ಬೆಂಗಳೂರು: ಒಂದು ಕ್ಷಣದ ತಪ್ಪು ನಿರ್ಧಾರದಿಂದ ಆತ ಕಳ್ಳ ಅನಿಸಿಕೊಳ್ಳುವಂತಾಗಿದೆ. ಬಯಸದೇ ಬಂದ ಭಾಗ್ಯ ಎಂಬಂತೆ ಕೈಗೆ ಬಂದ ತನ್ನದಲ್ಲದ 94 ಲಕ್ಷ ರೂ. ಹಣವನ್ನು ಕಬಳಿಸಲು ಹೋಗಿ ವ್ಯಕ್ತಿ ಕಳ್ಳತನದ (Theft case) ಆರೋಪಿಯಾಗಬೇಕಾಗಿ ಬಂದಿದೆ.
ಘಟನೆ ನಡೆದಿದ್ದು ಹೀಗೆ: ಚಂದ್ರ ಲೇಔಟ್ ನಿವಾಸಿಯಾಗಿರುವ ಪ್ರಮೋದ್ ಎಂಬವರು ಸೈಟ್ ಖರೀದಿಸಲು 94 ಲಕ್ಷ ರೂ. ಕೂಡಿಸಿಟ್ಟಿದ್ದರು. ಅದನ್ನು ಎಣಿಸಲು ಸ್ನೇಹಿತನ ಅಂಗಡಿಗೆ ಹಣ ತೆಗೆದುಕೊಂಡು ಹೋಗಲು ಮುಂದಾಗಿದ್ದರು. ಅಲ್ಲದೇ ವಕೀಲರ ಕಚೇರಿಗೆ ತೆರಳಲೂ ರೆಡಿಯಾಗಿದ್ದರು. ಮನೆಯಿಂದ ಬ್ಯಾಗ್‌ನಲ್ಲಿ ದಾಖಲೆಗಳು ಹಾಗೂ ಬಾಕ್ಸ್‌ನಲ್ಲಿ ಹಣ ಹಾಕಿಕೊಂಡು ಹೊರಟಿದ್ದರು.
ಮನೆ ಕೆಳಗೆ ಬಂದು ಕಾರಿನ ಡೋರ್ ಓಪನ್ ಮಾಡಲೆಂದು ಕೈಯಲ್ಲಿದ್ದ ಹಣದ ಬ್ಯಾಗನ್ನು ಪಕ್ಕದಲ್ಲಿದ್ದ ಯಾರದೋ ಆ್ಯಕ್ಟಿವಾ ಬೈಕ್ ಮೇಲಿಟ್ಟಿದ್ದರು. ನಂತರ ಕಾರಿನ ಬಾಗಿಲು ತೆಗೆದು ದಾಖಲಾತಿ ಇದ್ದ ಬ್ಯಾಗ್ ಕಾರಿನಲ್ಲಿ ಹಾಕಿಕೊಂಡು, ಹಣದ ಬಾಕ್ಸ್ ಹಾಗೇ ಮರೆತು ಡ್ರೈವಿಂಗ್ ಸೀಟಿನತ್ತ ಬಂದು ಕುಳಿತು ಕಾರು ಚಲಾಯಿಸಿಕೊಂಡು ಹೋಗಿದ್ದರು.
ಬೈಕ್ ಮಾಲೀಕ, ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುವ ವರುಣ್ ಗೌಡ ಎಂಬಾತ ಬೈಕ್ ಬಳಿಗೆ ಬಂದು ನೋಡಿದಾಗ ಬೈಕ್ ಮೇಲೆ ಬಾಕ್ಸ್ ಕಂಡಿತ್ತು. ಬಾಕ್ಸ್ ಓಪನ್ ಮಾಡಿದಾಗ ಕಂತೆ ಕಂತೆ ಹಣ ಕಂಡಿತ್ತು. ಕೂಡಲೇ ಮನ ಚಂಚಲಗೊಂಡು, ಹಣದ ಸಮೇತ ಸ್ಥಳದಿಂದ ವರುಣ್ ಎಸ್ಕೇಪ್ ಆಗಿದ್ದ. ಶ್ರೀನಗರದ ತನ್ನ ಮನೆಯಲ್ಲಿ ಹಣವನ್ನು ಹಾಗೇ ಇಟ್ಟುಕೊಂಡಿದ್ದ. 94 ಲಕ್ಷ ರೂ. ಹಣ ಏನು ಮಾಡಬೇಕು ಅನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದ. ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಗೂ ಪ್ಲಾನ್ ಮಾಡಿಕೊಂಡಿದ್ದ.
ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್‌ಗೆ ಶಾಕ್ ಆಗಿದ್ದು, ವಾಪಸ್ಸು ಬಂದು ನೋಡಿದಾಗ ಬೈಕ್, ಹಣ ಎರಡೂ ಇರಲಿಲ್ಲ. ಬಳಿಕ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಬೈಕ್ ಹೊರಟ ಮಾರ್ಗದ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 300ಕ್ಕೂ ಹೆಚ್ಚು ಕ್ಯಾಮರಾ ಪರಿಶೀಲಿಸಿ ಪ್ರಕರಣ ಬೇಧಿಸಿದ್ದಾರೆ. ಕೊನೆಗೂ ಆರೋಪಿಯನ್ನು ಹಿಡಿದು 94 ಲಕ್ಷ ಹಣ ರಿಕವರಿ ಮಾಡಿದ್ದಾರೆ.
ಅದೃಷ್ಟ- ನತದೃಷ್ಟಗಳೆರಡೂ ಒಂದರ ಹಿಂದೊಂದರಂತೆ ಆಟವಾಡಿಸಿರುವ ವರುಣ್, ಈಗ ಆರೋಪಿ ಎನಿಸಿಕೊಂಡಿದ್ದಾನೆ. ಅದೇ ಹಣವನ್ನು ತಂದು ಪೊಲೀಸರಿಗೆ ಕೊಟ್ಟಿದ್ದರೆ ಈತ ಹೀರೊ ಆಗುತ್ತಿದ್ದ! ಆದರೆ ಮನೆಯಲ್ಲಿ ಇಟ್ಟುಕೊಂಡು ಆರೋಪಿಯಾಗಿದ್ದಾನೆ.
ಇದನ್ನೂ ಓದಿ: Chaitra Kundapura: ಇನ್ನಷ್ಟು ಮಂದಿಗೆ ಚೈತ್ರ ಕುಂದಾಪುರ ವಂಚನೆ ಶಂಕೆ! ಮೊಬೈಲ್ ಚಾಟ್ಸ್ ಡಿಲೀಟ್