ಬೆಂಗಳೂರು: ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ (Protest Against central Government) ಮಾಡುವ ರಾಜಕೀಯ ಸ್ಟಂಟ್ (political Stunt) ಮಾಡುತ್ತಿದೆ (Congress Protest) ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದಾರೆ. ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಹಳೆ ಚಾಳಿ ಬಿಟ್ಟಿಲ್ಲ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ರೈತ ವಿರೋಧಿ ಸರಕಾರವಿದೆ. ಈ ಸರ್ಕಾರ ಒಂಬತ್ತು ತಿಂಗಳಿಂದ ಒಂದು ರೂಪಾಯಿನೂ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ ಎನ್ನುವುದನ್ನು ಬೊಟ್ಟು ಮಾಡಿದರು.
14ನೇ ಹಣಕಾಸು ಆಯೋಗಕ್ಕಿಂತ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹಣ ಕಡಿಮೆ ಆಗಿದೆ ಅಂತ ಹೇಳಿದ್ದಾರೆ. 15ನೇ ಹಣಕಾಸು ಆಯೋಗದ ಸಮಿತಿ ಬಂದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಯೋಗಕ್ಕೆ ಸರಿಯಾಗಿ ಮಾಹಿತಿ ನೀಡಿಲ್ಲ ಹೀಗಾಗಿ 15ನೇ ಹಣಕಾಸು ಆಯೋಗದಲ್ಲಿ ಶೇಕಡಾ 4.7ರಿಂದ ಶೇ. 3.6ಕ್ಕೆ ಕಡಿಮೆಯಾಗಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಆರೋಪಿಸಿದರು ಬಸವರಾಜ ಬೊಮ್ಮಾಯಿ.
ಸತ್ಯ ಮುಚ್ಚಿಟ್ಟು ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ
ಯುಪಿಎ ಅವಧಿಯಲ್ಲಿ 2004-14 ರವರೆಗೆ ತೆರಿಗೆ ಮೂಲಕ ರಾಜ್ಯಕ್ಕೆ 81795 ಕೋಟಿ ಬಂದಿತ್ರು. ಎನ್ ಡಿಎ ಅವಧಿಯಲ್ಲಿ 2,82,791 ಕೋಟಿ ರೂ. ಹಣ ಬಂದಿದೆ. ಅಭಿವೃದ್ದಿ ಅನುದಾನ ಯುಪಿಎ ಅವಧಿಯಕಲ್ಲಿ 60,779 ಕೋಟಿ ರೂ. ಬಂದಿದೆ. ಮೋದಿ ಅವದಿಯಲ್ಲಿ 2,08,882 ಕೋಟಿ ಬಿಡುಗಡೆಯಾಗಿದೆ. ಇದರ ಅವಧಿ ಇನ್ನೂ ಎರಡು ವರ್ಷ ಇದೆ. 2026ರ ವರೆಗೆ 2.5 ಲಕ್ಷ ಕೋಟಿ ಮೀರಿ ತೆರಿಗೆ ಹಂಚಿಕೆ ಬರಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಇದ್ದಾಗ 14 ನೇ ಹಣಕಾಸಿನ ಶಿಫಾರಸ್ಸಿಗಿಂತ 1,51,309 ಕೋಟಿ ರೂ.ಗಳಿಗಿಂತ ಅಧಿಕವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದಲ್ಲದೇ ಕೇಂದ್ರದಿಂದ ರಾಜ್ಯಕ್ಕೆ ಬೇರೆ ಬೇರೆ ರೂಪದಲ್ಲಿ ಅನುದಾನ ಬರುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದ 2014 ರವರೆಗೆ ರಾಜ್ಯದಲ್ಲಿ ಕೇವಲ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಾಗಿತ್ತು. ಆದರೆ, ಮೋದಿ ಅವಧಿಯಲ್ಲಿ 2014-24 ರ ವರೆಗೆ 13,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.
