ವಿಧಾನ ಪರಿಷತ್: ನೂರಾರು ಕೋಟಿ ರೂ. ವಂಚನೆ ಮಾಡಿರುವ ಬೆಂಗಳೂರಿನ ವಸಿಷ್ಠ ಸಹಕಾರ ಸಂಘ ಪ್ರಕರಣದ ಹಗರಣ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ವಿಧಾನ ಪರಿಷತ್‌ನಲ್ಲಿ ಈ ಕುರಿತು ಪ್ರಶ್ನೆ ಕೇಳಿದ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್, ಸರ್ಕಾರಕ್ಕೆ ಆಗ್ರಹ ಮಾಡಿದರು.
ವೆಂಕಟೇಶ್ ಪ್ರಶ್ನೆಗೆ ಉತ್ತರ ನೀಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಘದ ಅವ್ಯವಹಾರದ ಕುರಿತು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ವಿಶೇಷಾಧಿಕಾರಿಯ ಅವಧಿಯಲ್ಲಿ ಸಾಲ ವಸೂಲಾತಿಗೆ ಕ್ರಮವಹಿಸಿ 729 ಠೇವಣಿ ಖಾತೆಗಳನ್ನು ಮುಕ್ತಾಯಗೊಳಿಸಿ 26.97 ಕೋಟಿ ರೂ. ಠೇವಣಿ ಹಣವನ್ನು ಮರುಪಾವತಿಸಲಾಗಿದೆ ಎಂದು ಹೇಳಿದರು.
ಅವ್ಯವಹಾರ ಪ್ರಕರಣದ ಸಿಐಡಿ ವಿಚಾರಣೆ ಪ್ರಗತಿಯಲ್ಲಿದೆ. ಠೇವಣಿದಾರರಿಗೆ ಠೇವಣಿ ಹಣ ಹಿಂದಿರುಗಿಸಲು ಸರ್ಕಾರದಿಂದ “ಸಕ್ಷಮ ಪ್ರಾಧಿಕಾರ” ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. 2013-14ರಿಂದ 2014-15ನೇ ಸಾಲಿನವರೆಗಿನ ಲೆಕ್ಕಪತ್ರಗಳ ಮರು ಲೆಕ್ಕ ಪರಿಶೋಧನೆ ಪೂರ್ಣಗೊಳಿಸಿದ್ದು, ವರದಿ ಬಿಡುಗಡೆ ಬಾಕಿ ಇದೆ. 2015-16ರಿಂದ 2019-20ರವರೆಗೆ ಮರು ಲೆಕ್ಕ ಪರಿಶೋಧನೆ ನಡೆಯುತ್ತಿರುತ್ತದೆ.
ಸುಮಾರು 2,000 ಠೇವಣಿದಾರರಿಗೆ ಅಂದಾಜು 260 ಕೋಟಿ ರೂ. ಠೇವಣಿ ಹಣ ಪಾವತಿಸಬೇಕಾಗಿದೆ. ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯು ಕೈಗೊಂಡಿರುವ ಪರಿವೀಕ್ಷಣಾ ವರದಿಯ ಪ್ರಕಾರ ಅಂದಾಜು 280 ಕೋಟಿ ರೂ. ಅವ್ಯವಹಾರವಾಗಿರುವುದು ಕಂಡುಬಂದಿದೆ. ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್, ಬಾಗಲಕೋಟೆ ಡಿಸಿಸಿ ಬ್ಯಾಂಕ್ ಹಗರಣವನ್ನು ಸಿಬಿಐಗೆ ವಹಿಸಲಾಗಿದೆ. ಅದು ಕೇವಲ 12 ಕೋಟಿ ರೂ. ಹಗರಣ. ಇದು 260 ಕೋಟಿ ರೂ. ಹಗರಣ. ಇದನ್ನು ಏಕೆ ಸಿಬಿಐಗೆ ಕೊಡುತ್ತಾ ಇಲ್ಲ? ಏಕೆ ಕೇವಲ ಸಿಐಡಿಗೆ ಕೊಡಲಾಗಿದೆ? ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಮಧ್ಯಪ್ರದೇಶ ಮಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಿಬಿಐ, ಇಡಿ ಇವೆಲ್ಲ ಇವರ ಪಕ್ಷದ ಕೈಯಲ್ಲಿ ಇವೆ. ಸಾಮಾನ್ಯರ ದುಡ್ಡು ಇದು. ನಂಬಿಕೆ ಮೇಲೆ ಹಣ ಇಟ್ಟಿದ್ದಾರೆ.ಸಿಐಡಿಯಲ್ಲಿ ಏನಾಗುತ್ತದೆ ಗೊತ್ತಿದೆ. ಸಿಬಿಐಗೆ ಕೊಡಿ ಎಂದು ಒತ್ತಾಯ ಮಾಡಿದರು.
ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಇಲ್ಲಿ ನಾವು ಯಾರನ್ನೂ ರಕ್ಷಣೆ ಮಾಡುತ್ತಾ ಇಲ್ಲ. ಸಿಐಡಿ ಅಧಿಕಾರಿಗಳ ಜತೆ ಸಭೆ ಮಾಡಲಾಗಿದೆ. ಸಿಐಡಿ ಕೆಲಸ ಮಾಡುತ್ತಾ ಇಲ್ಲ ಎಂದಾಗ ಬೇರೆ ಮಾರ್ಗ ನೋಡಬೇಕಾಗುತ್ತದೆ. ಸಿಐಡಿ ಪವರ್ ಫುಲ್ ಇದೆ ಎಂದರು.
ಇದನ್ನೂ ಓದಿ | ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!