Site icon Vistara News

ʼಹೆಂಡತಿಯ ರಕ್ಷಣೆಗೆ ರಾವಣನ ವಿರುದ್ಧ ಯುದ್ಧ ಮಾಡಿದ ರಾಮ; ಆದರೆ ಮೋದಿ ಮಾಡಿದ್ದೇನು?ʼ: ಕಾಂಗ್ರೆಸ್‌ ನಾಯಕ ಉಗ್ರಪ್ಪ

ugrappa 1

ಬೆಂಗಳೂರು: ರಾಮ ತನ್ನ ಹೆಂಡತಿಯ ರಕ್ಷಣೆಗಾಗಿ ರಾವಣನ ವಿರುದ್ಧ ಯುದ್ಧ ಮಾಡಿದ ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉಗ್ರಪ್ಪ, ಮಲ್ಲಿಕಾರ್ಜುನ ಖರ್ಗೆಯವರು ಬಸವ, ಬುದ್ಧ ಹಾಗೂ ಮಹಾತ್ಮ ಗಾಂಧಿ ಅವರ ವಿಚಾರಧಾರೆ ಮೇಲೆ ನಂಬಿಕೆ ಇಟ್ಟಿರುವಂತಹ ರಾಜಕಾರಣಿ. ಭಾರತ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಜನಸೇವೆ ಮಾಡಿಕೊಂಡು ಬಂದಿರುವ ಅತ್ಯಂತ ಹಿರಿಯ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ.

ಮತ್ತೊಂದೆಡೆ ಸರ್ವಾಧಿಕಾರಿ ಪ್ರವೃತ್ತಿ, ನಾಥುರಾಮ್ ಗೋಡ್ಸೆ ಅವರ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟಿರುವಂತಹ ಮೋದಿಯವರು. ಆರ್ಥಿಕತೆ ನಿರುದ್ಯೋಗ ಸಮಸ್ಯೆ ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ವಿಚಾರದಲ್ಲಿ ನರೇಂದ್ರ ಮೋದಿಯವರು ವೈಫಲ್ಯ ಅನುಭವಿಸಿದ್ದಾರೆ.

ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಮೋದಿ ಅವರು ಅಯೋಧ್ಯೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಪಂಚಕ್ಕೆ ರಾಮಾಯಣವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಆ ಭಾಗದಲ್ಲಿ ಭಾಗದಲ್ಲಿ ಎಸ್‌ಸಿ ಹಾಗೂ ರಾಜ್ಯದಲ್ಲಿ ವಾಲ್ಮೀಕಿ ಸಮಾಜವು ಎಸ್‌ಟಿ ಸೇರಿದ್ದು. ಇವರ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ? ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಸ್ಮಾರಕ ನಿರ್ಮಾಣ ಏಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ಸತ್ಯಮೇವ ಜಯತೆ ಹಾಗೂ ರಾಮನ ಆದರ್ಶಗಳೇ ನನ್ನ ಆದರ್ಶ ಎಂದು ಮೋದಿ ಅವರು ಹೇಳಿದ್ದಾರೆ. ಆದರೆ ಶ್ರೀರಾಮ, ರಾವಣನ ವಿರುದ್ಧ ಯುದ್ಧ ಮಾಡಿದ್ದು ತನ್ನ ಹೆಂಡತಿಯ ರಕ್ಷಣೆಗಾಗಿ. ಆದರೆ ಮೋದಿಯವರು ತಮ್ಮ ಪತ್ನಿಯನ್ನು ವಿವಾಹವಾಗುವ ಸಂದರ್ಭದಲ್ಲಿ ಕಷ್ಟ ಹಾಗೂ ಸುಖದಲ್ಲಿ ನಾನು ನಿಮ್ಮ ಜತೆ ಇರುತ್ತೇನೆ ಎಂದು ವಾಗ್ದಾನ ಮಾಡಿದ್ದರು. ಆದರೆ ನಂತರ ತಮ್ಮ ಪತ್ನಿಯನ್ನು ದೂರ ಮಾಡಿದ್ದು ಯಾಕೆ ಇದು ರಾಮನ ಆದರ್ಶವೇ? ಎಂದು ಪ್ರಶ್ನಿಸಿದರು.

ಬಿಜೆಪಿಯ ಎಷ್ಟು ನಾಯಕರು ರಾಮಾಯಣವನ್ನು ಓದಿದ್ದಾರೆ? ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ರಾಮ ಹಾಗೂ ಭರತನ ಸಂಭಾಷಣೆಯಲ್ಲಿ ರಾಮ ತಮ್ಮ ತಮ್ಮನಿಗೆ ನನ್ನ ಉಪಸ್ಥಿತಿಯಲ್ಲಿ ಹದಿನಾಲ್ಕು ವರ್ಷ ರಾಜ್ಯವನ್ನು ಆಳ್ವಿಕೆ ಮಾಡು ಎಂದು ಹೇಳುತ್ತಾನೆ. ಆಗ ರಾಜ್ಯ, ರಾಜ್ಯದ ಮಂತ್ರಿಮಂಡಲ, ಬಜೆಟ್, ತೆರಿಗೆ ಹೇಗೆ ಹಾಕಬೇಕು, ವೇತನ, ಬೇಹುಗಾರಿಕೆ ಸೇರಿದಂತೆ ಎಲ್ಲಾ ವಿಚಾರವನ್ನು ತ್ರೇತಾಯುಗದಲ್ಲಿ ಪ್ರಸ್ತಾಪಿಸಲಾಗಿದೆ. ಮೋದಿಯವರೇ ಈ ವಿಚಾರವನ್ನು ನೀವು ಯಾವತ್ತಾದರೂ ವಿಮರ್ಶೆ ಮಾಡಿದ್ದೀರಾ?

ಕೇವಲ ಮತದಾನಕ್ಕಾಗಿ ರಾಮನ ಜಪ ಮಾಡುವುದನ್ನು ಬಿಟ್ಟು, ರಾಮನ ಆದರ್ಶವನ್ನು ಯಥಾವತ್ತಾಗಿ ಜೀವನದಲ್ಲಿ ಅಳವಡಿಸಿಕೊಂಡರೆ, ಮಹಾತ್ಮ ಗಾಂಧಿ ಹಾಗೂ ನಮ್ಮ ಸಂವಿಧಾನ ಬಯಸಿದಂತಹ ಜಾತಿ ರಹಿತ ವರ್ಗ ರಹಿತ ಹಾಗೂ ಶೋಷಣೆ ರಹಿತ ಸಮಾಜ ಕಟ್ಟಲು ಸಾಧ್ಯ. ಆದರೆ ಬಿಜೆಪಿಯವರು ಈ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿಲ್ಲ. ಈ ಬಗ್ಗೆ ದೇಶದ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದರು.

ಇದನ್ನೂ ಓದಿ | Modi In Ayodhya | ರಾಮನ ಆದರ್ಶ, ಸಂವಿಧಾನದ ಆಶಯ ಪಾಲನೆಯೇ ಗುರಿ, ಅಯೋಧ್ಯೆಯಲ್ಲಿ ಮೋದಿ ಮೋಡಿ

Exit mobile version