ಬೆಂಗಳೂರು: ಲಂಡನ್ ಪ್ರವಾಸಕ್ಕಾಗಿ (London Tour) ಆನ್‌ಲೈನ್ ಟೂರ್ ಕಂಪನಿ ಮೂಲಕ ಬುಕ್ ಮಾಡಿದ ಹೋಟೆಲ್ ಸಿಗದೆ ಪರದಾಡಿದ ಗ್ರಾಹಕರೊಬ್ಬರಿಗೆ ಗ್ರಾಹಕ ನ್ಯಾಯಾಲಯ (Consumer Court) ದಂಡ ವಿಧಿಸಿದೆ. ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆನ್‌ಲೈನ್ ಪ್ರವಾಸ ಕಂಪನಿ (Online tour Company) ಮೇಕ್ ಮೈ ಟ್ರಿಪ್‌ಗೆ (MakeMy Trip) 1.45 ಲಕ್ಷ ರೂ. ದಂಡ ವಿಧಿಸಿದ್ದಲ್ಲದೆ, ಗ್ರಾಹಕರು ಬೇರೆ ಹೋಟೆಲ್ ವಾಸ್ತವ್ಯಕ್ಕೆ (Hotel facility) ಖರ್ಚು ಮಾಡಿದ ಹೆಚ್ಚುವರಿ ಹಣವನ್ನೂ ನೀಡಬೇಕು ಎಂದು ಸೂಚಿಸಿದೆ.
ಬೆಂಗಳೂರಿನ ಮಯೂರ್ ಭರತ್ ಎಂಬವರು ಲಂಡನ್ ಪ್ರವಾಸಕ್ಕೆ ಮೇಕ್ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್ ಮಾಡಿದ್ದರು. ಅವರಿಗೆ ಲಂಡನ್‌ಗೆ ಹೋದಾಗ ಉಳಿದುಕೊಳ್ಳಲು ಯಾವ ಹೋಟೆಲ್ ಎಂಬಿತ್ಯಾದಿ ಮಾಹಿತಿಗಳೆಲ್ಲವನ್ನೂ ಕಂಪನಿ ಒದಗಿಸಿತ್ತು. ಆದರೆ, ಅಲ್ಲಿ ಹೋಗಿ ನೋಡಿದಾಗ ಆ ಹೋಟೆಲ್ ಬುಕ್ ಆಗಿರಲಿಲ್ಲ. ಸಾಲದ್ದಕ್ಕೆ ಆ ಸಮಯದಲ್ಲಿ ವಿಂಬಲ್ಡನ್ ಕೂಟ ನಡೆಯುತ್ತಿದ್ದುದರಿಂದ, ಹಣ ಪಾವತಿಸುತ್ತೇವೆ ಎಂದರೂ ಆ ಹೋಟೆಲ್‌ನಲ್ಲಿ ಬೇರೆ ರೂಂ ಕೂಡಾ ಸಿಗಲಿಲ್ಲ. ಬಳಿಕ ಅವರು ತುಂಬ ಪರದಾಟ ಮಾಡಿ ಕೊನೆಗೆ ಇನ್ನೊಂದು ದುಬಾರಿ ಹೋಟೆಲ್‌ನಲ್ಲಿ ಉಳಿಯಬೇಕಾಗಿ ಬಂತು. ಇದನ್ನು ಪ್ರಶ್ನೆ ಮಾಡಿದಾಗ ಮೇಕ್ ಮೈ ಟ್ರಿಪ್ ಅಂತಿಮವಾಗಿ ತನ್ನ ತಪ್ಪನ್ನು ಒಪ್ಪಿಕೊಂಡು ಹೋಟೆಲ್ ಬಾಡಿಗೆ ಮರುಪಾವತಿ ಮಾಡಿತ್ತು. ಜತೆಗೆ ಸ್ವಲ್ಪ ಮಟ್ಟಿಗಿನ ಪರಿಹಾರವನ್ನೂ ನೀಡಿತ್ತು. ಆದರೆ, ಹೆಚ್ಚುವರಿಯಾಗಿ ಖರ್ಚಾದ ಎಲ್ಲ ಮೊತ್ತ, ಪರಿಹಾರ ನೀಡಬೇಕು ಎಂದು ಕೋರಿ ಮಯೂರ್ ಭರತ್ ಕೋರ್ಟ್ ಮೊರೆ ಹೊಕ್ಕಿದ್ದರು. ಅವರಿಗೆ ಈಗ ಜಯ ಲಭಿಸಿದೆ.
