ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷ ಜೂನ್‌ನಲ್ಲಿ ಆರಂಭವಾಗಲಿದ್ದು, 12-14 ವರ್ಷ ವಯಸ್ಸಿನ ಮಕ್ಕಳಲ್ಲಿ ಕೋವಿಡ್ ಲಸಿಕೆ ವಿತರಣೆಯ ಪ್ರಮಾಣ ತೀರ ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿಯ ಅಂಕಿ ಅಂಶಗಳ ಪ್ರಕಾರ 15-17 ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆಯ ಪ್ರಮಾಣ ಸುಧಾರಿಸಿದೆ. ಈ ವಯೋಮಾನದ ಮಕ್ಕಳ ಪೈಕಿ ಶೇ.68 ಮಂದಿಗೆ ಎರಡನೇ ಡೋಸ್ ಕೂಡ ಆಗಿದೆ. ಆದರೆ 12-14 ವಯಸ್ಸಿನ ಮಕ್ಕಳಲ್ಲಿ ಕೇವಲ ಶೇ.16 ಮಂದಿಗೆ ಮಾತ್ರ ಎರಡನೇ ಡೋಸ್ ಆಗಿದೆ. ಶಾಲೆಗೆ ಬೇಸಿಗೆ ರಜೆ ಇದ್ದುದು ಕೋವಿಡ್ ಲಸಿಕೆ ವಿತರಣೆ ಕಡಿಮೆಯಾಗಲು ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್ ಲಸಿಕೆ ಬಗ್ಗೆ ಅರಿವಿನ ಕೊರತೆ ಇರುವುದು ಕೂಡ ಮತ್ತೊಂದು ಕಾರಣವಾಗಿದೆ.
ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಯ ನೆರವಿನೊಂದಿಗೆ ಕೋವಿಡ್ ಲಸಿಕೆ ಅಭಿಯಾನವನ್ನು ಶಾಲೆಗಳ ವ್ಯಾಪ್ತಿಯಲ್ಲಿ ಹೆಚ್ಚಿಸಲು ತಜ್ಞರು ಸಲಹೆ ನೀಡಿದ್ದಾರೆ. ಜೂನ್‌ನಲ್ಲಿ ಶಾಲೆಗಳು ತೆರೆದ ಬಳಿಕ ಶೇ.100 ಲಸಿಕೆ ವಿತರಣೆ ನಡೆಯುವ ವಿಶ್ವಾಸ ಇದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.