ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚಿಸಿರುವ ನಾಟಕ ʼಟಿಪ್ಪು ನಿಜ ಕನಸುಗಳುʼ ಪುಸ್ತಕ ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ವಿಧಿಸಿದೆ.
ರಫೀಉಲ್ಲ ಬಿ.ಎಸ್. ಎನ್ನುವವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ಬೆಂಗಳೂರಿನ 14ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ.
ಆನ್‌ಲೈನ್ ಸೇರಿ ಎಲ್ಲಿಯೂ ಮಾರಾಟ ಮಾಡದಂತೆ ತಡೆ ನೀಡಲಾಗಿದೆ. ಪುಸ್ತಕದಲ್ಲಿ ಅಜಾನ್ ಅನ್ನು ಅವಮಾನಿಸಲಾಗಿದೆ ಹಾಗೂ ಅನೇಕ ತಪ್ಪು ಮಾಹಿತಿಗಳನ್ನು ನೀಡಲಾಗಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತದೆ ಎಂದು ಅರ್ಜಿದಾರರು ದೂರಿದ್ದರು. ನ್ಯಾಯಾಲಯವು ಕೃತಿಯ ಲೇಖಕರು ಹಾಗೂ ಪ್ರಕಾಶಕರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ಈ ಕುರಿತು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಅಡ್ಡಂಡ ಸಿ ಕಾರ್ಯಪ್ಪ, ನಾನೊಬ್ಬ ನಾಟಕಕಾರನಾಗಿ ಕೃತಿಯನ್ನು ರಚಿಸಿದ್ದೇನೆ. ಈ ವಿಚಾರದಲ್ಲಿ ರಾಜಕೀಯವನ್ನು ಅನೇಕರು ಮಾಡುತ್ತಿದ್ದಾರೆ. ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ನಾನು ತೀರ್ಪಿನ ಬಗ್ಗೆ ತಿಳಿದುಕೊಂಡಿದ್ದೇನೆ. ನಮ್ಮ ನಾಡಕ ಪ್ರದರ್ಶನ ಎಂದಿನಂತೆ ನಡೆಯಲಿದೆ. ಇತಿಹಾಸದಲ್ಲಿ ಇರುವ ಅಂಶಗಳನ್ನು ಮಾತ್ರ ನಾನು ಕೃತಿಯಲ್ಲಿ ಉಲ್ಲೇಖ ಮಾಡಿದ್ದೇನೆ. ಸತ್ಯ ಹೇಳುವುದಕ್ಕೆ ನನಗೆ ಭಯವಿಲ್ಲ. ರಾಜಕೀಯಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.
ಇದನ್ನೂ ಓದಿ | Tippu Nija Kanasugalu | ನಮ್ಮ ಮನೆ ನಾಯಿಗೂ ಟಿಪ್ಪು ಹೆಸರಿಟ್ಟಿದ್ದೇವೆ ಎಂದ ಅಡ್ಡಂಡ ಕಾರ್ಯಪ್ಪ