ದೂರುದಾರರು ಬೇರೆಡೆ ಹೋಟೆಲ್ ಬುಕ್ ಮಾಡಿದ್ದಕ್ಕಾಗಿ ಹೆಚ್ಚುವರಿಯಾಗಿ ನೀಡಿದ್ದ ರೂ 4.34 ಲಕ್ಷ ಪಾವತಿಸುವಂತೆಯೂ ಅಧ್ಯಕ್ಷೆ ಎಂ.ಶೋಭಾ , ಸದಸ್ಯರಾದ ಕೆ.ಅನಿತಾ ಶಿವಕುಮಾರ್ ಮತ್ತು ಸುಮಾ ಅನಿಲ್ ಕುಮಾರ್ ಅವರನ್ನೊಳಗೊಂಡ ವೇದಿಕೆ ಸೂಚಿಸಿದೆ.
ದೂರುದಾರರು ವಸತಿ ವ್ಯವಸ್ಥೆ ಪಡೆಯುವುದರಲ್ಲಿ ತೊಂದರೆ ಅನುಭವಿಸಿದ್ದು ಅನ್ಯಾಯ. ಅವರ ವಸತಿಗೆ ಮೇಕ್ ಮೈಟ್ರಿಪ್ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ದೂರುದಾರರು ಹೋಟೆಲ್ ಕೆಫೆ ರಾಯಲ್‌ನಲ್ಲಿ ರೂ 6,58,740 ಪಾವತಿಸಿ ಉಳಿದುಕೊಂಡರು. ಪ್ರತಿ ವರ್ಷ ಜೂನ್ ಕೊನೆಯ ವಾರದಲ್ಲಿ ಲಂಡನ್ನಲ್ಲಿ ವಿಂಬಲ್ಡನ್ ಟೆನಿಸ್ ಪಂದ್ಯಾವಳಿ ನಡೆಯುವುದರಿಂದ ಅಷ್ಟು ಭಾರೀ ಮೊತ್ತ ತೆತ್ತು ಅವರು ಆಗ ಉಳಿದುಕೊಳ್ಳುವಂತಾಯಿತು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Sourav Ganguly: ಮನೆಯಿಂದಲೇ ಗಂಗೂಲಿಯ ಮೊಬೈಲ್ ಕಳವು; ಡೇಟಾ ಸೋರಿಕೆ ಭಯ!
ಅರ್ಜಿದಾರ ಮಯೂರ್ ಭರತ್ ವಾದವೇನಾಗಿತ್ತು?
- ನಾಲ್ಕು ತಿಂಗಳು ಮುಂಚಿತವಾಗಿ ಹೋಟೆಲ್ ಕಾಯ್ದಿರಿಸಿ ಪೂರ್ಣ ಮೊತ್ತವನ್ನು ಪಾವತಿಸಿದರೂ, ಮೇಕ್ ಮೈಟ್ರಿಪ್ ಹೋಟೆಲ್ ಕಾಯ್ದಿರಿಸಲು ವಿಫಲವಾಗಿತ್ತು. ಇದರಿಂದ ತಾವು ಪರದಾಡುವಂತಾಗಿದ್ದಲ್ಲದೆ ಅಧಿಕ ಹಣ ತೆರುವಂತಾಗಿತ್ತು.
- ಬುಕಿಂಗ್ ಮೊತ್ತ ತನಗೆ ಮರುಪಾವತಿಯಾಗಿದೆಯಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ತಾವು ಹೆಚ್ಚುವರಿ ಹಣ ತೆರುವಂತಾದದ್ದಕ್ಕೆ ಪರಿಹಾರ ದೊರೆಯಲಿಲ್ಲ.
- ಬೇರೊಂದು ಹೋಟೆಲ್ ಕಾಯ್ದಿರಿಸಲು ತಗುಲಿದ ಹೆಚ್ಚುವರಿ ವೆಚ್ಚ ಭರಿಸಲು ಮೇಕ್ ಮೈ ಟ್ರಿಪ್‌ಗೆ ನಿರ್ದೇಶನ ನೀಡಬೇಕು.
- ತಾವು ಅನುಭವಿಸಿದ ತೊಂದರೆ, ಮಾನಸಿಕ ಯಾತನೆ ಹಾಗೂ ಒತ್ತಡಕ್ಕೆ ಪರಿಹಾರವಾಗಿ ರೂ 10,000 , ದಾವೆ ವೆಚ್ಚವಾಗಿ ರೂ 1,00,000 ಪಾವತಿಸಲು ಆದೇಶಿಸಬೇಕು.
