ಬೆಂಗಳೂರು: ರಾಜಧಾನಿಯಲ್ಲಿ ರ‍್ಯಾಪಿಡೋ ಚಾಲಕನೊಬ್ಬ ನೀಡಿದ ಕಿರುಕುಳದಿಂದ ಬೇಸತ್ತು ಬೈಕ್‌ನಿಂದ ಯುವತಿಯೊಬ್ಬಳು ಜಂಪ್ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಯಲಹಂಕ ಉಪನಗರ ನಾಗೇನಹಳ್ಳಿ ಸಮೀಪದ ಖಾಸಗಿ ಕಾಲೇಜು ಬಳಿ ಈ ಘಟನೆ ನಡೆದಿದೆ. ಯಲಹಂಕ ಹೊರವಲಯದಲ್ಲಿ ಏಪ್ರಿಲ್ 21ರಂದು ಕೃತ್ಯ ನಡೆದಿತ್ತು.
ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿ ಕೆಲಸ ಮಾಡುತ್ತಿರುವ ಯುವತಿ ಯಲಹಂಕದಿಂದ ಇಂದಿರಾನಗರ ತೆರಳಲು ರ‍್ಯಾಪಿಡೋ ಬುಕ್ ಮಾಡಿದ್ದಳು. ಓಟಿಪಿ ಪಡೆಯುವ ನೆಪದಲ್ಲಿ ಯುವತಿಯ ಮೊಬೈಲ್ ಅನ್ನು ರ‍್ಯಾಪಿಡೋ ಸವಾರ ಕಸಿದಿದ್ದ. ಬಳಿಕ ಯುವತಿಯ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ.
ಲೈಂಗಿಕ ಕಿರುಕುಳ ಸಹಿಸಲಾಗದೇ ಯುವತಿ ಬೈಕ್‌ನಿಂದ ಜಿಗಿದಿದ್ದು, ಬಳಿಕ ನಡೆದ ಘಟನೆ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶ ಮೂಲದ ದೀಪಕ್ ರಾವ್ ಎಂದು ಗುರುತಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಪತ್ನಿಯ ಕೊಲೆ ಮಾಡಿದ ಪಾತಕಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು: ಪತ್ನಿಯನ್ನು ಕೊಂದ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿದೆ. ರಾಜೇಶ್ ಎಂಬಾತ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿ ಶಾರದ ಎಂಬಾಕೆಯನ್ನು ಈತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ರಾಜೇಶ್‌ನಿಂದ ವಿಚ್ಛೇದನ ಪಡೆದು ಶಾರದ ಬೇರೆಯಾಗಿ ವಾಸಿಸುತ್ತಿದ್ದಳು. ಡೈವೋರ್ಸ್ ಬಳಿಕ ಜೀವನಾಂಶ ನೀಡಲಾಗದೆ ರಾಜೇಶ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ಶಾರದಳನ್ನು ಹತ್ಯೆಗೈದಿದ್ದ. ಚಾಕುವಿನಿಂದ ಆಕೆಯ ದೇಹಕ್ಕೆ 52 ಬಾರಿ ಇರಿದು ಹತ್ಯೆ ಮಾಡಿದ್ದ.
ಈ ಸಂಬಂಧ ತನಿಖೆ ನಡೆಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ದೋಷಿ ಎಂದು ಪ್ರಕಟಿಸಿದೆ. ಸಿಸಿಹೆಚ್ 42ನೇ ಕೋರ್ಟ್‌ನಿಂದ ಅಪರಾಧಿ ರಾಜೇಶ್‌ಗೆ ಜೀವಾವಧಿ ಶಿಕ್ಷೆ ಹಾಗೂ ಎರಡು ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: Unnatural sex and murder | 1 ವರ್ಷದ ಮಗುವಿನ ಮೇಲೆ ಸಲಿಂಗ ದೌರ್ಜನ್ಯ ನಡೆಸಿ ಕೊಂದ ಕಿರಾತಕನಿಗೆ ಮರಣದಂಡನೆ