"The protest against Shri @narendramodi's Central Government is a political stunt aimed at diverting attention from the mistakes of the state @INCKarnataka Government."@AmitShah @BJP4India @BJP4Karnataka @JPNadda pic.twitter.com/xYJdrRbpZ3
— Basavaraj S Bommai (@BSBommai) February 5, 2024
ರಾಜ್ಯಕ್ಕೆ ಬೇರೆ ಬೇರೆ ರೂಪದಲ್ಲಿ ಹಣ ಬಂದಿದೆ
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ 60 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಿದೆ. ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ 835 ಕೋಟಿ ಬಂದಿದ್ದು,ಎನ್ ಡಿಎ ಅವಧಿಯಲ್ಲಿ 11,000 ಕೋಟಿ ರೂ.ಗೆ ಏರಿದೆ. 2023-24ನೇ ಬಜೆಟ್ ನಲ್ಲಿ ರಾಜ್ಯಕ್ಕೆ ರೈಲ್ವೆಗೆ 7524 ಕೋಟಿ ರೂ. ಹಂಚಿಕೆಯಾಗಿದೆ. ರೈಲ್ವೆ ವಿದ್ಯುದೀಕರಣಕ್ಕೆ 1947 ರಿಂದ 2014 ರವರೆಗೆ ರಾಜ್ಯದಲ್ಲಿ ಕೇವಲ 16 ಕಿ.ಮೀ ಅಭಿವೃದ್ಧಿ ಆಗಿದ್ದು, ಎನ್ ಡಿಎ ಅವಧಿಯಲ್ಲಿ 3265 ಕಿ.ಮೀ ರಾಜ್ಯದಲ್ಲಿ ರೈಲ್ವೆ ವಿದ್ಯುದೀಕರಣವಾಗಿದೆ. ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ 10 ಕೋಟಿ ಕೊರೊನಾ ಉಚಿತ ಲಸಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದು, ಅದೆಲ್ಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳದೆ ಮರೆಮಾಚುತ್ತಿದ್ದಾರೆ ಎಂದು ಹೇಳಿದರು.
ಕೆಂದ್ರದ ಸೆಸ್ ಕುರಿತು ಸಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸೆಸ್ ಎನ್ ಡಿಎ ಅವಧಿಯಲ್ಲಿ ಆರಂಭವಾಗಿಲ್ಲ ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ಯುಪಿಎ ಅವಧಿಯಲ್ಲಿ ಯಾಕೆ ಅದನ್ನು ತೆಗೆದು ಹಾಕಲಿಲ್ಲ ಎಂದು ಪ್ರಶ್ನಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ 5300 ಕೋಟಿ ರೂ. ಮೀಸಲಿಟ್ಡಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕೆಂದರೆ ರಾಜ್ಯ ಸರ್ಕಾರ ಶೇ 50% ಖರ್ಚು ಮಾಡಬೇಕು. ಅಲ್ಲದೇ ಕೇಂದ್ರದ ಹಣ ಬರಬೇಕಮದರೆ ಸರಿಯಾದ ರೀತಿಯಲ್ಲಿ ರಾಜ್ಯದಿಂದ ಪ್ರಸ್ತಾವನೆ ಕೊಡಬೇಕು. ಕೇವಲ ಪತ್ರ ಬರೆಯುವುದರಿಂದ ಯಾವುದೇ ಕೆಲಸ ಆಗುವುದಿಲ್ಲ.
ಫೆ. 7ರಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಕಾಂಗ್ರೆಸ್ ನವರು ರಾಜ್ಯದಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಪ್ರತಿಭಟನೆ ಮಾಡುವ ರಾಜಕೀಯ ಸ್ಟಂಟ್ ಮಾಡುತ್ತಿದ್ದಾರೆ. ಫೆ.7 ರಂದು ಸಿದ್ದರಾಮಯ್ಯ ಅವರ ಸರ್ಕಾರದ ವೈಫಲ್ಯ ವಿರೋಧಿಸಿ ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ರಾಜಕೀಯ ಸ್ಟಂಟ್‌ನಿಂದ ಲೋಕಸಭಾ ಚುನಾವಣೆ ಗೆಲ್ಲಲಾಗದು
ರಾಜ್ಯ ಸರ್ಕಾರ ಗ್ಯಾರೆಂಟಿ ಹೆಸರಿನಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತಿಲ್ಲ. ಇವರು ತಮ್ಮ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನೇನು ಲೋಕಸಭೆ ಚುನಾವಣೆ ಘೋಷಣೆ ಆದರೆ ಈ ವರ್ಷ ಯಾರಿಗೂ ಅನುದಾನ ಬಿಡುಗಡೆ ಮಾಡುವುದಿಲ್ಲ. ರಾಜ್ಯದಲ್ಲಿ ಇಷ್ಟುದೊಡ್ಡ ಪ್ರಮಾಣದ ಬರ ಬಿದ್ದಿದ್ದು, ಇದುವರೆಗೂ ಪರಿಹಾರ ನೀಡಿಲ್ಲ. ರೈತರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ. ಈ ರೀತಿಯ ರಾಜಕೀಯ ಸ್ಟಂಟ್ ಮಾಡುವುದರಿಂದ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುತ್ತೇವೆ ಎಂದುಕೊಂಡರೆ ಅದು ಅವರ ಭ್ರಮೆ ಎಂದು ಹೇಳಿದರು.
