ಬೆಂಗಳೂರು: ಶಿವಮೊಗ್ಗ ಕಾಂಗ್ರೆಸ್ (Congress politics) ಒಡೆದ ಮನೆಯಾಗಿರುವುದು ಸ್ಪಷ್ಟವಾಗಿದೆ. ಶಿಕ್ಷಣ ಸಚಿವರಾಗಿರುವ ಸೊರಬ ಮಧು ಬಂಗಾರಪ್ಪ (Madhu Bangarappa) ಮತ್ತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ (Beluru gopalakrishna) ನಡುವೆ ನೇರಾನೇರ ವಾಗ್ದಾಳಿಗಳು ನಡೆಯುತ್ತಿವೆ. ಒಂದು ಕಡೆ ಮಧು ಬಂಗಾರಪ್ಪ ಅವರು ಬೇಳೂರು ಅವರು ಇಲ್ಲದೆಯೇ ಪ್ರಗತಿ ಪರಿಶೀಲನಾ ಸಭೆ ನಡೆಸಿದರೆ, ಇತ್ತ ಬೇಳೂರು ಅವರು ಬೆಂಗಳೂರಿನಲ್ಲಿ ಮಧು ಬಂಗಾರಪ್ಪಗೆ ಅಹಂ ತಲೆಗೇರಿದೆ ಎಂದಿದ್ದಾರೆ.
ʻʻಸಚಿವರಿಗೆ ಸ್ವಲ್ಪ ಅಹಃ ಜಾಸ್ತಿ ಆಗಿದೆ. ಅಹಃ ಜಾಸ್ತಿ ಆದಾಗ ಏನು ಮಾಡೋಕೆ ಆಗಲ್ಲ. ಅಧಿಕಾರ ಬಂದ ಸಂದರ್ಭದಲ್ಲಿ ಪಿತ್ತ ನೆತ್ತಿಗೆರಿದಾಗ ಇವೆಲ್ಲವೂ ಆಗುತ್ತೆ. ಸಚಿವರು ತಾಳ್ಮೆಯಿಂದ ಕ್ಷೇತ್ರದ ಶಾಸಕರನ್ನ ಕರೆದುಕೊಂಡು ಹೋಗಬೇಕು. ಬೇರೆ ಸಚಿವರು ನೋಡಿ ಎಷ್ಟು ಚೆನ್ನಾಗಿ ಮಾತಾಡ್ತಾರೆ. ಜನರ ಜೊತೆಗೆ ಹೇಗೆ ಇರ್ತಾರೆ ಅಂತ ನೋಡಿ ಕಲಿಯಬೇಕುʼʼ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಹೇಳಿದರು.
ಜಿಲ್ಲೆಯಲ್ಲಿ ಪಕ್ಷ ಎರಡು ಭಾಗ ಆಗಿದೆ. ಅದನ್ನು ಸರಿಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ಏನು ಮಾಡಬೇಕು ಅಂತ ನೋಡಬೇಕು. ನಮಗೂ ಜವಾಬ್ದಾರಿ ಇದೆ, ಅವರಿಗಿಂತ ಹೆಚ್ಚು ಜವಾಬ್ದಾರಿ ಇದೆ. ನಮ ಪಕ್ಷದಲ್ಲೇ ಇದ್ದು ಹುಳುಕು ಮಾಡೋದಲ್ಲ. ಯಡಿಯೂರಪ್ಪ ಮಕ್ಕಳನ್ನು ಸೋಲಿಸಬೇಕು ಎಂದು ಬೇಳೂರು ಗೋಪಾಲಕೃಷ್ಣ ಕುಟುಕಿದ್ದಾರೆ.
ಈಶ್ವರಪ್ಪ ಅವರದು ಹರಕು ನಾಲಗೆ
ʻʻಡಿ.ಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆʼʼ ಎಂಬ ಈಶ್ವರಪ್ಪ ಹೇಳಿಕೆಗೆ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದ್ದು, ಈಶ್ವರಪ್ಪ ಹಿರಿಯ ನಾಯಕರು, ಅವರದ್ದು ಹರಕು ನಾಲಗೆ. ಏನ್ ಬೇಕಾದರೂ ಮಾತಾಡ್ತಾರೆ. ಅವರ ಮೇಲೆ ಕೇಸ್ ಇಲ್ವಾ..? ಕೋರ್ಟ್ ನಲ್ಲಿ ಕೇಸ್ ಇರೋರೆಲ್ಲ ಜೈಲಿಗೆ ಹೋಗ್ತಾರೆ ಅಂತ ಹೇಳೋಕೆ ಆಗುತ್ತಾ..? ಅವರ ಬಗ್ಗೆ ಮಾತಾಡೋಕೆ ಅಸಹ್ಯ ಆಗುತ್ತದೆ. ಈಶ್ವರಪ್ಪ ಅಂತ ಹೇಸಿಗೆ ಮನಸ್ಸನ್ನು ನಾನು ನೋಡಿಲ್ಲ. ಅದಕ್ಕೆ ನಾನು ಮಾತಾಡಲ್ಲʼʼ ಎಂದು ಹೇಳಿದರು.
