ಬೆಂಗಳೂರು: ಹಿಂದಿನ ಕೊರೊನಾ ವೈರಸ್ (Corona virus news) ಮತ್ತು ಈಗ ಪತ್ತೆಯಾಗಿರುವ ಕೋವಿಡ್ ಉಪತಳಿ JN.1 (Covid Subvariant JN1) ಅಪಾಯಕಾರಿಯಲ್ಲ. ಹೀಗಾಗಿ ಯಾರೂ ಭಯಪಡಬೇಕಾಗಿಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸಿ ಎಂದು ಸಿಎಂ ಸಿದ್ದರಾಮಯ್ಯ (CM siddaramaiah) ಹೇಳಿದ್ದಾರೆ. ರಾಜ್ಯದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕಾಗಿಲ್ಲ (Mask is not Compulsary) ಮತ್ತು ಹೊಸ ವರ್ಷಾಚರಣೆಗೆ (New year Celebration) ಏನೂ ಅಡ್ಡಿ ಇಲ್ಲ, ಶಾಲೆಗೆ ಹೋಗುವ ಮಕ್ಕಳು ಮಾಸ್ಕ್ ಧರಿಸಿಕೊಂಡು ಹೋಗುವುದು ಕಡ್ಡಾಯವಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಅದರಲ್ಲಿ ಎಲ್ಲ ಮಾಹಿತಿಗಳನ್ನು ಪಡೆದುಕೊಂಡ ಸಿಎಂ ಸಿದ್ದರಾಮಯ್ಯ ಅವರು ತಾಂತ್ರಿಕ ಸಮಿತಿ ಸಲಹೆ ಪಾಲಿಸಬೇಕು. ಅದೇ ಹೊತ್ತಿಗೆ ಜನರು ಭಯಪಡಬಾರದು ಎಂದು ಸ್ಪಷ್ಟವಾಗಿ ಹೇಳಿದರು. ಡಿಸಿಎಂ ಡಿ ಕೆ ಶಿವಕುಮಾರ್, ಗೃಹ ಸಚಿವ ಡಾ ಜಿ ಪರಮೇಶ್ವರ, ಅರೋಗ್ಯ ಸಚಿವ ದಿನೇಶ್ ಗುಂಡೂರಾವ್, ವೈದ್ಯ ಶಿಕ್ಷಣ ಸಚಿವ ಡಾ ಶರಣ್ ಪ್ರಕಾಶ್ ಪಾಟೀಲ್ ಹಾಗೂ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದಿನ ಸರ್ಕಾರದಲ್ಲಾದ ತಪ್ಪು ಮರುಕಳಿಸಬಾರದು
ಹಿಂದಿನ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ಸಿಗದೆ ಚಾಮರಾಜನಗರ ಸೇರಿದಂತೆ ಹಲವು ಕಡೆ ದೊಡ್ಡ ಮಟ್ಟದ ಸಾವುಗಳು ಸಂಭವಿಸಿವೆ. ಆದರೆ, ಈ ಬಾರಿ ಅಂಥ ತಪ್ಪುಗಳು ಮರುಕಳಿಸಬಾರದು ಎನ್ನುವ ಸ್ಪಷ್ಟ ಸೂಚನೆ ನೀಡಿದ್ದಾಗಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಸೇರಿ ಇನ್ನಿತರ ಯಾವುದಕ್ಕೂ ಕೊರತೆ ಆಗಬಾರದು ಎಂದು ಅವರು ಹೇಳಿದರು.
ರಾಜ್ಯದಲ್ಲಿ 92 ಕೇಸುಗಳು ಪತ್ತೆಯಾಗಿದೆ. ಬೆಂಗಳೂರಲ್ಲಿ 80 ಪತ್ತೆಯಾಗಿದ್ದು 20 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಉಳಿದವರು ಮನೆಯಲ್ಲೇ ಇದ್ದಾರೆ. 20ರಲ್ಲಿ 7 ಮಂದಿ ICU ನಲ್ಲಿದ್ದಾರೆ. ಆದರೆ ಇವರಿಗೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ICUನಲ್ಲಿದ್ದಾರೆ. ರಾಜ್ಯದಲ್ಲಿ ದಿನಕ್ಕೆ 5000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.
ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪೂರ್ತಿಯಾಗಿ ಜಾರಿ ಮಾಡಬೇಕು. ಗಡಿ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ಆಗಬೇಕು ಎಂದ ಸಿದ್ದರಾಮಯ್ಯ, ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು ಎಂದರು.
ಇದನ್ನೂ ಓದಿ: corona virus news : ಕೋವಿಡ್ ಈ ಬಾರಿ ಡೇಂಜರಸ್ ಆಗಿಲ್ಲ, ಆದರೂ ಆಕ್ಸಿಜನ್ ರೆಡಿ ಇರಲಿ
ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಅಡ್ಡಿ ಇಲ್ಲ
ಕೋವಿಡ್ ಬಗ್ಗೆ ಆತಂಕ ಅನಗತ್ಯ. ಕ್ರಿಸ್ನಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಇದಕ್ಕೆ ಪ್ರತ್ಯೇಕ ಮಾರ್ಗಸೂಚಿಯ ಅಗತ್ಯ ಸದ್ಯಕ್ಕೆ ಕಂಡುಬಂದಿಲ್ಲ ಎಂದರು. ಎಲ್ಲರೂ ಮಾಸ್ಕ್ ಧರಿಸಬೇಕಾದ ಅಗತ್ಯವಿಲ್ಲ. ನಾವು ಶಾಲೆಗಳಲ್ಲಿ ಮಾಸ್ಕ್ ಹಾಕುವುದನ್ನು ಕಡ್ಡಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಯಾರ್ಯಾರು ಮಾಸ್ಕ್ ಧರಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ನೀಡಿದರು.
- 60 ವರ್ಷ ಮೀರಿದವರು ಮಾಸ್ಕ್ ಧರಿಸಿಕೊಂಡು ಓಡಾಡುವುದು ಕಡ್ಡಾಯ.
- ಅದರಲ್ಲೂ 60 ವರ್ಷ ಮೀರಿದ್ದು, ಆರೋಗ್ಯ ಸಮಸ್ಯೆಗಳಿದ್ದರೆ ಅವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿ.
- ಹೆಚ್ಚು ಜನ ಸೇರುವ ಜಾಗಕ್ಕೆ ಹೋಗುವಾಗ ಮಾಸ್ಕ್ ಧರಿಸುವುದು ಒಳ್ಳೆಯದು.
- ಜ್ವರ, ಶೀತ, ಕೆಮ್ಮು ಮತ್ತಿತರ ಸಮಸ್ಯೆ ಇರುವವರು ಮಾಸ್ಕ್ ಧರಿಸಬೇಕು.
- ಶಾಲಾ ಮಟ್ಟದಲ್ಲಿ ಕೊರೊನಾ ಮಾರ್ಗಸೂಚಿ ಬಿಡುಗಡೆ ಮಾಡುವವರೆಗೆ ತಕ್ಷಣಕ್ಕೆ ಮಾಸ್ಕ್ ಧಾರಣೆ ಕಡ್ಡಾಯವಲ್ಲ. ಆದರೆ, ಅನಾರೋಗ್ಯ ಹೊಂದಿರುವ ಮಕ್ಕಳು ಮಾಸ್ಕ್ ಧರಿಸಲಿ.
- ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಬಂದಿಲ್ಲ. ಹೀಗಾಗಿ ಮಾಧ್ಯಮಗಳು ಇದರನ್ನು ಓವರ್ ಪ್ಲೇ ಮಾಡಬಾರದು.
ಇದನ್ನೂ ಓದಿ: Covid Subvariant JN.1 : ಜನವರಿಯಲ್ಲಿ ರಾಜ್ಯದಲ್ಲಿ ಕೊರೊನಾ ಸ್ಫೋಟ; ತಜ್ಞರ ಎಚ್ಚರಿಕೆ
ಹಣದ ಕೊರತೆ ಇಲ್ಲ ಎಂದ ಸಿದ್ದರಾಮಯ್ಯ
ರಾಜ್ಯ ಸರ್ಕಾರದ ಬಳಿ ಕೋವಿಡ್ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಡೆಡಿಕೇಡೆಡ್ ಆಸ್ಪತ್ರೆಗಳನ್ನು ನಿಗದಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.