant General, Karnataka ದವರು ನೀಡಿರುವ ಲೆಕ್ಕ ಪರಿಶೋಧನಾ ವರದಿಯಲ್ಲಿ ತಮ್ಮ ತೀವ್ರ ಆಕ್ಷೇಪಣೆಗಳನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿವೆ.

ಆದರೂ, ಭ್ರಷ್ಟಾಚಾರದ ಪಿತಾಮಹ ಸಿದ್ಧರಾಮಯ್ಯನವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಮೂಲಕ ತಾವೆಂಥ ಭಂಢ ರಾಜಕಾರಣಿ ಎಂಬುದನ್ನು ಜಗಜ್ಜಾಹೀರುಪಡಿಸಿದ್ದಾರೆ. ಕಳೆದ 75 ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿರುವ 25 ಮಂದಿ ಮುಖ್ಯಮಂತ್ರಿಗಳ ಪೈಕಿ, ಬೇರೆ ಇನ್ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಸಹ ನಡೆಯದ “ಅತಿಥಿ ಉಪಚಾರ”ದ ಹೆಸರಿನ ಇಂತಹ ಭ್ರಷ್ಟಾಚಾರ ಸಿದ್ಧರಾಮಯ್ಯನವರ ಅವಧಿಯಲ್ಲಿ ನಡೆದಿದೆ.

ಹಾಸಿಗೆ – ದಿಂಬು, ಇಂದಿರಾ ಕ್ಯಾಂಟೀನ್ ತಿಂಡಿ, ನೆಲದಡಿಯ ಕಸದ ಡಬ್ಬಗಳು ಮತ್ತು LED ದೀಪಗಳ ಅಳವಡಿಕೆಯಂತಹ ಯೋಜನೆಗಳ ಹೆಸರಿನಲ್ಲೂ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಛೇರಿಯ ಕಾರ್ಯಗಳಿಗೆ ಕಾಫೀ – ತಿಂಡಿ – ಬಿಸ್ಕೇಟ್ ಪೂರೈಕೆ ಹೆಸರಿನಲ್ಲೂ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವುದನ್ನು ನೋಡಿದರೆ, ಇಂತಹ ಬೃಹತ್ ಭ್ರಷ್ಟಾಚಾರಗಳ ಸರ್ಕಾರ ದೇಶದಲ್ಲಿ ಮತ್ತೊಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ಸರ್ಕಾರದ ಯಾವೊಂದು ಯೋಜನೆಗಳನ್ನೂ ಬಿಡದೆ, ಎಲ್ಲದರಲ್ಲೂ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದ ಸಿದ್ಧರಾಮಯ್ಯನವರ ಸರ್ಕಾರವು – ಕೊನೆಗೆ ಕಾಫೀ – ತಿಂಡಿ – ಉಪಹಾರದ ಹೆಸರಿನಲ್ಲೂ ಬೃಹತ್ ಮೊತ್ತದ ವಂಚನೆ ಎಸಗಿದೆ.

ಮುಖ್ಯಮಂತ್ರಿಗಳ ಕಛೇರಿಯ ಸಭೆಗಳು ಮತ್ತು ಅವರ ಕಛೇರಿಗೆ ಆಗಮಿಸಿರುವ ಅತಿಥಿ / ಗಣ್ಯರ ಉಪಚಾರ ಕಾರ್ಯಗಳಿಗೆ ಕಾಫೀ – ತಿಂಡಿ – ಸ್ನಾಕ್ಸ್ – ಉಪಹಾರ ಪೂರೈಕೆಯ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಈ ಬೃಹತ್ ಹಗರಣವನ್ನು CBI ಅಥವಾ CID ತನಿಖೆಗೆ ವಹಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಎನ್‌.ಆರ್‌. ರಮೇಶ್ ಆಗ್ರಹಿಸಿದರು.

Exit mobile version