ಮೇಕ್ ಮೈ ಟ್ರಿಪ್ ಕಂಪನಿ ವಾದ ಏನಿತ್ತು?
- ಹೋಟೆಲ್ ವ್ಯವಸ್ಥಾಪಕರು ಕೋಣೆ ಮೀಸಲಿಡದೇ ಇರುವುದಕ್ಕೆ ತನ್ನನ್ನು ಹೊಣೆಗಾರನನ್ನಾಗಿ ಮಾಡುವಂತಿಲ್ಲ.
- ನಾವು ಬುಕಿಂಗ್ ಮೊತ್ತವನ್ನು ವಾಪಸ್ ಮಾಡಿರುವುದರ ಜೊತೆಗೆ ರೂ 50,000 ಪರಿಹಾರ ಕೂಡ ನೀಡಿದ್ದೇವೆ. ಇದನ್ನು ದೂರುದಾರರು ನಿರಾಕರಿಸಿರುವುದರಿಂದ ದಂಡದೊಂದಿಗೆ ಅವರ ಅರ್ಜಿ ವಜಾಗೊಳಿಸಬೇಕು.
ಗ್ರಾಹಕರ ವ್ಯಾಜ್ಯ ನ್ಯಾಯಾಲಯದ ತೀರ್ಪಿನಲ್ಲಿ ಏನಿದೆ?
ಗ್ರಾಹಕ ವ್ಯಾಜ್ಯಗಳ ಆಯೋಗ ಹೇಳಿದ್ದೇನು?
- ಆಯೋಜಕನಾಗಿ ಕಾರ್ಯನಿರ್ವಹಿಸುವ ಮೇಕ್ ಮೈ ಟ್ರಿಪ್‌ನ ವಾದವು ಸಾಕಾಗುವುದಿಲ್ಲ . ಪ್ರಯಾಣಿಸುವಾಗ ಗ್ರಾಹಕರು ಅಂತಹ ಸೌಲಭ್ಯ ಒದಗಿಸುವವರ ಮೇಲೆ ವಿಶ್ವಾಸ ಇಟ್ಟಿರುತ್ತಾರೆ. ಹೋಟೆಲ್ ಮತ್ತು ಗ್ರಾಹಕರ ನಡುವೆ ಒಪ್ಪಂದದ ಗೌಪ್ಯತೆ ಇಲ್ಲದಿದ್ದಾಗ, ಉಂಟಾದ ಲೋಪಗಳಿಗೆ ಸೌಲಭ್ಯ ಒದಗಿಸುವವರೇ ಉತ್ತರಿಸಬೇಕು.
- ಬುಕಿಂಗ್ ಮೊತ್ತವನ್ನು ಮರುಪಾವತಿಸಲಾಗಿದ್ದರೂ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ದೂರುದಾರರಿಗೆ ಮೂಲ ಬುಕಿಂಗ್‌ಗಿಂತಲೂ ₹ 4,34,420 ಹೆಚ್ಚು ವೆಚ್ಚವಾಗಿದ್ದು ಮೇಕ್ ಮೈಟ್ರಿಪ್ ಕೇವಲ ರೂ 37,386 ಪರಿಹಾರವಾಗಿ ನೀಡಿದೆ.
- ಮೇಕ್ ಮೈಟ್ರಿಪ್ ಉಳಿದ 4,34,420 ರೂಪಾಯಿಗಳನ್ನು ಮರುಪಾವತಿಸಬೇಕು.
- ಗ್ರಾಹಕರಿಗೆ ಪರಿಹಾರವಾಗಿ 1,00,000 ರೂ.ಗಳನ್ನು ಮತ್ತು ದಾವೆ ವೆಚ್ಚವಾಗಿ 20,000 ರೂ.ಗಳನ್ನು ಪಾವತಿಸಬೇಕು.
- ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 39 (1) (ಜಿ) ಅಡಿಯಲ್ಲಿ ದಂಡನಾತ್ಮಕ ಹಾನಿಗಾಗಿ 25,000 ರೂ.ಗಳನ್ನು ಗ್ರಾಹಕ ಕಲ್ಯಾಣ ನಿಧಿಗೆ ಪಾವತಿಸಬೇಕು.