Site icon Vistara News

Congress Karnataka : ಕಾಂಗ್ರೆಸ್‌ಗೆ ಮುಳ್ಳಾದ ನಿಗಮ-ಮಂಡಳಿ; ಅಪಸ್ವರದಿಂದ ಕೈ ಗಲಿಬಿಲಿ

Karnataka Congress DK Shivakumar and CM siddaramaih

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ (Congress Karnataka) 36 ಶಾಸಕರನ್ನು ನಿಗಮ ಮತ್ತು ಮಂಡಳಿಗಳ (Board and Corporation) ಅಧ್ಯಕ್ಷರಾಗಿ ನೇಮಕ ಮಾಡಿದೆ. ಆದರೆ, ಇದು ಹಲವು ವಿವಾದಗಳಿಗೆ, ಅಪಸ್ವರಗಳಿಗೆ ಕಾರಣವಾಗಿದೆ. ನೇಮಕಗೊಂಡ ಕೆಲವರು ತಮಗೆ ಮಹತ್ವವಿಲ್ಲದ ನಿಗಮಗಳನ್ನು ನೀಡಿದ್ದಾರೆ ಎಂದು ಅಪಸ್ವರ ಎತ್ತಿದರೆ, ಇನ್ನು ಕೆಲವರು ನಿಗಮ-ಮಂಡಳಿ ಬೇಕಾಗಿಲ್ಲ. ಮಂತ್ರಿ ಖಾತೆಯೇ ಬೇಕು ಎಂದು ಹಠ ಹಿಡಿದಿದ್ದಾರೆ. ಇವರನ್ನು ಸಮಾಧಾನ ಮಾಡಲು ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಹರಸಾಹಸ ಪಡಬೇಕಾಗಿದೆ.

ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ, ಸಿಂಧನೂರು ಕ್ಷೇತ್ರದ ಶಾಸಕ ಹಂಪನ ಗೌಡ ಬಾದರ್ಲಿ, ಬಾಗೇಪಲ್ಲಿ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್‌, ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೀಗೆ ಹಲವು ನಾಯಕರು ತಮಗೆ ಸಿಕ್ಕಿದ ನಿಗಮ ಮಂಡಳಿ ವಿಚಾರದಲ್ಲಿ ಅಕ್ಷೇಪದ ಧ್ವನಿಯನ್ನು ಬಹಿರಂಗವಾಗಿ ಎತ್ತಿದ್ದಾರೆ.

Congress Karnataka : ರಾಜೀನಾಮೆ ಮುಂದಾದ ಎಸ್‌.ಎನ್‌. ಸುಬ್ಬಾರೆಡ್ಡಿ ಬೆಂಬಲಿಗರು

ಬಾಗೇಪಲ್ಲಿ ಶಾಸಕರಾಗಿರುವ ಎಸ್‌.ಎನ್‌. ಸುಬ್ಬಾರೆಡ್ಡಿ ಅವರಿಗೆ ಬೀಜ ನಿಗಮದ ಅಧ್ಯಕ್ಷತೆ ನೀಡಲಾಗಿದೆ. ಇದು ರೆಡ್ಡಿ ಅವರಿಗೆ ಮತ್ತು ಅಭಿಮಾನಿಗಳಿಗೆ ಅಸಮಾಧಾನ ಉಂಟು ಮಾಡಿದೆ. ರೆಡ್ಡಿ ಅವರು ಕೂಡಾ ಈ ನಿಗಮವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ತಮ್ಮ ನಾಯಕರನ್ನು ಮೂಲೆ ಗುಂಪು ಮಾಡಿರುವ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗುಡಿಬಂಡೆ ತಾಲ್ಲೂಕಿನ ಸುಬ್ಬಾರೆಡ್ಡಿ ಬೆಂಬಲಿಗರು ರಾಜೀನಾಮೆಗೆ ಮುಂದಾಗಿದ್ದಾರೆ.

ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿರುವ ತಾಲ್ಲೂಕಿನ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರ ಸಭೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗು ಕಾಂಗ್ರೆಸ್ ನ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಈ ನಡುವೆ, ʻʻಸುಬ್ಬಾರೆಡ್ಡಿಗೆ ನಾನು ಮುಂಚೇನೆ ಹೆಳ್ಳಿದ್ದೇ ನೀವು ಚೇರ್ಮೆನ್ ಆಗ್ತೀರಾ ಅಂತ. ನಾನು ಹೇಳಿದಾಗ ಶಾಸಕ ಸುಬ್ಬಾರಡ್ಡಿ ಖುಷಿಯಾಗಿಯೇ ಇದ್ದರು. ಬೀಜ ನಿಗಮ ನಿಯಮಿತ ನೀಡಿರುವುದು ಸುಬ್ಬಾರಡ್ಡಿಗೆ ಸಮಾಧಾನ ಇಲ್ಲ. ನಾನು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡ್ತೇನೆʼʼ ಎಂದು ಕೈವಾರ ಕ್ರಾಸ್‌ನಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ್‌ ಹೇಳಿದ್ದಾರೆ.

