Site icon Vistara News

Congress Politics : ರೆಬೆಲ್‌ ಕೈ ನಾಯಕರಿಗೆ ಸ್ಪೆಷಲ್‌ ಹುದ್ದೆ; ರಾಯರೆಡ್ಡಿ, ಪಾಟೀಲ್‌, ದೇಶಪಾಂಡೆಗೆ ಬಂಪರ್

Basavaraja Rayareddy BR Patil RV Deshapande

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಲ್ಲಿ ಕಳೆದ ಕೆಲವು ಸಮಯದಿಂದ ರೆಬೆಲ್‌ ನಾಯಕರಂತೆ (Rebel Congress Leaders) ವರ್ತಿಸುತ್ತಿದ್ದ ಇಬ್ಬರು ನಾಯಕರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸ್ಪೆಷಲ್‌ ಹುದ್ದೆಯನ್ನೇ ಸೃಷ್ಟಿಸಿದ್ದಾರೆ. ಇನ್ನೊಬ್ಬ ಹಿರಿಯ ನಾಯಕರಿಗೆ ಗೌರವದ ಹೊಣೆಗಾರಿಕೆ ನೀಡಿದ್ದಾರೆ (Congress Politics).

ಕೊಪ್ಪಳ ಜಿಲ್ಲೆ ಯಲಬುರ್ಗಾ ಕ್ಷೇತ್ರದ ಶಾಸಕರಾಗಿರುವ ಬಸವರಾಜ ರಾಯರೆಡ್ಡಿ (Basavaraja RayaReddy) ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಅಳಂದ ಕ್ಷೇತ್ರದ ಶಾಸಕರಾಗಿರುವ ಬಿ.ಆರ್‌. ಪಾಟೀಲ್‌ (MLA BR Pateel) ಅವರನ್ನು ಸಿಎಂ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಇನ್ನು ಉತ್ತರ ಕನ್ನಡದ ಹಳಿಯಾಳ ಕ್ಷೇತ್ರದ ಶಾಸಕರಾಗಿರುವ ಆರ್‌.ವಿ ದೇಶಪಾಂಡೆ (RV Deshapande) ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮೂವರಿಗೂ ಇದು ಸಂಪುಟ ದರ್ಜೆ ಸ್ಥಾನಮಾನವಾಗಿದೆ.

ಇವರಲ್ಲಿ ಬಸವರಾಜ್ ರಾಯರೆಡ್ಡಿ ‌ ಮತ್ತು ಬಿ.ಆರ್‌ ಪಾಟೀಲ್‌ ಅವರು ಮುಖ್ಯಮಂತ್ರಗಳಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಮತ್ತು ಸಚಿವರ ಚಟುವಟಿಕೆಗಳನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ನಲ್ಲಿ ಬಂಡಾಯ ಚಟುವಟಿಕೆ ನಡೆಯುತ್ತಿದೆ ಎಂಬಂತೆ ಬಿಂಬಿಸಿದವರು. ಇಬ್ಬರೂ ಸಚಿವ ಖಾತೆಯ ಆಕಾಂಕ್ಷಿಗಳಾಗಿದ್ದವರು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಅವರಿಗೆ ವಿಶೇಷ ಹುದ್ದೆಯನ್ನೇ ಸೃಷ್ಟಿಸಿ ಸಮಾಧಾನ ಮಾಡಲಾಗಿದೆ.

ಬಸವರಾಜ ರಾಯರೆಡ್ಡಿ ಅವರು ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಅಸಮಧಾನಗೊಂಡಿದ್ದರು. ಬಹುಕಾಲದಿಂದ ಪಕ್ಷದಲ್ಲಿದ್ದು, ಹಿಂದೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದ ಅವರಿಗೆ ತನಗಿಂತ ಕಿರಿಯರು ಸಚಿವರಾಗಿದ್ದಾರೆಂದು ಭಾರಿ ಸಿಟ್ಟಿತ್ತು. ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದ ಅವರನ್ನು ಸಮಾಧಾನ ಮಾಡುವುದು ಹೈಕಮಾಂಡ್‌ಗೆ ಭಾರಿ ಕಷ್ಟವಾಗಿತ್ತು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೂಡಾ ರಾಯರೆಡ್ಡಿ ತಿರಸ್ಕರಿಸಿದ್ದರು.

