ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೆ, ಒಳ್ಳೆ ಕೆಲಸಕ್ಕೆ ನೂರಾರು ಅಡ್ಡಿ ಎಂಬಂತೆ ಒಂದೇ ಒಂದು ಫೋಟೊ ಸೂತಕದ ವಾತಾವರಣವನ್ನು (Crime News) ಸೃಷ್ಟಿ ಮಾಡಿದೆ.
ಡಿ.ಜೆ ಹಳ್ಳಿಯ ವಿನಾಯಕ ಟೆಂಟ್ ರೋಡ್‌ನಲ್ಲಿ ಕಳೆದ 21ರಂದು ಗಂಭೀರ ಗಾಯಗೊಂಡ ಶಾಹಿದಾ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಯ ಭಾಗಕ್ಕೆ ಚೂಪಾದ ವಸ್ತುವೊಂದು ಚುಚ್ಚಿದ ಕಾರಣಕ್ಕೆ ನರಗಳಿಗೆ ತೀವ್ರ ಹಾನಿಯಾಗಿತ್ತು. ಐಸಿಯುನಲ್ಲಿದ್ದ ಶಾಹಿದಾ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ (ಸೆ.೨೬) ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಘಟನೆಗೆ ಕಾರಣವಾಗಿದ್ದು ಮಗಳ ಫೋಟೊ ವಿಚಾರವಾಗಿ ನಡೆದ ಗಲಾಟೆ ಎಂದು ತಿಳಿದುಬಂದಿದೆ.
19 ವರ್ಷದ ಹಿಂದೆ ಮದುವೆಯಾಗಿದ್ದ ಶಾಹಿದಾ ಹಾಗೂ ಮುನಾವರ್ ದಂಪತಿಗೆ ಇಬ್ಬರು ಹಣ್ಣುಮಕ್ಕಳು. ಮುನಾವರ್ ಕುದುರೆ ಗಾಡಿ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಕುಟುಂಬ ನಿರ್ವಹಣೆಯ ಕಷ್ಟದ ನಡುವೆ ಮೊದಲ ಮಗಳಿಗೆ ದಂಪತಿ ಮದುವೆ ಮಾಡಿದ್ದರು.
ಎರಡನೇ ಮಗಳು ಪ್ರಾಪ್ತ ವಯಸ್ಸಿಗೆ ಬಂದ ಕೂಡಲೇ ಅವಳಿಗೂ ಮದುವೆ ಮಾಡುವ ಸಲುವಾಗಿ ಹುಡುಗನನ್ನು ಹುಡುಕಿ ಎಂಗೇಜ್ಮೆಂಟ್ ಕೂಡ ಮಾಡಿದ್ದರು. ಮದುವೆ ತಯಾರಿಯಲ್ಲಿದ್ದವರಿಗೆ ಮಗಳು ಬೇರೊಬ್ಬ ಹುಡುಗನ ಜತೆ ಸಹಜವಾಗಿ ನಿಂತಿದ್ದ ಫೋಟೊವೊಂದಕ್ಕೆ ಹುಡುಗನ ತಂದೆ ತಗಾದೆ ತೆಗೆದಿದ್ದಾರೆ.
ಹುಡುಗನ ತಂದೆ ಆ ಪೋಟೋವನ್ನು ತಂದು ಮುನಾವರ್‌ಗೆ ತೋರಿಸಿದ್ದರು. ಎಲ್ಲರೆದುರು ತೋರಿಸಿದ್ದರಿಂದ ಮುನಾವರ್‌ಗೂ ಈ ಸಂದರ್ಭದಲ್ಲಿ ತೀವ್ರ ಮುಜುಗರವಾಗಿತ್ತು. ಮನೆಗೆ ಬಂದವನೇ ಮಗಳ ಮೇಲೆ ರೇಗಾಡಿ ಪತ್ನಿ ಶಾಹಿದಾ ಜತೆಗೂ ಜಗಳಕ್ಕೆ ನಿಂತುಬಿಟ್ಟರು. ಮಗಳ ಬಗ್ಗೆ ಯಾಕೆ ಗಮನ ಹರಿಸಿಲ್ಲ ಎಂದು ಗಲಾಟೆ ಮಾಡಿಕೊಂಡಿಕೊಂಡಿದ್ದಾರೆ. ಸಣ್ಣ ಜಗಳವು ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಪತ್ನಿ ಶಾಹಿದಾಳನ್ನು ತಳ್ಳಿದ್ದಾನೆ. ಶಾಹಿದಾ ಕೆಳಗಿದ್ದ ಯಾವುದೋ ಶಾರ್ಪ್ ವೆಪನ್ ಮೇಲೆ ಬಿದ್ದಿದ್ದಾಳೆ. ಹೊಟ್ಟೆ ಭಾಗಕ್ಕೆ ಏಟು ಬಿದ್ದ ಕಾರಣ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ ನಾಲ್ಕು ದಿನಗಳ ಬಳಿಕ ಶಾಹಿದಾ ಮೃತಪಟ್ಟಿದ್ದಾರೆ.
ಈ ಸಂಬಂಧ ಪೊಲೀಸರು ಮುನಾವರ್‌ರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಸಂಬಂಧ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | NIA Raid | ಎನ್‌ಐಎ ಬಂಧಿಸಿರುವ ಬೆಂಗಳೂರಿನ ಏಳು ಪಿಎಫ್‌ಐ ಮುಖಂಡರ ಸಂಪೂರ್ಣ ಕ್ರೈಂ ಹಿಸ್ಟರಿ ಇಲ್ಲಿದೆ!