Oongress Karnataka board and Corporation

ʻʻಸುಬ್ಬಾರೆಡ್ಡಿ ಸತತವಾಗಿ ಮೂರು ಬಾರಿ ಗೆದ್ದಿರುವ ಹಿರಿಯ ಶಾಸಕರಾಗಿದ್ದಾರೆ. ಅವರಿಗೆ ಉತ್ತಮ ನಿಗಮ ಮಂಡಳಿ ನೀಡುವಂತೆ ನಾನು ಸಿಎಂ ಒತ್ತಾಯ ಮಾಡ್ತೇನೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ಸುಬ್ಬಾರೆಡ್ಡಿಗೆ ಸಮಾಧಾನ ಆಗುವಂತ ನಿಗಮ ಮಂಡಳಿ ಕೊಡಿಸುವಂತಹ ಕೆಲಸ ಮಾಡ್ತೇನೆ.ʼʼ ಎಂದು ಅವರು ಹೇಳಿದರು.

Congress Karnataka: ಸರ್ಕಾರದ ನಡೆಗೆ ವಿಜಯಾನಂದ ಕಾಶಪ್ಪನವರ್‌ ಸಿಟ್ಟು

ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಸರ್ಕಾರ ಒಂದು ಎಡವಟ್ಟು ಮಾಡಿಕೊಂಡಿದೆ. ನಿಯಮದಲ್ಲಿ ಅವಕಾಶ ಇಲ್ಲದೇ ಇದ್ದರೂ ವಿಜಯಾನಂದ ಕಾಶಪ್ಪನವರ್‌ಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಬೈಲಾ ಪ್ರಕಾರ ಸಚಿವರೇ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರು. ಬೇರೆಯವರನ್ನು ನೇಮಿಸಲು ಅವಕಾಶವಿಲ್ಲ. ಅಂದರೆ ಕ್ರೀಡಾ ಸಚಿವ ನಾಗೇಂದ್ರ ಅವರೇ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಹಾಗಿದ್ದರೂ ಸರ್ಕಾರ ವಿಜಯಾನಂದ ಕಾಶಪ್ಪನವರ್ ಗೆ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದೆ. ನಿಜವೆಂದರೆ, ಈಗ ನೇಮಕ ಮಾಡಬೇಕಿದ್ದರೆ ಅಗುವು ಉಪಾಧ್ಯಕ್ಷತೆಗೆ ಮಾತ್ರ. ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಇಲ್ಲ ಎಂದು ತಿಳಿಯುತ್ತಲೇ ಕಾಶಪ್ಪನವರ್‌ ಅಸಮಾಧಾನಗೊಂಡಿದ್ದಾರೆ. ಈ ತಾಂತ್ರಿಕ ವಿಚಾರವನ್ನು ಪರಿಪಡಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: Congress Karnataka: ಕೊನೆಗೂ ಹೊರಬಿದ್ದ ನಿಗಮ-ಮಂಡಳಿ ಪಟ್ಟಿ; 36 ಶಾಸಕರಿಗೆ ಮಣೆ, ಡಿಕೆಶಿ ಮೇಲುಗೈ

