ಹುಬ್ಬಳ್ಳಿ: ಕೋವಿಡ್ ವಿರುದ್ಧ ಹೋರಾಡಲು ಭಾರತದಲ್ಲಿ ವ್ಯಾಪಕವಾಗಿ ಕೋವಿಶೀಲ್ಡ್ ಲಸಿಕೆ (Covishield vaccine) ಬಳಸಲಾಗಿತ್ತು. ಇದೀಗ ಇದರ ಸೈಡ್ ಎಫೆಕ್ಟ್ (Side Effect) ಕುರಿತು ಆತಂಕ ಹೆಚ್ಚಾಗುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಭಾರತದಲ್ಲಿಯೂ ಹಲವಾರು ಪ್ರಕರಣಗಳು ನಡೆದಿದ್ದು, ಕೋವಿಡ್ ಹಾಗೂ ಅದರ ಲಸಿಕೆಯ ಬಗ್ಗೆ ಅನುಮಾನ ಮೂಡಿಸಿದ್ದವು. ರಾಜ್ಯದಲ್ಲಿ ಕೋವಿಶೀಲ್ಡ್ ಲಸಿಕೆಯ ಸೈಡ್ ಎಫೆಕ್ಟ್ ಆತಂಕ ಹೆಚ್ಚು ಮಾಡಿದ್ದು, ಈ ಬಗ್ಗೆ ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ್ದಾರೆ.
ಯಾವುದೇ ಔಷಧವನ್ನು ತೆಗೆದುಕೊಂಡಾಗ ಅಲ್ಪ ಪ್ರಮಾಣದ ಸೈಡ್ ಎಫೆಕ್ಟ್ ಇದ್ದೆ ಇರುತ್ತದೆ. ಆದರೆ ಈ ಕೋವಿಶೀಲ್ಡ್‌ನಿಂದ ಸ್ವಲ್ಪ ಪ್ರಮಾಣದ ಎಫೆಕ್ಟ್ ಆಗಿದೆ. ಹಾಗಂತ ಭಯ, ಆತಂಕಪಡುವ ಅವಶ್ಯಕತೆಯಿಲ್ಲ. ಏನೋ ಆಗಿ ಬಿಡುತ್ತೆ ಎಂಬ ಗಾಬರಿ ಪಡುವಂತಿಲ್ಲ. ಕೋವಿಶೀಲ್ಡ್ ತಯಾರಿಸುವ ಸಿರಮ್ ಇನ್ಸ್‌ಟಿಟ್ಯೂಟ್ ಬಗ್ಗೆ ಸಾಕಷ್ಟು ಆರೋಪಗಳಿವೆ. ಕೇಂದ್ರ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಎಲೆಕ್ಟೋರಲ್ ಬಾಂಡ್ ಕೊಟ್ಟಿದ್ದಾರೆ. ಸಿರಮ್ ಬಗ್ಗೆ ಸಾಕಷ್ಟು ಕಾಂಟ್ರವರ್ಸಿಗಳಿವೆ, ಆದರೆ ಕೋವಿಶಿಲ್ಡ್ ಲಸಿಕೆ ಬಗ್ಗೆ ಆತಂಕ ಬೇಡ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇನ್ನೂ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಎಫೆಕ್ಟ್ ಏನೂ ಆಗಿಲ್ಲ. ವ್ಯಾಕ್ಸಿನ್ ಕೊಟ್ಟು ಎರಡು ವರ್ಷ ಅಯಿತು. ಕೋಟ್ಯಂತರ ಜನರಿಗೆ ಲಸಿಕೆ ಕೊಡಲಾಗಿದೆ, ನಾಲ್ಕೈದು ಪ್ರಕರಣಗಳಲ್ಲಿ ಸೈಡ್ ಎಫೆಕ್ಟ್ ಆಗಿದೆ. ವ್ಯಾಕ್ಸಿನ್‌ನಿಂದಲೇ ಆಗಿದೆಯಾ ಎನ್ನುವುದು ಕೂಡ ಇನ್ನೂ ಗೊತ್ತಾಗಬೇಕಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ಏನೆಲ್ಲ ಮಾರ್ಗಸೂಚಿ ಬರುತ್ತದೆಯೋ ಅದನ್ನು ಪಾಲಿಸುತ್ತೇವೆ ಎಂದರು.
ಇದನ್ನೂ ಓದಿ: Covishield vaccine: ಕೋವಿಶೀಲ್ಡ್ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್ ವೈರಲ್!
ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ!
ಕೊರೊನಾ ಸೋಂಕು (coronavirus, Covid 19) ಎದುರಿಸಲು ನಾವು ನೀವೆಲ್ಲ ತೆಗೆದುಕೊಂಡ ಕೋವಿಶೀಲ್ಡ್ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿಯೇ ಇದೀಗ ಒಪ್ಪಿಕೊಂಡಿತ್ತು. ಇದರೊಂದಿಗೆ, ಕೊರೊನಾ ನಂತರದ ದಿನಗಳ ಅಸ್ವಸ್ಥತೆ, ಹೃದಯಾಘಾತಗಳ ಬಗ್ಗೆ ಮೂಡಿದ್ದ ಆತಂಕಕ್ಕೆ ಇನ್ನಷ್ಟು ಆಧಾರ ದೊರೆತಿತ್ತು. ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿತ್ತು. ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದಲ್ಲಿ ಪ್ಲೇಟ್‌ಲೆಟ್ ಕಡಿಮೆಯಾಗುವ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ಹೇಳಿದ್ದರು. ಆದರೆ ಇದು ಅಪರೂಪದ ಸಂದರ್ಭಗಳಲ್ಲಿ ಆಗಬಹುದು ಎಂದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