ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಗೆ ರೌಡಿ ಕಳಂಕ ಅಂಟಿಕೊಳ್ಳುತ್ತಿದ್ದು, ಇತ್ತೀಚೆಗೆ ಸೈಲೆಂಟ್ ಸುನಿಲ ಹಾಗೂ ಫೈಟರ್ ರವಿ ಪ್ರಕರಣದ ನಂತರ ವಿಲ್ಸನ್ ಗಾರ್ಡನ್ ನಾಗನ ವಿವಾದ ಹುಟ್ಟಿಕೊಂಡಿದೆ.
ವಿಲ್ಸನ್ ಗಾರ್ಡನ್ ನಾಗ ಹಾಗೂ ಸಚಿವ ಸೋಮಣ್ಣ ಭೇಟಿ ಮಾಡಿದ್ದಾರೆ ಎಂಬ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ. ಈ ಕುರಿತು ಎರಡು ಟ್ವೀಟ್ ಮಾಡಿದೆ.
ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಏನು ವ್ಯವಹಾರ? ಯಾವ ನಂಟು? ಸೈಲೆಂಟ್ ಸುನೀಲ, ಫೈಟರ್ ರವಿ, ಬೆತ್ತನಗೆರೆ ಶಂಕರ ಬಿಜೆಪಿ ಜೊತೆಗೆ ಗುರುತಿಸಿಕೊಂಡ ನಂತರ ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿ ಶೀಟರ್ ನಿನ್ನೆ ರಾತ್ರಿ ಸಚಿವ ವಿ.ಸೋಮಣ್ಣ ಮನೆಗೆ ಬಂದಿದ್ದೇಕೆ? ಆತನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ? ಎಂದು ಪ್ರಶ್ನಿಸಿದೆ.
ಮೊದಲೆಲ್ಲ ರೌಡಿ ಶೀಟರ್‌ಗಳು ಪೊಲೀಸರೆದುರು ಪರೇಡ್ ನಡೆಸುತ್ತಿದ್ದರು. ಈಗ ಬಿಜೆಪಿ ಕಚೇರಿ ಮುಂದೆ ಪಕ್ಷ ಸೇರಲು ಪರೇಡ್ ನಡೆಸಲು ಸಜ್ಜಾಗಿದ್ದಾರೆ!. ರೌಡಿಗಳೊಂದಿಗೆ ಬಿಜೆಪಿಗರ ಬಾಂಧವ್ಯ ಹೊರಬರುತ್ತಿರುವಾಗ ಮತ್ತೊಬ್ಬ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸಚಿವ ಸೊಮ್ಮಣ್ಣನವರ ಮನೆಗೆ ಭೇಟಿ ನೀಡಿದ್ದು ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ನೀಡವುದಕ್ಕಾ? ಎಂದಿದೆ.
ಈ ವಿಚಾರದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ವಿ. ಸೋಮಣ್ಣ, ರೌಡಿಶೀಟರ್ ನಾಗನಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಒಂದು ಗಂಟೆಯಲ್ಲ, ಒಂದು ಕ್ಷಣವೂ ಕೂಡ ಚರ್ಚೆ ನಡೆಸಿಲ್ಲ. ನನ್ನ ಮನೆಗೆ ಸಾವಿರಾರು ಜನ ಬರುತ್ತಾರೆ, ಹೋಗುತ್ತಾರೆ.
ನಾನು ಶಾಸಕನಾಗಿ 40 ವರ್ಷ ಆಯಿತು. ನಾಗ, ತಿಮ್ಮ ಯಾರೂ ಗೊತ್ತಿಲ್ಲ. ಕೈಮುಗಿದು ಕೇಳುತ್ತೀನಿ, ಅವನು ಯಾರು ಅಂತ ನನಗೆ ಗೊತ್ತಿಲ್ಲ. ನನ್ನ ಎದುರು ಬಂದು ನಿಂತುಕೊಂಡರೂ ನಾನು ಗುರುತು ಹಿಡಿಯುವುದಿಲ್ಲ. ನಾನು 11 ಚುನಾವಣೆ ಎದುರುಸಿದ್ದೇನೆ. ಸಾಕಷ್ಟು ರಾಜಕೀಯ ಮಾಡಿಕೊಂಡು ಬಂದಿರುವ ಹಿರಿಯ. ಈ ರೀತಿ ಇಲ್ಲ ಸಲ್ಲದನ್ನು ನನ್ನ ತಲೆಗೆ ಕಟ್ಟಬೇಡಿ.
ನನ್ನ ಮನೆಗೆ ಯಾರು ಬಂದಿದ್ದಾರೆ, ಯಾರು ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ವಿಚಾರದಿಂದ ನನಗೆ ಮಾನಸಿಕವಾಗಿ ಸಾಕಷ್ಟು ನೋವಾಗಿದೆ. ಆ ತರಹದ ರಾಜಕೀಯ, ವ್ಯವಹಾರ ಮಾಡಿ ನನಗೆ ಗೊತ್ತಿಲ್ಲ. ನನ್ನ ಪೂರ್ವಾಪರ ಕೂಡ ಚಿಂತನೆ ಮಾಡಬೇಕು ಎಂದು ಎಲ್ಲರಲ್ಲೂ ಮನವಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ | ʼರೌಡಿʼ ಜಗಳದಿಂದ ಹಿಂದೆ ಸರಿದ CM ಬೊಮ್ಮಾಯಿ: ಟ್ವೀಟ್ ಮೂಲಕ ವಿವಾದ ತಣ್ಣಗಾಗಿಸುವ ಯತ್ನ