Site icon Vistara News

Suicide Case | ಅರವಿಂದ ಲಿಂಬಾವಳಿ ಬಂಧನಕ್ಕೆ ಪಟ್ಟು ಹಿಡಿದ ಕಾಂಗ್ರೆಸ್‌; ಕಾನೂನಿನ ಮುಂದೆ ಲಿಂಬಾವಳಿ ಬೇರೆಯಲ್ಲ ಎಂದ ಡಿ.ಕೆ. ಶಿವಕುಮಾರ್‌

congress demands aravinda limbavali arrest in suicide-case

ಬೆಂಗಳೂರು: ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಬಂಧಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ಪಟ್ಟು ಹಿಡಿದಿದೆ.

ಪ್ರದೀಪ್‌ ಮನೆಗೆ ಭೇಟಿ ನೀಡಿ ಮಾತನಾಡಿದ್ದ ಸಿದ್ದರಾಮಯ್ಯ, ಸಾಕ್ಷಿ ನಾಶ ಮಾಡುವ ಅಪಾಯ ಇರುವುರಿಂದ ಶಾಸಕರನ್ನು ಬಂಧಿಸಬೇಕು ಎಂದಿದ್ದರು. ಈ ಕುರಿತು ಡಿ.ಕೆ. ಶಿವಕುಮಾರ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ.

‘ಯಾರಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಕಾರಣವಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಇದೆ. ಈ ಪ್ರಕರಣದಲ್ಲಿ ಶಾಸಕರ ಹೆಸರು ಪ್ರಸ್ತಾಪವಾಗಿದ್ದು, ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು. ತನಿಖೆ ಆಗಲಿ, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಲಿ, ನಾವು ಈ ವಿಚಾರದಲ್ಲಿ ಅನಗತ್ಯವಾಗಿ, ಯಾರ ಹೆಸರನ್ನೂ ಹೇಳುವುದಿಲ್ಲʼ

ʼಜನಸಾಮಾನ್ಯರು ಈ ಪ್ರಕರಣವನ್ನು ನೋಡುತ್ತಿದ್ದು, ಸರ್ಕಾರ ಧೃಡ ಕ್ರಮ ಕೈಗೊಳ್ಳಬೇಕು. ಶಾಸಕರ ದುರ್ವರ್ತನೆಗಳಿಂದ ಅನೇಕ ಸಾವುಗಳು ಸಂಭವಿಸುತ್ತಿವೆ. ಇದಕ್ಕೆ ಕೊನೆ ಹಾಡಬೇಕು. ತಪ್ಪಿತಸ್ಥರು ಶಿಕ್ಷೆಗೆ ಒಳಗಾಗಬೇಕು. ಕಾನೂನಿನ ಮುಂದೆ ಲಿಂಬಾವಳಿ ಬೇರೆಯಲ್ಲ, ಶಿವಕುಮಾರ್ ಬೇರೆಯಲ್ಲ. ಆದರೆ ಈ ಸರ್ಕಾರ ಲಂಚ, ಮಂಚ, ಇಂತಹ ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ರಕ್ಷಣೆ ಮಾಡಿಕೊಂಡು ಬಂದಿದೆ. ಜನ ಇನ್ನು 60 ದಿನ ಈ ಸರ್ಕಾರದ ಅನ್ಯಾಯವನ್ನು ತಡೆದುಕೊಳ್ಳಬೇಕಿದೆ’ ಎಂದರು.

ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಲಿಂಬಾವಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಮೃತ ವ್ಯಕ್ತಿ ಅವರ ಕಡೆ ಹುಡುಗ. ಆತನ ಮರಣಪತ್ರವನ್ನು ನಾವು ಬರೆದಿದ್ದೆವಾ ಅಥವಾ ಬರೆಸಿದ್ದೆವಾ? ನಾವು ಷಡ್ಯಂತ್ರದಲ್ಲಿ ಭಾಗಿಯಾಗಿದ್ದರೆ ಯಾರು ಭಾಗಿಯಾಗಿದ್ದಾರೆ ಎಂದು ಹೇಳಲಿ. ಆತ್ಮಹತ್ಯೆ ಪತ್ರ ಬರೆದಿರುವುದರಿಂದ ಎಲ್ಲರೂ ತನಿಖೆಗೆ ಒಳಗಾಗಿ ಶಿಕ್ಷೆಗೆ ಒಳಗಾಗಬೇಕು’ ಎಂದರು.

