Site icon Vistara News

Cost of Living: ಭಾರತದಲ್ಲಿ ಬದುಕೋಕೆ ದುಬಾರಿ ನಗರವಿದು! ಬೆಂಗಳೂರಿನ ರ‍್ಯಾಂಕ್‌ ಎಷ್ಟಿದೆ ನೋಡಿ!

realty bangalore

ಹೊಸದಿಲ್ಲಿ: ಭಾರತದಲ್ಲಿ ಬದುಕಲು ದುಬಾರಿಯಾದ ನಗರ (costly city) ಯಾವುದು, ಅಗ್ಗದ ನಗರ (affordable city) ಯಾವುದು ಎಂಬ ಜೀವನವೆಚ್ಚದ (Cost of Living) ರ‍್ಯಾಂಕಿಂಗ್‌ ಪಟ್ಟಿಯನ್ನು ʼನೈಟ್ ಫ್ರಾಂಕ್ ಇಂಡಿಯಾʼ ಬಿಡುಗಡೆ ಮಾಡಿದೆ. ಇದು ದೇಶದ ಪ್ರಮುಖ ರಿಯಾಲ್ಟಿ (Real estate) ಕೌನ್ಸೆಲಿಂಗ್‌ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಪಟ್ಟಿಯ ಪ್ರಕಾರ ಗುಜರಾತಿನ ಅಹಮದಾಬಾದ್ (Ahmadabad) , ವಾಸಿಸಲು ಅತ್ಯಂತ ಕೈಗೆಟುಕುವ ಭಾರತೀಯ ನಗರವಂತೆ.

ನೈಟ್ ಫ್ರಾಂಕ್ ಬಿಡುಗಡೆ ಮಾಡಿರುವ ಈ ಸೂಚ್ಯಂಕ ಪಟ್ಟಿಯನ್ನು ಆಯಾ ನಗರದ ನಿವಾಸಿಗಳ ಸರಾಸರಿ ಮನೆ ಸಾಲದ ಮಾಸಿಕ ಕಂತು (home loan EMI – ಇಎಂಐ) ಹಾಗೂ ಮನೆಯವರ ಒಟ್ಟು ಸರಾಸರಿ ಆದಾಯಗಳನ್ನು (monthly income) ಪರಿಗಣಿಸಿ ಲೆಕ್ಕಾಚಾರ ಹಾಕಲಾಗಿದೆ. ಇದನ್ನು ನೈಟ್ ಫ್ರಾಂಕ್ ಅಫರ್ಡಬಿಲಿಟಿ ಇಂಡೆಕ್ಸ್ ಎಂದು ಕರೆಯಲಾಗಿದೆ. ಇದು ಇಎಂಐ ಹಾಗೂ ಆದಾಯದ ಅನುಪಾತ. ನೈಟ್ ಫ್ರಾಂಕ್ ಅಫರ್ಡೆಬಿಲಿಟಿ ಇಂಡೆಕ್ಸ್‌ನ ಸರಾಸರಿ ಮಟ್ಟ 40%. ಅಂದರೆ ಕುಟುಂಬಗಳು ಆ EMIಗೆ ಹಣ ನೀಡಲು ತಮ್ಮ ಆದಾಯದ 40% ಅನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಸೂಚಿಸುತ್ತದೆ. 50%ಕ್ಕಿಂತ ಹೆಚ್ಚಿನ EMI/ಆದಾಯ ಅನುಪಾತ ಕೈಗೆಟುಕುವಂತಿಲ್ಲ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕುಗಳು ಈ ಅನುಪಾತದಲ್ಲಿ ಸಾಲ ನೀಡಲು ಹಿಂಜರಿಯುತ್ತವೆ. ಈ ಸೂಚ್ಯಂಕವು 20 ವರ್ಷಗಳ ಸಾಲದ ಅವಧಿಯನ್ನು ಇಟ್ಟುಕೊಂಡಿದೆ.

ಅತ್ಯಂತ ದುಬಾರಿ ವಸತಿ ಮಾರುಕಟ್ಟೆಯಾಗಿ ಮುಂಬೈ ನಗರ ಹೊರಹೊಮ್ಮಿದೆ. ಮುಂಬೈಯಲ್ಲಿ ಈ ಅನುಪಾತ 55% ಇದೆ. ಅಂದರೆ ಕುಟುಂಬ ಸ್ವಂತ ಮನೆ ಹೊಂದಬೇಕಿದ್ದರೆ ಗೃಹ ಸಾಲಕ್ಕೆ ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ಪಾವತಿಸಬೇಕಾಗುತ್ತದೆ. ಹೈದರಾಬಾದ್ 31%ದೊಂದಿಗೆ ಎರಡನೇ ಅತ್ಯಂತ ದುಬಾರಿ ನಗರವಾಗಿದೆ. ಮೂರನೇ ಸ್ಥಾನದಲ್ಲಿ ರಾಷ್ಟ್ರೀಯ ರಾಜಧಾನಿ ದೆಹಲಿ ಇದೆ. ಇಲ್ಲಿ ಆದಾಯದ 30% ಅನ್ನು ಹೋಮ್ ತೆರಬೇಕು.

ಕರ್ನಾಟಕದ ಬೆಂಗಳೂರು ಮತ್ತು ತಮಿಳುನಾಡಿನ ಚೆನ್ನೈಗಳು EMIಗೆ 28% ಆದಾಯ ಅನುಪಾತದೊಂದಿಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿವೆ. ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಕುಟುಂಬ ತಮ್ಮ ಆದಾಯದ 26% ಅನ್ನು ಗೃಹ ಸಾಲದ EMIಗೆ ಪಾವತಿಸಬೇಕಾಗುತ್ತದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಕೂಡ ಇದೇ ದರ ಹೊಂದಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ವಾಸಿಸಲು ಅತ್ಯಂತ ಒಳ್ಳೆ ಭಾರತೀಯ ನಗರವಾಗಿದ್ದು, ಅಲ್ಲಿ ಸರಾಸರಿ ಕುಟುಂಬವು ತನ್ನ ಆದಾಯದ 23% ಅನ್ನು EMIಗೆ ಪಾವತಿಸಬೇಕಾಗುತ್ತದೆ.

ಕಳೆದ ಒಂದು ವರ್ಷದಲ್ಲಿ ಈ ನಗರಗಳಲ್ಲಿ ವಾಸಿಸುವುದು ಹೆಚ್ಚು ದುಬಾರಿಯಾಗಿದೆ. ನಗರಗಳಾದ್ಯಂತ ಈ ಇಎಂಐ- ಆದಾಯ ಅನುಪಾತಗಳು ಸುಮಾರು 1-2 ಶೇಕಡಾ ಪಾಯಿಂಟ್‌ಗಳಷ್ಟು ಹೆಚ್ಚಾಗಿವೆ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷದಿಂದ ತನ್ನ ಪ್ರಮುಖ ಸಾಲದ ದರವನ್ನು 250 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. ಇದು EMI ಅನ್ನು ಸರಾಸರಿ 14.4% ರಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: 3D printed post office: ಬೆಂಗಳೂರಿನಲ್ಲಿ ದೇಶದ ಮೊದಲ 3D ಪ್ರಿಂಟೆಡ್‌ ಅಂಚೆ ಕಚೇರಿ ಉದ್ಘಾಟನೆ; ಏನಿದರ ವೈಶಿಷ್ಟ್ಯ?

Exit mobile version