ಬೆಂಗಳೂರು: ಸ್ವಾತಂತ್ರ್ಯದ 75ನೇ ವರ್ಷಾಚರಣೆ ಪ್ರಯುಕ್ತ ಕರ್ನಾಟಕ ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ಫ್ರೀಡಂ ಮಾರ್ಚ್‌ನಲ್ಲಿ (ಸ್ವಾತಂತ್ರ್ಯ ನಡಿಗೆ) ಸಾವಿರಾರು ಜನ ಭಾಗವಹಿಸಿದ್ದಾರೆ. ಈಗಾಗಲೆ ಫ್ರೀಡಂ ಪಾರ್ಕ್ ದಾಟಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದತ್ತ ಸಾಗಿದೆ.
ಮಧ್ಯಾಹ್ನ 2.30ಕ್ಕೆ ಆರಂಭವಾದ ನಡಿಗೆಗೂ ಮುನ್ನವೇ ಸಾವಿರಾರು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಜಮಾಯಿಸಿದ್ದರು. ಕೆಲವರು ತಮ್ಮ ಪಾಡಿಗೆ ತಾವು ನಡೆದು ನ್ಯಾಷನಲ್ ಕಾಲೇಜು ಮೈದಾನದತ್ತ ಸಾಗಿದರು. ರ‍್ಯಾಲಿ ಆರಂಭವಾದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸೇರಿಕೊಂಡರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆರಂಭವಾದ ರ‍್ಯಾಲಿ, ಆನಂದ ರಾವ್ ವೃತ್ತದ ಮೇಲ್ಸೇತುವೆ ಮೂಲಕ ಸಾಗಿತು. ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರಿದ್ದ ಕಡೆಗೇ ನುಗ್ಗುತ್ತಿದ್ದರಿಂದ ಕೆಲ ಕಾಲ ನೂಕಾಟ ತಳ್ಳಾಟ ನಡೆಯಿತು.
ಕಾಂಗ್ರೆಸ್ ಕಾರ್ಯಕರ್ತರಷ್ಟೆ ಅಲ್ಲದೆ, ಗ್ಲೋಬಲ್, ಮೆಡಿಕೇರ್ ಸೇರಿ ಅನೇಕ ಸಂಸ್ಥೆಯ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಕ್ಯಾಪ್, ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡಲಾಗಿದೆ.
ರ‍್ಯಾಲಿಯಲ್ಲಿ ಟ್ರ್ಯಾಕ್ಟರ್‌ಗಳನ್ನೂ ತರಲಾಗಿದ್ದು, ಕೆಲ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್ ಹತ್ತಿ ಸವಾರಿ ಮಾಡಿದರು. ಕಾಂಗ್ರೆಸ್ ನಾಯಕರಾದ ವೀರಪ್ಪ ಮೊಯ್ಲಿ, ಶಾಸಕ ಜಮೀರ್ ಅಹ್ಮದ್, ಎಐಸಿಸಿ ಕಾರ್ಯದರ್ಶಿಗಳು, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸೇರಿ ಅನೇಕರು ಭಾಗಿಯಾಗಿದ್ದಾರೆ.
ದಾರಿಯುದ್ದಕ್ಕೂ ಪ್ರತಿಯೊಬ್ಬರೂ ರಾಷ್ಟ್ರಧ್ವಜಗಳನ್ನು ಹಿಡಿದು ಸಂಭ್ರಮಿಸುತ್ತಿದ್ದಾರೆ. ಬೃಹತ್ ಸ್ಪೀಕರ್‌ಗಳ ಮೂಲಕ ದೇಶಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕೆ.ಆರ್. ವೃತ್ತ, ಕಾರ್ಪೊರೇಷನ್ ವೃತ್ತ, ಟೌನ್ ಹಾಲ್ ಮೂಲಕ ಹಾದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನವನ್ನು ತಲುಪಲಾಗುತ್ತದೆ.
ಡಿ.ಕೆ. ಘೋಷಣೆ ಬೇಡ ಎಂದ ಶಿವಕುಮಾರ್
ರ‍್ಯಾಲಿಯಲ್ಲಿ ಭಾಗವಹಿಸಿದ್ದವರೆಲ್ಲರೂ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಕೆಲವರು ಡಿ.ಕೆ., ಡಿ.ಕೆ. ಎಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಈ ವೇಳೆ ಅವರತ್ತ ಕೈಸನ್ನೆ ಮಾಡಿದ ಡಿ.ಕೆ. ಶಿವಕುಮಾರ್, ತಮ್ಮ ಕುರಿತು ಘೋಷಣೆಗಳನ್ನು ಕೂಗಬಾರದು ಎಂದು ಸೂಚಿಸಿದರು.
ಇದನ್ನೂ ಓದಿ | ವಿಸ್ತಾರ Interview | ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್ ಮಾಡಿದರೂ ವೇಸ್ಟ್: ಡಾ. ಸಿ.ಎನ್. ಅಶ್ವತ್ಥನಾರಾಯಣ