ಬಸವರಾಜ ರಾಯ ರೆಡ್ಡಿ ಅವರು ಹಿಂದಿನಿಂದಲೂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಹಿಂದೆ ಸರ್ಕಾರದ ದಿಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡಿದ್ದರು. ಅವರನ್ನು ಸಮಾಧಾನ ಮಾಡುವುದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎಂಬ ಮಾತು ಕೇಳಿಬಂದಿತ್ತು. ಈಗ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಸಿಎಂ ಆರ್ಥಿಕ ಸಲಹೆಗಾರ ಹುದ್ದೆ ನೀಡುವ ಮೂಲಕ ರಾಯರೆಡ್ಡಿ ಅಸಮಾಧಾನ ತಣ್ಣಗಾಗಿಸಿದೆ ಹೈಕಮಾಂಡ್.

ಇದನ್ನೂ ಓದಿ: Congress Karnataka : ಬಿ.ಆರ್.‌ ಪಾಟೀಲ್‌ ಪತ್ರ ಬರೆದ ಬೆನ್ನಲ್ಲೇ ಬುಲಾವ್‌; ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಸಿಎಂ

ಇನ್ನು ಬಿ.ಆರ್‌. ಪಾಟೀಲ್‌ ಅವರು ಕೂಡಾ ತಮ್ಮ ಅಸಮಾಧಾನವನ್ನು ನೇರವಾಗಿ ಪತ್ರ ಬರೆಯುವ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಮುಖ್ಯವಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಗುರಿಯಾಗಿಟ್ಟುಕೊಂಡು ಅವರು ದಾಳಿ ಮಾಡುತ್ತಿದ್ದರು. ಸಚಿವರು ತಮಗೆ ಸಹಕಾರ ನೀಡುತ್ತಿಲ್ಲ ಎಂಬ ಅವರ ದೂರಿಗೆ ಒಂದು ಹಂತದಲ್ಲಿ ಸರ್ಕಾರವೇ ಕಂಪಿಸಿ ಹೋಗಿತ್ತು. ಸಿದ್ದರಾಮಯ್ಯ ಅವರು ಎಲ್ಲ ಶಾಸಕರ ಸಭೆಯನ್ನು ಕರೆಯುವಷ್ಟರ ಮಟ್ಟಿಗೆ ಅವರ ಪತ್ರ ಕೆಲಸ ಮಾಡಿತ್ತು. ಆಗಲೂ ಕೂಡಾ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಬಿ.ಆರ್‌. ಪಾಟೀಲ್‌ ಯಾಕಿಷ್ಟು ರೆಬೆಲ್‌ ಆಗಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಈಗ ಸ್ಥಾನಮಾನದ ಉತ್ತರ ನೀಡಲಾಗಿದೆ. ತಮ್ಮ ಆಪ್ತರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ ತಮಗೆ ಹುದ್ದೆ ಸಿಕ್ಕಿಲ್ಲ ಎಂಬ ಸಿಟ್ಟಿನಿಂದ ಇವರು ಈ ರೀತಿ ಗಮನ ಸೆಳೆದಿದ್ದರು ಎನ್ನಲಾಗಿದೆ.

ಇದನ್ನೂ ಓದಿ : Congress Politics : ಮತ್ತೆ ಸಿಡಿದೆದ್ದ ರಾಯರೆಡ್ಡಿ; ಸಚಿವರು ಮಾತ್ರವಲ್ಲ ಈಗ ಅಧಿಕಾರಿಗಳೂ ಮಾತು ಕೇಳ್ತಿಲ್ಲ!

ಇನ್ನು ಹಳಿಯಾಳ ಕ್ಷೇತ್ರದ ಶಾಸಕರಾಗಿರುವ ಆರ್.ವಿ ದೇಶಪಾಂಡೆ ಅವರಿಗೆ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷರ ಸ್ಥಾನಮಾನ ನೀಡಲಾಗಿದೆ. ಆರ್‌.ವಿ. ದೇಶಪಾಂಡೆ ಅವರು ಕೂಡಾ ಸಿದ್ದರಾಮಯ್ಯ ಆಪ್ತರೆ. ಆದರೆ, ವಯಸ್ಸು ಮತ್ತು ಒತ್ತಡವನ್ನು ಪರಿಗಣಿಸಿ ಅವರಿಗೆ ಸಂಪುಟದಲ್ಲಿ ಹುದ್ದೆ ಸಿಕ್ಕಿರಲಿಲ್ಲ. ಅದಕ್ಕೆ ಪ್ರತಿಯಾಗಿ ಈಗ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ಸಿಕ್ಕಿದೆ.

Exit mobile version