Congress Karnataka : ಕೆಎಸ್ಸಾರ್ಟಿಸಿ ಅಧ್ಯಕ್ಷರಾದರೂ ಗುಬ್ಬಿ ಶ್ರೀನಿವಾಸ್‌ಗೆ ಸಮಾಧಾನವಿಲ್ಲ

ತುಮಕೂರು ಜಿಲ್ಲೆಯ ಗುಬ್ಬಿಯ ಶಾಸಕರಾಗಿರುವ ಎಸ್‌.ಆರ್‌. ಶ್ರೀನಿವಾಸ್‌ ಅವರನ್ನು ಕೆಎಸ್ಆರ್ ಟಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಆದರೆ, ಅವರು ಇದಕ್ಕೆ ಸಪ್ಪೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ʻʻನನಗೆ ಏನೂ ಅನ್ನಿಸ್ತಿಲ್ಲ, ಖುಷಿನೂ ಅನ್ನಿಸ್ತಿಲ್ಲ, ಬೇಜಾರೂ ಅನ್ನಿಸ್ತಿಲ್ಲʼʼ ಎಂದು ಹೇಳುವ ಮೂಲಕ ಎಸ್‌.ಆರ್‌. ಶ್ರೀನಿವಾಸ್‌ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ʻʻನಾನೇನು ಕೇಳಿರಲಿಲ್ಲ, ಪಕ್ಷದ ವರಿಷ್ಠರು ತೀರ್ಮಾನ ಮಾಡಿ ಕೊಟ್ಟಿದ್ದಾರೆ. ನಾನು ಅವರ ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಯಾವುದೋ ಆಸೆಗೆ ಬಿದ್ದು ರಾಜಕಾರಣ ಮಾಡಿದವನು ನಾನಲ್ಲ. ನಾನು ರಾಜಕಾರಣಕ್ಕೆ ಬಂದಿದ್ದೇ ಅನಿರೀಕ್ಷಿತವಾಗಿ.. ಜನರು ನನಗೆ ಅವಕಾಶ ಕೊಟ್ಟಿದ್ದಾರೆ, ಅವರ ಸೇವೆ ಮಾಡಬೇಕು ಅನ್ನೋದು ನನ್ನ ಆಸೆ. ಯಾವುದೇ ಸ್ಥಾನ ಸಿಕ್ಕರೂ ತೃಪ್ತಿ ಇರಬೇಕು ಎಂದು ಅವರು ಹೇಳಿದ್ದಾರೆ.

ʻʻಮನುಷ್ಯನ ಆಸೆಗಳು ಅಪರಿಮಿತ, ಮನುಷ್ಯನ ಆಸೆಗಳೆಲ್ಲವನ್ನು ಈಡೇರಿಸೋಕೆ ಆಗಲ್ಲ. ಸಮಯ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೆಲಸ ಮಾಡಬೇಕುʼʼ ಎಂದು ಎಸ್‌.ಆರ್‌ ಶ್ರೀನಿವಾಸ್‌ ಹೇಳಿದರು.

Congress Karnataka : ನಿಗಮ ಅಧ್ಯಕ್ಷ ಸ್ಥಾನ ಬೇಡ ಎನ್ನುತ್ತಿರುವ ಶಾಸಕ ಟಿ.ರಘುಮೂರ್ತಿ

ರಾಜ್ಯ ಕೈಗಾರಿಕಾ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿರುವ ಚಳ್ಳಕೆರೆ ಹಿರಿಯ ಶಾಸಕ ಟಿ.ರಘುಮೂರ್ತಿ ಅವರು, ಈಗ ನನಗೆ ಅಧ್ಯಕ್ಷ ಸ್ಥಾನ ಅಲಂಕರಿಸುವ ಇಚ್ಛೆ ಇಲ್ಲ. ನಾನು ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ ಎಂದಿದ್ದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅವರಿಗೆ ಪತ್ರ ಬರೆದಿದ್ದೆ. ಆದರೂ ನಿಗಮ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದ್ದಾರೆ. ನನಗೆ ಅಧ್ಯಕ್ಷ ಸ್ಥಾನ ಅಲಂಕರಿಸುವ ಮನಸ್ಸಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇನೆʼʼ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.

ನಿಜವೆಂದರೆ ಟಿ. ರಘುಮೂರ್ತಿ ಅವರು ತಮ್ಮನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿ, ಅದನ್ನು ಬಿಟ್ಟು ಬೇರೆ ನಿಗಮ, ಮಂಡಳಿ ಅಧ್ಯಕ್ಷತೆ ಬೇಡ ಎಂದು ಬಹಿರಂಗವಾಗಿ ಹೇಳಿದ್ದರು.

ಎರಡೂವರೆ ವರ್ಷದ ಬಳಿಕ ಒಂದು ವೇಳೆ ಸಿಎಂ ಬದಲಾವಣೆ ಆದರೆ ಸಚಿವ ಸ್ಥಾನ ಸಿಗಬಹುದು ಎಂಬ ಆಸೆಯನ್ನು ರಘುಮೂರ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅದರಲ್ಲೂ ಸತೀಶ್ ಜಾರಕಿಹೊಳಿ ಸಿಎಂ ಅಥವಾ ಡಿಸಿಎಂ ಅದರೆ, ತಮಗೆ ಸಚಿವ ಸ್ಥಾನ ಗ್ಯಾರಂಟಿ ಎಂಬ ವಿಶ್ವಾಸದಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ಜೊತೆ ಮಾತನಾಡಿ ನಿರ್ಧಾರ ತಿಳಿಸುವುದಾಗಿ ಹೇಳಿರುವ ರಘುಮೂರ್ತಿ ಅವರಿಗೆ ಅಧ್ಯಕ್ಷ ಸ್ಥಾನ ಸ್ವೀಕರಿಸಬೇಡಿ ಎಂದು ಜಾರಕಿಹೊಳಿ ‌ ಹೇಳಿದ್ದಾರೆ ಎನ್ನಲಾಗಿದೆ.

