ಬೆಂಗಳೂರು: ಕಾಂಗ್ರೆಸ್ ಪಕ್ಷವು ಯಾವುದೇ ಮುಂದಾಲೋಚನೆ, ವಾಸ್ತವ ಅರಿಯದೆ ನೀಡಿದ ಹೇಳಿಕೆಗಳನ್ನು ನೀಡಿದ್ದನ್ನೇ ಅವಕಾಶವಾಗಿ ಮಾಡಿಕೊಂಡು ಚುನಾವಣೆಗೆ ಹೋಗುವ ಬಿಜೆಪಿಗೆ ಬೆಳಗಾವಿ ಅಧಿವೇಶನದ ಮೊದಲ ದಿನವೇ ಆಘಾತ ಉಂಟಾಗಿದೆ.
ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮಾ ಗಾಂಧಿ, ಜಗಜ್ಯೋತಿ ಬಸವೇಶ್ವರರು, ನೇತಾಜಿ ಸುಭಾಷ್‌ಚಂದ್ರ ಬೋಸ್, ಸ್ವಾಮಿ ವಿವೇಕಾನಂದರು, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಿ.ಆರ್. ಅಂಬೇಡ್ಕರ್ ಜತೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಭಾವಚಿತ್ರವನ್ನು ಸೋಮವಾರ ಅನಾವರಣಗೊಳಿಸಲಾಯಿತು.
ಉಳಿದ ಆರು ಭಾವಚಿತ್ರಕ್ಕಿಂತಲೂ, ಸಾವರ್ಕರ್ ಭಾವಚಿತ್ರಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತದೆ ಎನ್ನುವುದು ಆ ಪಕ್ಷದ ಹಿಂದಿನ ನಡವಳಿಕೆಗಳನ್ನು ನೋಡಿದರೆ ತಿಳಿಯುತ್ತದೆ. ಈ ಹಿಂದೆ ಅನೇಕ ಸಂದರ್ಭದಲ್ಲಿ ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ ವಿರೋಧಿಸುತ್ತದೆ.
ಬೆಂಗಳೂರಿನಲ್ಲಿ ಫ್ಲೈ ಓವರ್‌ಗೆ ಸಾವರ್ಕರ್ ಹೆಸರು ಇಟ್ಟಾಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ನಡೆದಿತ್ತು. ಇತ್ತೀಚೆಗೆ ಭಾರತ್ ಜೋಡೊ ನಡುವೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾವರ್ಕರ್ ವಿರುದ್ಧ ಹರಿಹಾಯ್ದಿದ್ದರು. ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಹಿಂದಿನ ಆರೋಪಗಳನ್ನೇ ಪುನರುಚ್ಚರಿಸಿದ್ದರು.
ಯಾವಾಗೆಲ್ಲ ಸಾವರ್ಕರರನ್ನು ಕಾಂಗ್ರೆಸ್ ವಿರೋಧಿಸುತ್ತದೆಯೋ ಆಗೆಲ್ಲ ರಾಜಕೀಯವಾಗಿ ಹಿನ್ನಡೆಯನ್ನೇ ಅನುಭವಿಸುತ್ತಾ ಬಂದಿದೆ. ಅದರಲ್ಲೂ ಮಹಾರಾಷ್ಟ್ರದಲ್ಲೇ ಸಾವರ್ಕರರನ್ನು ವಿರೋಧಿಸುವುದು ರಾಜಕೀಯ ಆತ್ಮಹತ್ಯೆ ಎಂದೇ ಬಣ್ಣಿಸಲಾಗಿತ್ತು. ಇದೇ ತಪ್ಪನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ಪುನರಾವರ್ತಿಸುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಸಾವರ್ಕರ್ ವಿರೋಧಿಸಿ ಕಾಂಗ್ರೆಸ್ ಮಾತನಾಡಿದ ಕೂಡಲೆ ಅದರ ಜನ್ಮ ಜಾಲಾಡಿ, ದೇಶದ್ರೋಹಿ ಪಟ್ಟವನ್ನು ಗಟ್ಟಿಗೊಳಿಸಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿತ್ತು.
ಕಾಂಗ್ರೆಸ್‌ನ ಬುದ್ಧಿವಂತಿಕೆಯ ನಡೆ
ಇತ್ತೀಚೆಗಷ್ಟೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಹಿಂದು ಧರ್ಮದ ಕುರಿತು ಆಡಿದ ಮಾತಿನಿಂದ ಚೇತರಿಸಿಕೊಂಡಿದ್ದ ಕಾಂಗ್ರೆಸ್, ಸಾವರ್ಕರ್ ವಿಚಾರದಲ್ಲಿ ಜಾಣ ನಡೆ ಇಟ್ಟಿದೆ. ಭಾನುವಾರ ಸಂಜೆ ಸಭೆ ನಡೆಸಿದ ಕಾಂಗ್ರೆಸ್ ನಾಯಕರು, ಸಾವರ್ಕರ್ ಫೋಟೊ ಅಳವಡಿಕೆಯನ್ನು ವಿರೋಧಿಸದೇ ಇರಲು ನಿರ್ಧರಿಸಿತು.
ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದರೂ ಅಲ್ಲಿಗೆ ತೆರಳುವುದು ಬೇಡ. ಅದರ ಬದಲಿಗೆ, ಇನ್ನಷ್ಟು ಮಹಾಪುರುಷರ ಭಾವಚಿತ್ರಗಳನ್ನೂ ಅಳವಡಿಸಬೇಕು ಎಂದು ಒತ್ತಾಯ ಮಾಡುವ ನಿರ್ಧಾರ ಮಾಡಲಾಯಿತು.
ಅದರಂತೆ ಸೋಮವಾರ ಬೆಳಗ್ಗೆ ವಿಧಾನಸಭೆಯ ಸೆಂಟ್ರಲ್ ಹಾಲ್ ಹೊರಗೆ ಕುಳಿತ ಕಾಂಗ್ರೆಸ್ ನಾಯಕರು, ಮಹರ್ಷಿ ವಾಲ್ಮೀಕಿ, ನಾರಾಯಣಗುರುಗಳು, ಕನಕದಾಸರು, ಶಿಶಿನಾಳ ಷರೀಫರು, ಪಂಡಿತ್ ಜವಾಹರಲಾಲ್ ನೆಹರೂ ಸೇರಿ ಇನ್ನೂ ಅನೇಕ ಸ್ವಾತಂತ್ರ್ಯ ಹೋರಾಟಗಾರರ, ದಾರ್ಶನಿಕರ ಫೋಟೊ ಅಳವಡಿಸುವಂತೆ ಒತ್ತಾಯ ಮಾಡಿತು.
ಸಾವರ್ಕರ್ ವಿಚಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಕಾಯುತ್ತಿದ್ದ ಬಿಜೆಪಿ ಈಗ ಮೌನವಾಗಿದೆ. ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದ ಬಹುತೇಕ ಅಸ್ತ್ರಗಳು ಬಳಕೆಯಾಗದೇ ಉಳಿದುಹೋಗಿವೆ. ಇಷ್ಟಾದ ನಂತರವೂ, ಸಿದ್ಧವಾಗಿಟ್ಟುಕೊಂಡಿದ್ದ ಅಸ್ತ್ರ ವ್ಯರ್ಥವಾಗುವುದು ಬೇಡ ಎಂದು ಕೆಲವು ಟ್ವೀಟ್‌ಗಳನ್ನು ಕರ್ನಾಟಕ ಬಿಜೆಪಿ ಮಾಡಿದೆ.
“1970 ರಲ್ಲಿ ಇಂದಿರಾ ಗಾಂಧಿ ಸರ್ಕಾರ ವೀರ ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿತ್ತು. ಸಾವರ್ಕರ್ ಕುರಿತು ಡಾಕ್ಯುಮೆಂಟರಿ ನಿರ್ಮಾಣಕ್ಕಾಗಿ ಸಾವರ್ಕರ್ ಸ್ಮಾರಕ ಸಮಿತಿಗೆ ಸ್ವತಃ ಇಂದಿರಾ ಗಾಂಧಿ ದೇಣಿಗೆ ನೀಡಿದ್ದರು. ಕಾಂಗ್ರೆಸಿನ ಇತಿಹಾಸ ಪ್ರಜ್ಞೆ ಪ್ರಧಾನಮಂತ್ರಿ ಬದಲಾದಂತೆ ಬದಲಾಗುವುದೇ?”
“ಸಾವರ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಖುದ್ದು ಸಾವರ್ಕರ್ ಹೋರಾಟವನ್ನು ಕೊಂಡಾಡಿ ಅವರೊಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿ ಪತ್ರ ಬರೆದಿದ್ದರು. ಇದರ ಜೊತೆಗೆ #VeerSavarkar ಸ್ಮಾರಕ ನಿಧಿಗೆ ವೈಯುಕ್ತಿಕವಾಗಿ 11,000 ರೂಪಾಯಿ ದೇಣಿಗೆ ಕೂಡಾ ನೀಡಿದ್ದರು.”
“ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷಕ್ಕೆ ಜನರಿಗಿಂತ ನಿಮ್ಹಾನ್ಸ್ ಆಸ್ಪತ್ರೆಯ ನುರಿತ ಮನೋವೈದ್ಯರ ಅವಶ್ಯಕತೆ ಹೆಚ್ಚಾಗಿದೆ. ಪರದೇಶಿ ಟಿಪ್ಪುವನ್ನು ಹೊಗಳುವವರು, ದೇಶಪ್ರೇಮಿ ಸಾವರ್ಕರ್ ಫೋಟೊ ಕಂಡರೂ ಉರಿದು ಬೀಳುವವರು ಒಂದೋ ದೇಶವಿರೋಧಿಯಾಗಿರಬೇಕು ಅಥವಾ ಮಾನಸಿಕ ಅಸ್ವಸ್ಥರಾಗಿರಬೇಕು!”