ಕೇಂದ್ರದಿಂದ ಬರ ಪರಿಹಾರ ಕೊಡಿಸಲು ಬಿಜೆಪಿ ಮಾಡಿರುವ ಪ್ರಯತ್ನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸಂಸದರು ಕೇಂದ್ರ ಸರ್ಕಾರದ ಜೊತೆಗೆ ಮಾತನಾಡಿದ್ದಾರೆ. ಶೀಘ್ರವೇ ಕೆಂದ್ರದಿಂದ ಬರ ಪರಿಹಾರ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಶ್ವೇತಪತ್ರ ಹೊರಡಿಸಲಿ
ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಗ್ಯಾರೆಂಟಿ ಯೊಜನೆಗಳು ಎಷ್ಟು ಜನರಿಗೆ ತಲುಪಿವೆ ಎಂದು ಶ್ವೇತಪತ್ರ ಹೊರಡಿಸಲಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಅಲ್ಲದೇ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಸಾಲ ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಮತ್ತಷ್ಟು ಸಾಲ ಮಾಡುತ್ತಾರೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮಾಡಿದ ಸಾಲದ ಹಣವನ್ನು ನಾವು ತೀರಿಸಿದ್ದೇವೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ತೆರಿಗೆ ಹಣ ಕಡಿಮೆಯಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿಯೇ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆದಿದ್ದು, ಗಣಿ ಬಾಧಿತ ನಾಲ್ಕು ಜಿಲ್ಲೆಗಳ ಅಭಿವೃದ್ಧಿಗೆ 25 ಸಾವಿರ ಕೊಟಿ ರೂ. ನಾವು ತಂದಿದ್ದೇವೆ. ಅದನ್ನು ಬಳಕೆ ಮಾಡಲು ಈಗಿನ ಸರ್ಕಾರ ಯೋಜನೆ ರೂಪಿಸಲಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: CM Siddaramaiah: 5 ವರ್ಷದಲ್ಲಿ 73 ಸಾವಿರ ಕೋಟಿ ರೂ. ಕಡಿತ; ಕೇಂದ್ರದ ವಿರುದ್ಧ ಸಿಎಂ ಗರಂ
ಟಿಕೆಟ್ ಗೊಂದಲ ಯಡಿಯೂರಪ್ಪ ಚರ್ಚಿಸುತ್ತಾರೆ
ಹಾವೇರಿ ಲೋಕಸಭಾ ಟಿಕೆಟ್ ವಿಚಾರದ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಯಲ್ಲಿ ಚರ್ಚೆ ನಡೆದಿದೆ ಎನ್ನುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಈಶ್ವರಪ್ಪ ಅವರೊಂದಿಗೆ ಮಾತನಾಡಿದೆ. ಅವರು ಜಗದೀಶ್ ಶೆಟ್ಟರ್ ಕೂಡಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಲ್ಲ ಅಂತ ಈಶ್ವರಪ್ಪ ಹೇಳಿದ್ದಾರೆ. ಟಿಕೆಟ್ ವಿಚಾರದಲ್ಲಿ ಯಡಿಯೂರಪ್ಪ ಅವರ ಬಳಿ ಯಾರಾದರೂ ಭೇಟಿ ಮಾಡಿ ಚರ್ಚೆ ಮಾಡಬಹುದು ಎಂದರು.
ಕೆಲವರು ತಮಗೆ ಟಿಕೆಟ್ ಸಿಕ್ಕಿದೆ ಎಂದು ಹೇಳಿಕೊಳ್ಳುತ್ತಿರಬಹುದು. ಆದರೆ, ಕೇಂದ್ರ ಸಮಿತಿ ಅಂತಿಮವಾಗಿ ತೀರ್ಮಾನ ಮಾಡಲಿದ್ದು, ಪ್ರಸಾದ ನಾವೇ ಪಡೆಯಲು ಸಾಧ್ಯವಿಲ್ಲ. ದೇವರು ಕೊಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.