Congress Karnataka : ರಾಯಚೂರು ಜಿಲ್ಲೆಯ ಮೂವರು ಶಾಸಕರಿಗೆ ಅಸಮಾಧಾನ

ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ, ಸಿಂಧನೂರು ಕ್ಷೇತ್ರದ ಶಾಸಕ ಹಂಪನ ಗೌಡ ಬಾದರ್ಲಿ ಈ ಮೂವರೂ ತಮಗೆ ಸಿಕ್ಕಿರುವ ನಿಗಮ, ಮಂಡಳಿ ಬಗ್ಗೆ ಸಮಾಧಾನವಿಲ್ಲ. ಇವರು ಮೂವರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರಂತೂ ಶುಭಕೋರಲು ಬಂದ ಮುಖಂಡರನ್ನೆ ವಾಪಸ್ ಕಳಿಸಿದ್ದಾರೆ.

ʻʻರಾಯಚೂರು ಜಿಲ್ಲೆಗೆ ಬಹಳಷ್ಟು ಅವಕಾಶ ಕೊಡಬೇಕಿದೆ. ಸಚಿವ ಸಂಪುಟದಲ್ಲಿ ಸ್ಥಾನಮಾನಗಳಲ್ಲಿ ಸಿಂಹಪಾಲು ಕೊಡಬೇಕಿದೆ. ನಮ್ಮ ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರು ಇದ್ದೀವಿ. ಹಂಪನಗೌಡ ಬಾದರ್ಲಿ ಯವರು 5 ಬಾರಿ ಗೆದ್ದಿದ್ದಾರೆ. ಹಂಪಯ್ಯ ಸಾಹುಕಾರ್ ಮೂರು ಬಾರಿ ಗೆದ್ದಿದ್ದಾರೆ. ನಾನು ಮತ್ತು ಬಸನಗೌಡ ತುರುವಿಹಾಳ 2 ಬಾರಿ ಗೆದ್ದಿದ್ದೇವೆ.. ಈ ಹಿಂದೆ ವಾಲ್ಮೀಕಿ ನಿಗಮ ಮೋರ್ಚ್ ದಲ್ಲಿ ಕೆಲಸ ಮಾಡಿದ್ದೀನಿ. ಯಾವುದೇ ಸ್ಥಾನಮಾನ ಕೊಟ್ಟಾಗ ಜನರಿಗೆ ಹೆಚ್ಚಿನ ನಿರೀಕ್ಷೆ ಇರ್ತದೆ. ಅದಕ್ಕೆ ತಕ್ಕಂತೆ ಅನುದಾನ ಲಭ್ಯತೆ ಇದ್ದಾಗ ಮಾತ್ರ ಅಲ್ಲಿ ಕೆಲಸ ಸಾಧ್ಯ.. ಸಿಎಂ & ಡಿಸಿಎಂ ಹತ್ತಿರ ಚರ್ಚೆ ಮಾಡಿ, ತೀರ್ಮಾನ ಮಾಡ್ತೀವಿ. ನಾಲ್ಕು ಜನರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಕ್ಕರೆ ನಮಗೆ ಸಂತೋಷʼʼ ಎಂದು ಬಸನಗೌಡ ದದ್ದಲ್‌ ಹೇಳಿದ್ದಾರೆ.

ಈ ನಡುವೆ, ಕೆಲವೊಂದು ಶಾಸಕರು ತಮಗೆ ನಿಗಮ, ಮಂಡಳಿಗೆ ಅಧ್ಯಕ್ಷತೆ ನೀಡಿರುವುದಕ್ಕೆ ಧನ್ಯವಾದ ಹೇಳಲು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಶಾಸಕರಾದ ಅಬ್ಬಯ್ಯ ಪ್ರಸಾದ್, ನಾರಾಯಣಸ್ವಾಮಿ ಅವರು ಕೊಟ್ಟ ನಿಗಮದಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

Exit mobile version