ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 158 ಹೊಸ ಕೋವಿಡ್ ಪ್ರಕರಣಗಳು (Corona Virus News) ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ (Covid Active Cases) ಸಂಖ್ಯೆ ಈ ಬಾರಿ ಇದೇ ಮೊದಲ ಬಾರಿಗೆ 500ರ ಗಡಿ ದಾಟಿವೆ. ಗುರುವಾರಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 568 ಆಗಿದೆ.
ಕಳೆದ 24 ಗಂಟೆಯಲ್ಲಿ 8350 ಟೆಸ್ಟ್‌ಗಳನ್ನು ಮಾಡಲಾಗಿದೆ. ಅದರಲ್ಲಿ, 6346 ಆರ್ ಟಿಪಿಸಿಆರ್ ಹಾಗೂ 2004 ರ‍್ಯಾಂಡಮ್ ಪರೀಕ್ಷೆಗಳನ್ನು ಮಾಡಲಾಗಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಗುರುವಾರ ದಾಖಲಾದ 158ರಲ್ಲಿ 85 ಬೆಂಗಳೂರಿನಲ್ಲೇ ಇವೆ. ಮೈಸೂರಿನಲ್ಲಿ 12 ಮತ್ತು ದಕ್ಷಿಣ ಕನ್ನಡದಲ್ಲಿ ಎಂಟು ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು 568 ಸಕ್ರಿಯ ಪ್ರಕರಣಗಳಲ್ಲಿ 514 ಕೇಸ್‌ಗಳು ಹೋಮ್ಐಸೋಲೇಷನ್‌ನಲ್ಲಿ (Home Isolation) ಇರಲು ಸೂಚನೆ ನೀಡಲಾಗಿದೆ. 54 ಕೇಸ್‌ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು 14 ಮಂದಿ.
ಮಾಸ್ಕ್ ಧರಿಸಿ ಓಡಾಡಿ, ವಯಸ್ಸಾದವರು ಎಚ್ಚರಿಕೆಯಿಂದಿರಿ: ಸಚಿವರ ಸೂಚನೆ
ಕೋವಿಡ್ JN.1 ರೂಪಾಂತರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇದುವರೆಗೂ 34 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ JN.1 ಸೋಂಕಿನ ಹರಡುವಿಕೆ ಸಾಮರ್ಥ್ಯ ಹೆಚ್ಚಿರುವುದು ಕಂಡುಬಂದಿದ್ದು ಹೊಸವರ್ಷಾಚರಣೆಯ ಸಂದರ್ಭದಲ್ಲಿ ಜನಸಂದಣಿಯಾಗುವ ಹಾಗು ಒಳಾಂಗಣ ಜನಸಂದಣಿ ಪ್ರದೇಶಗಳಲ್ಲಿ ಮುಂಜಾಗ್ರತವಾಗಿ ಸೂಕ್ತ ಕೋವಿಡ್ ಮಾಸ್ಕ್ ಧರಿಸಲು ಕೋರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.
60 ವರ್ಷ ಮೇಲ್ಪಟ್ಟವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇದನ್ನೂ ಓದಿ: New Year Celebration : ನ್ಯೂ ಇಯರ್ ಪಾರ್ಟಿಗೆ ಹೋಗ್ತೀರಾ? ನಿಮ್ಮ KYC ಕೊಡೋದು ಕಡ್ಡಾಯ
ಮುಂಬರುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನಸಂದಣಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಜನಸಂದಣಿಯಾಗುವುದನ್ನು ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದರ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.