Site icon Vistara News

Cracker Tragedy : ಮದುವೆ, ಮೆರವಣಿಗೆ, ಉತ್ಸವಗಳಲ್ಲಿ ಪಟಾಕಿ ಬ್ಯಾನ್‌; ಸಿಎಂ ಸೂಚನೆ

Siddaramaiah Cracker Ban

ಬೆಂಗಳೂರು: ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಮೆರವಣಿಗೆ, ಉತ್ಸವ ಮತ್ತು ಮದುವೆಯಂಥ ಸಮಾರಂಭದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗುವುದು (Crackers Ban) ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. 14 ಮಂದಿಯನ್ನು ಬಲಿ ಪಡೆದುಕೊಂಡ ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಂಗಳವಾರ ಸಂಬಂಧಿತ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. ಇಂಥ ದುರಂತಗಳು (Cracker Tragedy) ಮರುಕಳಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ನಡೆದ ಈ ಸಭೆಯಲ್ಲಿ ಸಿಎಂ ಅವರು ಕೆಲವೊಂದು ಕಠಿಣ ಕ್ರಮಗಳ ಸೂಚನೆಯನ್ನು ನೀಡಿದರು.

ಪಟಾಕಿಗಳನ್ನು ಸಿಡಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಆದೇಶವನ್ನು ರಾಜ್ಯದಲ್ಲೂ ಕಡ್ಡಾಯವಾಗಿ ಪಾಲಿಸಲಾಗುವುದು, ಅದರಲ್ಲೂ ದೀಪಾವಳಿ ಸನಿಹದಲ್ಲಿರುವುದರಿಂದ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಿಎಂ ಸೂಚಿಸಿದರು.

ಇನ್ನು ಮುಂದೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಬೇಕು ಎಂದು ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಮೆರವಣಿಗೆಯ ವೇಳೆ ಪಟಾಕಿ ಹೊಡೆಯೋ ಹಾಗಿಲ್ಲ. ಮದುವೆ, ಗಣೇಶೋತ್ಸವ ಮತ್ತಿತರ ತುಂಬ ಜನರು ಸೇರುವ ಕಡೆಗಳಲ್ಲೂ ಪಟಾಕಿ ಬ್ಯಾನ್‌ ಮಾಡಲಾಗುತ್ತದೆ. ರಾಜಕೀಯ ಕಾರ್ಯಕ್ರಮಗಳಲ್ಲೂ ಪಟಾಕಿ ಹೊಡೆಯುವಂತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಪಟಾಕಿ ದುರಂತ ನಡೆದ ಅತ್ತಿಬೆಲೆಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಭೇಟಿ ನೀಡಿದ ಸಂದರ್ಭ

ಅಪಾಯಕಾರಿ ಪಟಾಕಿಗಳನ್ನು ಸಂಪೂರ್ಣ ನಿಷೇಧ ಮಾಡಲಾಗುತ್ತದೆ, ಹೊಡೆಯುವುದಿದ್ದರೆ ಕಡಿಮೆ ತೀವ್ರತೆಯ ಹಸಿರು ಪಟಾಕಿ ಹೊಡೆಯಬಹುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೂಡಾ ರಾಜಕೀಯ ಸಮಾವೇಶಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು.

ತಹಸೀಲ್ದಾರ್‌, ಇನ್ಸ್‌ಪೆಕ್ಟರ್‌, ಫೈರ್‌ ಆಫೀಸರ್‌ ಅಮಾನತಿಗೆ ಆದೇಶ

ಅತ್ತಿಬೆಲೆ ದುರಂತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಿಗದಿತ ಮಾನದಂಡ ಪೂರೈಸದಿದ್ದರೂ, ತಪಾಸಣಾ ವರದಿ ನೀಡಿ ಪಟಾಕಿ ಅಂಗಡಿ ಇಡಬಹುದು ಎಂದು ಶಿಫಾರಸು ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌, ತಹಸೀಲ್ದಾರ್‌, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಕಾಯಿದೆ ಓದಿದ್ದೀರಾ ಎಂದು ಕೇಳಿದ ಸಿದ್ದರಾಮಯ್ಯ

ಅತ್ತಿಬೆಲೆ ಪಟಾಕಿ ದುರಂತವಾದ ಮಳಿಗೆಗೆ ಸಂಬಂಧಿಸಿದಂತೆ ಸರ್ಕಲ್‌ ಇನ್ಸ್‌ಪೆಕ್ಟರ್‌ ವರದಿ, ಛಾಯಾಚಿತ್ರಗಳೊಂದಿಗೆ ಚಕ್ಕುಬಂದಿ ನಿಗದಿ ಮಾಡಿ ವರದಿ ಸಲ್ಲಿಸಿದ್ದಾರೆ. ಪೊಲೀಸ್‌ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪರವಾನಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಹಸೀಲ್ದಾರರಿಂದಲೂ ವರದಿ ಪಡೆದಿದ್ದಾರೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.

