ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 (COVID Subvariant JN.1) ಪತ್ತೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದಲ್ಲಿ ಸೋಮವಾರ ಮತ್ತು ಮಂಗಳವಾರ ಒಟ್ಟು ನಾಲ್ಕು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮೂರು ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಚಾಮರಾಜನಗರ ಮತ್ತು ರಾಮನಗರದಲ್ಲಿ ಒಂದೊಂದು ಕೇಸು ಕಂಡುಬಂದಿದೆ. ಆದರೆ, ಇದು ಸಾಮಾನ್ಯ ಕೊರೊನಾ ಪ್ರಕರಣಗಳು, ಕೋವಿಡ್ ಉಪತಳಿ ಜೆಎನ್ 1 ಅಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ (Health Minister Dinesh Gundu Rao) ಹೇಳಿದ್ದಾರೆ.
ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನಕ್ಕಾಗಿ ಸಚಿವ ದಿನೇಶ್ ಗುಂಡೂ ರಾವ್ ಅವರು ಮಂಗಳವಾರ ಸಂಜೆ ಆರೋಗ್ಯಾಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆಯ ಬಳಿಕ ಮಾತನಾಡಿದರು. ರಾಜ್ಯದಲ್ಲಿ ಇಲ್ಲಿಯ ವರೆಗೆ ಜೆ.ಎನ್ 1 ಪತ್ತೆ ಆಗಿಲ್ಲ ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದರು. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟ್ ಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು. ಬುಧವಾರ ಬೆಳಗ್ಗೆ ಕೇಂದ್ರದ ಆರೋಗ್ಯ ಸಚಿವರು ಎಲ್ಲಾ ರಾಜ್ಯದ ಆರೋಗ್ಯ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ.
ಸಭೆ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದು..
- ಕೋವಿಡ್ ಟೆಸ್ಟಿಂಗ್ ಹೆಚ್ಚಿಸಲು ಸೂಚನೆ ನೀಡಲಾಗಿದೆ.. ಮುಂಬರುವ ಶನಿವಾರದ ವೇಳೆಗೆ ಪ್ರತಿ ನಿತ್ಯ 5 ಸಾವಿರ ಪ್ರಕರಣಗಳ ಟೆಸ್ಟಿಂಗ್ ನಡೆಸುವಂತಾಗಬೇಕು.
- ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಸಿ ಕೋವಿಡ್ ಕುರಿತು ನಿಗಾ ಇಡುವಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಚಿವರ ಸೂಚನೆ.
- ಹೃದಯ ಸಂಬಂಧಿ, ಉಸಿರಾಟದ ಸಮಸ್ಯೆ, ಇನ್ಫೆಕ್ಷನ್ ಗಳಿಗೆ ಒಳಗಾದವರನ್ನು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟಿಂಗ್ ಒಳಪಡಿಸಲು ಸೂಚನೆ.
- ಆಕ್ಸಿಜನ್, ವೆಂಟಿಲೇಟರ್, ಐಸಿಯು ಬೆಡ್ ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿರಿಸಿಕೊಂಡು ಮುಂಜಾಗೃತವಾಗಿ ಸಜ್ಜಾಗಿರಬೇಕು.
- ವೈರಲ್ ಟ್ರಾನ್ಸಪೋರ್ಟ್ ಮೀಡಿಯಾ ಸಪ್ಲೆ ಮಾಡೋದಕ್ಕೆ ಕೇಳಲಾಗಿದೆ.
- ಹೊರ ರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ಲಕ್ಷಣಗಳಿದ್ದವರನ್ನ ಕಡ್ಡಾಯವಾಗಿ ಟೆಸ್ಟಿಂಗ್ ಒಳಪಡಿಸಬೇಕು.
- ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ. ಸದ್ಯಕ್ಕೆ ಗಡಿ ಬಂದ್ ಮಾಡುವ ಪರಿಸ್ಥಿತಿ ಇಲ್ಲ.
- ರಾಜ್ಯಾದ್ಯಂತ ಅಗತ್ಯ ಆರ್.ಟಿ.ಪಿ.ಸಿ.ಆರ್ ಟೆಸ್ಟಿಂಗ್ ಕಿಟ್ ಸರಬರಾಜಿಗೆ ಸೂಚನೆ.
ಇದನ್ನೂ ಓದಿ: COVID Subvariant JN1: ಕೋವಿಡ್ ರಕ್ಷಣೆಗೆ 2 ಮಾರ್ಗಸೂಚಿ; ಹಿರಿಯರು, ಗರ್ಭಿಣಿ, ತಾಯಂದಿರಿಗೆ ಮಾಸ್ಕ್ ಕಡ್ಡಾಯ
ಜನರಲ್ಲಿ ಭಯ ಸೃಷ್ಟಿ ಮಾಡುವುದು ಬೇಡ
ಈ ನಡುವೆ, ಸಭೆಯಲ್ಲಿ ಮಾತನಾಡಿದ ದಿನೇಶ್ ಗುಂಡೂ ರಾವ್ ಅವರು ಮುನ್ನೆಚ್ಚರಿಕೆ ವಹಿಸೋಣ. ಆದರೆ, ಜನರಲ್ಲಿ ಭಯ ಇಲ್ಲವೇ ಗೊಂದಲ ಹುಟ್ಟಿಸುವುದು ಬೇಡ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ JN 1 ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಬಳಿ ಹೆಚ್ಚು ಮಾಹಿತಿ ಇರುತ್ತದೆ. ಅದನ್ನು ಹಂಚಿಕೊಳ್ಳುತ್ತೇವೆ. ಗುರುವಾರ ಸಿಎಂ ಅವರು ಬೆಂಗಳೂರಿಗೆ ಬರುತ್ತಾರೆ. ಈಗಾಗಲೇ ಅವರ ಜತೆ ಮಾತನಾಡಿದ್ದೇನೆ. ಹೊಸ ರೂಪಾಂತರಿ ಬಗ್ಗೆ ತಿಳಿದುಕೊಂಡು ಸ್ಪಷ್ಟ ಮಾಹಿತಿ ಪಡೆದು ಹೆಜ್ಜೆ ಇಡುತ್ತೇವೆ ಎಂದರು.