“ತಾಯಿ ಭಾರತಿಗೆ ಕನ್ನಡದಾರತಿ ಎತ್ತುವೆ ಎಂದ ಆಲೂರು ವೆಂಕಟರಾಯರಿಗೆ, ಭಾರತ ಜನನಿಯ ತನುಜಾತೆ ಎಂದ ಕುವೆಂಪುರವರಿಗೆ, ಭಾಷೆಯಲ್ಲ, ಕಾವ್ಯವೇ ನವಮೇಘರೂಪ ಎಂದ ಬೇಂದ್ರೆಯವರಿಗೆ ಪ್ರೇರಣೆಯಾದವರು ಸಾವರ್ಕರ್. ಅಂಥಹ ವೀರ ಸಾವರ್ಕರ್ ಅವರು ಕಾಂಗ್ರೆಸ್ಸಿಗೆ ಮಾತ್ರ ವರ್ಜ್ಯವಾಗುವುದೇಕೆ?”
“ಕಾಂಗ್ರೆಸ್ ಇಂದು ಸಾವರ್ಕರ್‌ರನ್ನು ವಿರೋಧಿಸಬಹುದು. ಆದರೆ ಸಾವರ್ಕರ್‌ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವವರ ಸಾಲಲ್ಲಿ ಗಾಂಧೀಜಿಯೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್‌ರನ್ನು ಪ್ರೀತಿಯಿಂದ ʼಭಾಯ್ʼ ಎಂದು ಸಂಬೋಧಿಸುತ್ತಿದ್ದರು. ಕಾಂಗ್ರೆಸ್ ಪಕ್ಷವು ಗಾಂಧೀಜಿಯನ್ನೂ ವಿರೋಧಿಸುವುದೇ?”
ಎನ್ನುವಂತಹ 11 ಟ್ವೀಟ್ ಮಾಡಿದೆ. ಆದರೆ, ಈ ಬಾರಿ ಸಾವರ್ಕರರನ್ನು ಕಾಂಗ್ರೆಸ್ ವಿರೋಧವನ್ನೇ ಮಾಡಿಲ್ಲವಾದ್ಧರಿಂದ ಈ ಟ್ವೀಟ್‌ಗಳು ಗಾಳಿಯಲ್ಲಿ ಗುಂಡುಹೊಡೆದಂತೆ ಕಾಣುತ್ತಿವೆ.
ಮುಂದೇನು ಕಥೆ?
ಬ್ರಿಟಿಷರಿಗೆ ಸಾವರ್ಕರ್ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿದರೆ, ಅವರ ಫೋಟೊ ಅಳವಡಿಸುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವಿಷ್ಟನ್ನು ಬಿಟ್ಟರೆ, ಫೋಟೊ ಅಳವಡಿಸುವುದಕ್ಕೆ ವಿರೋಧವಿಲ್ಲ, ಮತ್ತಷ್ಟು ಜನರ ಫೋಟೊ ಅಳವಡಿಸಬೇಕಾಗಿತ್ತು ಎಂದು ಕಾಂಗ್ರೆಸ್‌ನ ಒಟ್ಟಾರೆ ನಡೆಯಾಗಿತ್ತು.
ಸಾವರ್ಕರ್ ಕುರಿತು ಇಟ್ಟ ನಡೆಯನ್ನೇ ಮುಂದಿನ ದಿನಗಳಲ್ಲಿಯೂ ಇಟ್ಟರೆ ಹೇಗೆ ಎಂಬ ಚಿಂತನೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಬಿಜೆಪಿ ಎತ್ತುವ ಪ್ರಶ್ನೆಗಳಿಗೆ ಉತ್ತರವನ್ನೇ ನೀಡದೆ ತನ್ನದೇ ಅಜೆಂಡಾಗಳ ಮೂಲಕ ನಡೆದರೆ ವಿವಾದಗಳಿಂದ ದೂರವಾಗಿರಬಹುದು, ಬಿಜೆಪಿಗೆ ಅನಗತ್ಯ ಲಾಭವನ್ನು ತಂದುಕೊಡುವುದನ್ನೂ ತಪ್ಪಿಸಬಹುದು ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿವೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಸಾವರ್ಕರ್ ಸೇರಿ 7 ಮಹನೀಯರ ಫೋಟೊ ಅನಾವರಣ; ವಿರೋಧಿಸದ ಕಾಂಗ್ರೆಸ್ ಬುದ್ಧಿವಂತಿಕೆಯ ನಡೆ