ಪ್ರದೀಪ್‌ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಕೆಪಿಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಈ ಸಾವಿನಿಂದ ಕುಟುಂಬ ಅನುಭವಿಸುತ್ತಿರುವ ನೋವು ಹೇಳಲಾಗದಷ್ಟು ತೀವ್ರವಾಗಿದೆ.ಬಿಜೆಪಿ ನಾಯಕರ ವಂಚಕ ಹಣಕಾಸು ವ್ಯವಹಾರಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು? 40 ಪರ್ಸೆಂಟ್‌ ಸರ್ಕಾರದ ದುರಾಸೆಯನ್ನು ಈಡೇರಿಸಲು ಇನ್ನೆಷ್ಟು ಸಂತೋಷ್‌ ಪಾಟೀಲ್‌ ಹಾಗೂ ಟಿ.ಎನ್‌. ಪ್ರಸಾದ್‌ಗಳು ನಿಧನರಾಗಬೇಕು? ಇಲ್ಲಿವರೆಗೆ ಲಿಂಬಾವಳಿ ಮತ್ತಿತರರನ್ನು ಏಕೆ ಬಂಧನ ಮಾಡಿಲ್ಲ? ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಸಿಎಂ ಬಸವರಾಜ ಬೊಮ್ಮಾಯಿ ರಕ್ಷಣೆ ಮಾಡುತ್ತಿದ್ದಾರೆಯೇ? ರಾಜಧರ್ಮ ಪಾಲನೆ ಮಾಡಬೇಕು ಅಥವಾ ಅಧಿಕಾರದಿಂದ ಇಳಿಯಬೇಕು ಎಂದಿದ್ದಾರೆ.

ಕಾಂಗ್ರೆಸ್‌ ಟ್ವೀಟ್‌

ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ಪ್ರದೀಪ್ ಆತ್ಮಹತ್ಯೆಯಲ್ಲಿ ಅರವಿಂದ್ ಲಿಂಬಾವಳಿ ಅವರ ಪಾತ್ರವೇನು ಎಂಬುದರ ಕುರಿತ ತನಿಖೆಗೆ ಮುಂದಾಗುತ್ತಿಲ್ಲವೇಕೆ? ಶಾಸಕರೂ ಪ್ರದೀಪ್‌ಗೆ ವಂಚಿಸಿದವರ ಜತೆ ಸೇರಿ ದ್ರೋಹವೆಸಗಿದ ಗುಮಾನಿಗಳಿವೆ. ಅರವಿಂದ್ ಲಿಂಬಾವಳಿ ಪ್ರಭಾವ ಬಳಸಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಗಳಿದ್ದರೂ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದೇಕೆ? ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಬಿಜೆಪಿ ಕಾರ್ಯಕರ್ತನೇ ಆಗಿದ್ದು, ಸಾಮಾಜಿಕ ಜಾಲತಾಣದ ಗುತ್ತಿಗೆ ವ್ಯವಹಾರದಲ್ಲಿ ಅರವಿಂದ ಲಿಂಬಾವಳಿ ಅವರಿಂದ ವಂಚನೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ಇಷ್ಟಕ್ಕೇ ಸೀಮಿತವಾಗಿರದೆ ಹೆಚ್ಚಿನ ಅವ್ಯವಹಾರಗಳು ನಡೆದಿರುವ ಸಂಭವವಿದೆ. ಆದರೆ ಲಿಂಬಾವಳಿಯವರ ತನಿಖೆ ಇನ್ನೂ ಆರಂಭವಾಗಿಲ್ಲವೇಕೆ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ | Suicide Case | ಶಾಸಕ ಅರವಿಂದ ಲಿಂಬಾವಳಿಯನ್ನು ಅರೆಸ್ಟ್‌ ಮಾಡಬೇಕು: ಸಿದ್ದರಾಮಯ್ಯ ಒತ್ತಾಯ

Exit mobile version