ಇದನ್ನೂ ಓದಿ: Hosanagara News: ನೀರು, ಮೇವು ಅಭಾವವಾಗದಂತೆ ನೋಡಿಕೊಳ್ಳಿ; ಪಿಡಿಒಗಳಿಗೆ ಮಧು ಬಂಗಾರಪ್ಪ ಸೂಚನೆ
ಬಿಜೆಪಿಗೆ ಯಡಿಯೂರಪ್ಪನವರೇ ಮೋಸ ಮಾಡಿದ್ರಾ?
ʻʻಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆʼʼ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೇಳೂರು ಗೋಪಾಲಕೃಷ್ಣ ಅವರು, ʻʻಯಡಿಯೂರಪ್ಪ ಅವರು ಒಂದು ಮಾತು ತಿಳಿದುಕೊಳ್ಳಬೇಕು. ಹಿಂದೆ ಮಿಷನ್ 150 ಅಂತ ಹೇಳಿ ಯಡಿಯೂರಪ್ಪ ರಾಜ್ಯ ಓಡಾಡಿದ್ರು. ಅವರಿಗೆ ಬರೀ 65 ಸೀಟ್ ಬಂದಿದೆ. ಅವರ ನಾಯಕತ್ವದಲ್ಲೇ ಚುನಾವಣೆ ನಡೆದಿತ್ತು. ಮೋದಿ ಅವರನ್ನು ಕರ್ಕೊಂಡು ಬಂದು ರಾಜ್ಯದಲ್ಲಿ ಓಡಾಡಿದ್ದಾರೆ/ ಆದರೂ ಅಧಿಕಾರಕ್ಕೆ ಬಂದಿಲ್ಲ. ಆದರೆ, ನಮಗೆ ರಾಜ್ಯದಲ್ಲಿ 136 ಸೀಟ್ ಜನ ಬೆಂಬಲ ಕೊಟ್ಟಿದ್ದಾರೆ. ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲʼʼ ಎಂದು ಹೇಳಿದರು.
ʻʻಯಡಿಯೂರಪ್ಪ ಅವರು ತಮ್ಮ ಮಗ ರಾಜ್ಯ ಬಿಜೆಪಿ ಅಧ್ಯಕ್ಷ ಆದ ತಕ್ಷಣವೇ ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ. ಬೊಮ್ಮಾಯಿ ಇದ್ದಾಗ 150 ಸೀಟ್ ಬರುತ್ತೆ ಅಂತ ಯಡಿಯೂರಪ್ಪ ಹೇಳಿದ್ರಲ್ಚಾ..? ಯಾಕೆ ಬರಲಿಲ್ಲ? ಹಾಗಿದ್ದರೆ ಅವರೇ ಮೋಸ ಮಾಡಿರಬೇಕು. ಯಡಿಯೂರಪ್ಪ ಅವರೇ ಬಿಜೆಪಿ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಮಗ ಬಂದ ತಕ್ಷಣವೇ ಚುನಾವಣೆ ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂದರೆ ಬಿಜೆಪಿಗೆ ಅಪ್ಪ ಮಕ್ಕಳು ಸೇರಿ ಮೋಸ ಮಾಡಿರಬೇಕುʼʼ ಎಂದು ಹೇಳಿದ ಬೇಳೂರು ಅವರು, ʻʻಆಗಲೇ ಏನು ನಡೆಯಲಿಲ್ಲ ಈಗ ಏನ್ ನಡೆಯುತ್ತೆ..?ʼʼ ಎಂದು ಕೇಳಿದ್ದಾರೆ.
ಬೇಳೂರು ಇಲ್ಲದಾಗ ಕಚೇರಿಗೆ ಹೋದ ಮಧು ಬಂಗಾರಪ್ಪ
ಈ ನಡುವೆ, ಸಚಿವ ಮಧು ಬಂಗಾರಪ್ಪ ಅವರು ಬೇಳೂರು ಗೋಪಾಲ ಕೃಷ್ಣ ಅವರು ಇಲ್ಲದೆ ಇದ್ದಾಗ ಸಾಗರದ ಶಾಸಕರ ಕಚೇರಿಗೆ ಭೇಟಿ ನೀಡಿದ್ದಾರೆ. ಮಧು ಬಂಗಾರಪ್ಪ ಅವರು ಅಲ್ಲಿಗೆ ಭೇಟಿ ನೀಡಿದಾಗ ಬೇಳೂರು ಬೆಂಗಳೂರಿನಲ್ಲಿದ್ದರು. ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಕಚೇರಿಯಲ್ಲಿದ್ದವರು ಶಾಲು ಹಾಕಿ,ಮಾಲೆ ಹಾಕಿ ಸ್ವಾಗತಿಸಿದರು.