ಎಕ್ಸ್‌ಪ್ಲೋಸಿವ್‌ ಆಕ್ಟ್‌ ನಲ್ಲಿ ಲೈಸೆನ್ಸ್‌ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು. ಹದಿನಾಲ್ಕು ಜನರ ಜೀವಕ್ಕೆ ಯಾರು ಹೊಣೆಗಾರರು. ಕಾಯ್ದೆ ಓದಿದ್ದೀರಾ? ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.

ಸ್ಥಳ ಪರಿಶೀಲನೆ ಮಾಡಿಯೇ ಲೈಸೆನ್ಸ್‌ ಕೊಡಬೇಕು

ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಲು ಸೂಚಿಸಿದರು. ಇನ್ನು ಮುಂದೆ ಲೈಸನ್ಸ್‌ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚನೆ ನೀಡಿದರು.

ತಪಾಸಣಾ ವರದಿ ಸರಿಯಾಗಿದೆಯೇ ಎಂದು ಪರಿಶೀಲಿಸಿಯೇ ಲೈಸನ್ಸ್‌ ನೀಡುವ ಬಗ್ಗೆ ತೀರ್ಮಾನಿಸಬೇಕು. ಈ ಪ್ರಕರಣದಲ್ಲಿ ಗೋಡೌನ್‌ಗೆ ಅನುಮತಿ ನೀಡಿರಲಿಲ್ಲ. ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಎಂದು ಸಭೆಯ ಗಮನಕ್ಕೆ ತರಲಾಯಿತು. ರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸೂಚಿಸಿದರು.

ಬೆಂಗಳೂರಿನಲ್ಲಿ ನಿಯಮ ಬದಲಾವಣೆಗೆ ಸೂಚನೆ

ಬೆಂಗಳೂರು ನಗರದಲ್ಲಿ ಎರಡು ರೀತಿಯ ಪರವಾನಗಿಗಳಿವೆ. ಶಾಶ್ವತ ಮಳಿಗೆಗಳು ಹಾಗೂ ತಾತ್ಕಾಲಿಕ ಮಳಿಗೆಗಳಿಗೆ ಪರವಾನಗಿ ನೀಡಲಾಗುತ್ತಿದೆ. ಬಿಬಿಎಂಪಿ, ವಿದ್ಯುತ್‌, ಅಗ್ನಿಶಾಮಕ, ಟ್ರಾಫಿಕ್‌ ಮತ್ತು ಕಾನೂನು-ಸುವ್ಯವಸ್ಥೇ ವಿಭಾಗದ ನಿರಾಕ್ಷೇಪಣಾ ಪತ್ರ ಪಡೆದು ಲೈಸನ್ಸ್‌ ನೀಡಲಾಗುತ್ತದೆ. ಇದು ಐದು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ನವೀಕರಣಕ್ಕೆ ನಿರಾಕ್ಷೇಪಣಾ ಪತ್ರದ ಅಗತ್ಯವಿರುವುದಿಲ್ಲ. ಸ್ಫೋಟಕಗಳ ನಿಯಂತ್ರಕರು ನವೀಕರಿಸುತ್ತಾರೆ. ಈ ಕುರಿತು ನಿಯಮಾವಳಿಗಳ ತಿದ್ದುಪಡಿ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ರಾಜ್ಯಕ್ಕೆ ಅನ್ವಯಿಸುವ ನಿಯಮ ಬದಲಿಸಲು ಸಿದ್ದರಾಮಯ್ಯ ಸೂಚಿಸಿದರು.

ಅತ್ತಿಬೆಲೆ- ಹೊಸೂರು ಗಡಿ ಭಾಗದಲ್ಲಿ ಬರುವ ಪಟಾಕಿಗಳ ಕುರಿತು ತೀವ್ರ ನಿಗಾ ವಹಿಸಲು ಸೂಚಿಸಿದರು. ಈ ಕುರಿತು ನ್ಯಾಯಾಲಯಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚಿಸಿದರು. ಹಸಿರು ಪಟಾಕಿಗಳ ಮಾರಾಟವನ್ನೂ ಖಾತರಿಪಡಿಸಿಕೊಳ್ಳಲು ಸೂಚಿಸಿದರು.

ಇದನ್ನೂ ಓದಿ : Attibele Fire Accident: ಅತ್ತಿಬೆಲೆ ದುರಂತ; ಮೃತ 14 ಜನರ ಪೈಕಿ 8 ಯುವಕರು ಒಂದೇ ಗ್ರಾಮದವರು!

ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಡಿಜಿಪಿ ಅಲೋಕ್‌ ಮೋಹನ್‌, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲಾಧೀಕಾರಿ ಕೆ.ಎ. ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version