ಬೆಂಗಳೂರು: ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರವಾಸಗಳಿಗೆ ಎರಡು ತಂಡಗಳನ್ನು ಪ್ರಕಟ ಮಾಡಲಾಗಿದೆ.
ಈ ಹಿಂದೆಯೇ ಪ್ರಕಟಿಸಿದಂತೆ ಯಾತ್ರೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ತಂಡಗಳನ್ನು ರೂಪಿಸಲಾಗಿದೆ. ಉತ್ತರ ಕರ್ನಾಟಕ ತಂಡಕ್ಕೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅಧ್ಯಕ್ಷರಾದರೆ, ದಕ್ಷಿಣದ ತಂಡಕ್ಕೆ ಸಂಸದ ಜಿ.ಸಿ. ಚಂದ್ರಶೇಖರ್ ಅವರನ್ನು ನೇಮಿಸಲಾಗಿದೆ.
ಬಸವರಾಜ ರಾಯರಡ್ಡಿ ತಂಡದಲ್ಲಿ ವಿ.ಆರ್. ಸುದರ್ಶನ್, ಎನ್.ಎಸ್. ಬೋಸರಾಜ್, ಪ್ರಕಾಶ್ ರಾಥೋಡ್, ಆರ್.ಬಿ. ತಿಮ್ಮಾಪುರ್ ಸೇರಿ 21 ಸದಸ್ಯರಿದ್ದರೆ, ಜಿ.ಸಿ. ಚಂದ್ರಶೇಖರ್ ತಂಡದಲ್ಲಿ ಕೆ. ಗೋವಿಂದರಾಜ್, ಎಚ್.ಎಂ. ರೇವಣ್ಣ, ಎಸ್. ರವಿ ಸೇರಿ 28 ಸದಸ್ಯರಿದ್ದಾರೆ.
ಎಲ್ಲ ಮುಂಚೂಣಿ ಘಟಕ, ಸೆಲ್, ವಿಭಾಗಗಳ ಅಧ್ಯಕ್ಷರನ್ನೂ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಪ್ರವಾಸ ಕಾರ್ಯಕ್ರಮಕ್ಕೆ ಕೆಪಿಸಿಸಿಯ ಎಲ್ಲ ಉಸ್ತುವಾರಿ ಪದಾಧಿಕಾರಿಗಳು, ಟಿಕೆಟ್ ಆಕಾಂಕ್ಷಿಗಳು, ಬ್ಲಾಕ್ ಸಂಯೋಜಕರು, ಮುಂಚೂಣಿ ಘಟಕ, ಸೆಲ್, ಜಿಲ್ಲಾ ಮುಖ್ಯಸ್ಥರುಗಳು ತಮ್ಮ ಜಿಲ್ಲೆ ಹಾಗೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಸಮಿತಿಯೊಂದಿಗೆ ಸಹಕರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ಪ್ರಜಾಧ್ವನಿ ಯಾತ್ರೆ
ಯಾತ್ರೆಯ ಹೆಸರನ್ನು ಅಧಿಕೃತವಾಗಿ ಇನ್ನೂ ಪ್ರಕಟಿಸಲಾಗಿಲ್ಲ. ಆದರೆ ʼಪ್ರಜಾಧ್ವನಿ ಯಾತ್ರೆʼ ಎಂದು ನಾಮಕರಣ ಮಾಡಿರುವುದಾಗಿ ಮೂಲಗಳು ಹೇಳಿವೆ. ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಭಾರತ್ ಜೋಡೆ ಯಾತ್ರೆಯ ರೀತಿಯಲ್ಲೆ ಈ ಯಾತ್ರೆಗೂ ಪ್ರತ್ಯೇಕ ವೆಬ್‌ಸೈಟ್ ಆರಂಬಿಸಲಾಗುತ್ತದೆ. ಯಾತ್ರೆಯ ಸಂಪೂರ್ಣ ವಿವರಗಳನ್ನು ಅಲ್ಲಿಯೇ ನೀಡಲಾಗುತ್ತದೆ ಎನ್ನಲಾಗಿದೆ.
ಜನವರಿ 11ರಂದು ಆರಂಭವಾಗುವ ಯಾತ್ರೆಯು 20 ಜಿಲ್ಲೆಗಳಲ್ಲಿ ಹಾದು ಹೋಗಲಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಒಟ್ಟಿಗೆ ಭಾಗವಹಿಸಲಿದ್ದಾರೆ. ನಂತರ ಕ್ಷೇತ್ರವಾರು ಯಾತ್ರೆಯಲ್ಲಿ ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯ, ದಕ್ಷಿಣದಲ್ಲಿ ಶಿವಕುಮಾರ್ ಪ್ರವಾಸ ಮಾಡಲಿದ್ದಾರೆ. ಮೂರನೇ ಹಂತದಲ್ಲಿ ಉತ್ತರದಲ್ಲಿ ಶಿವಕುಮಾರ್ ಹಾಗೂ ದಕ್ಷಿಣದಲ್ಲಿ ಸಿದ್ದರಾಮಯ್ಯ ಯಾತ್ರೆ ನಡೆಸಲಿದ್ದಾರೆ. ಸುಮಾರು ಎರಡು ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ 224 ಕ್ಷೇತ್ರಗಳನ್ನೂ ಪೂರೈಸುವ ಗುರಿ ಇದೆ ಎನ್ನಲಾಗಿದೆ.
ಇದನ್ನೂ ಓದಿ | Karnataka Election | ಕಾಂಗ್ರೆಸ್‌ನಿಂದಲೂ ಎರಡು ಯಾತ್ರೆ; ಸಿದ್ಧವಾಗಿದೆ ಬಸ್