ಬೆಂಗಳೂರು: ನಗರವನ್ನು ಬೆಚ್ಚಿ ಬೀಳಿಸಿದ್ದ ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಸೇರಿರುವ ಆರೋಪಿಗಳು ಅಲ್ಲೂ ಸುಮ್ಮನಿರದೆ ಕಿರಿಕ್ ಮಾಡಿಕೊಂಡಿದ್ದಾರೆ. ಸ್ಫೋಟದ ತಪ್ಪು ಒಪ್ಪಿಕೊಂಡು ನ್ಯಾಯಾಧೀಶರಿಗೆ ತಪ್ಪೊಪ್ಪಿಗೆ ಪತ್ರ ಬರೆದ ಆರೋಪಿಗೆ ಇತರ ಆರೋಪಿಗಳು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
ಬಂಧಿಸಿ ಜೈಲಿಗೆ ಅಟ್ಟಿದರೂ ಬುದ್ಧಿ ಕಲಿಯದ ಕ್ರಿಮಿನಲ್‌ಗಳು ಅಲ್ಲೂ ಕಿರಿಕ್ ತೆಗೆದಿದ್ದಾರೆ. ಸೈಯದ್ ಅಲಿ ಎಂಬ ಆರೋಪಿ ತಾನು ನಡೆಸಿದ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡು ನ್ಯಾಯಾಧೀಶರಿಗೆ ಪತ್ರ ಬರೆದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಉಳಿದ ಆರೋಪಿಗಳ ತಂಡ ಜೈಲಿನಲ್ಲಿಯೇ ಆತನನ್ನು ಸುತ್ತವರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ತಪ್ಪೊಪ್ಪಿಕೊಂಡರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದೆ. ಈ ಬಗ್ಗೆ ಸೈಯದ್ ಅಲಿ ಜೈಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಿಚನ್ ಬುಹಾರಿ ಅಲಿಯಾಸ್ ಬುಗಾರಿ, ಜುಲ್ಫಿಕರ್ ಆಲಿ, ಶಿಹಾಬುದ್ದೀನ್ ಅಲಿಯಾಸ್ ಸಿರಾಜ್‌ದ್ವೀನ್, ಅಹ್ಮದ್ ಬಾವಾ ಅಬೂಬಕರ್, ಬಿಲಾಲ್ ಅಹ್ಮದ್ ಕ್ಯುಟ ಎನ್ನುವ ಐವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
2013ರ ಏಪ್ರಿಲ್ 17ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ನಡೆದಿತ್ತು. ಹಲವರು ಗಂಭೀರ ಗಾಯಗೊಂಡು ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿತ್ತು. ಪೋಲೀಸರು ಬಾಂಬ್ ಸ್ಫೋಟ ನಡೆಸಿದ ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಎಲ್ಲಾ ಆರೋಪಿಗಳು ರಾಜ್ಯದ ನಾನಾ ಜೈಲುಗಳಲ್ಲಿ ವಿಚಾರಣಾಧೀನ ಬಂಧಿಗಳಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿಯೂ ಹಲವು ಕೈದಿಗಳಿದ್ದು, ಅದರಲ್ಲಿ ಸೈಯದ್ ಅಲಿ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡು ನ್ಯಾಯಾಧೀಶರಿಗೆ ಪತ್ರ ಬರೆದಿದ್ದ.
ಇದನ್ನೂ ಓದಿ: Assault on security guard : ಡೆಲಿವರಿ ಸಿಬ್ಬಂದಿಯಿಂದ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