ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಕ್ಟಿವ್ ಆಗಿದ್ದ ನಟೋರಿಯಸ್ ರೌಡಿ ನಾಗರಾಜ್@ ವಿಲ್ಸನ್ ಗಾರ್ಡನ್ ನಾಗನನ್ನು ಗಡಿಪಾರು ಮಾಡಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಂದ ಈತನನ್ನು ಗಡಿಪಾರು ಮಾಡಲಾಗಿದೆ. ಆರು ತಿಂಗಳವರೆಗೂ ಕೂಡ ವಿಲ್ಸನ್ ಗಾರ್ಡನ್ ನಾಗ ನಗರಕ್ಕೆ ಬರುವಂತಿಲ್ಲ. ಯಾವುದೇ ಆಕ್ಟಿವಿಟಿಗಳಲ್ಲಿ ತೊಡಗುವಂತಿಲ್ಲ. ಈಗಾಗಲೆ ಸೆಕ್ಷನ್ 110ರಡಿ ಬಾಂಡ್ ಬರೆಸಿಕೊಂಡು ವಾರ್ನಿಂಗ್ ಕೂಡ ಮಾಡಲಾಗಿದೆ.
ಸದ್ಯ ಈತನೊಬ್ಬನಿಗೇ ಅಲ್ಲ, ನಗರದಲ್ಲಿ ಆಕ್ಟೀವ್ ಆಗಿರುವ ಇನ್ನಿತರ ಹಲವು ರೌಡಿಗಳಿಗೂ ಸಿಸಿಬಿ ಹಾಗು ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಗಡಿಪಾರಿನ ಪ್ರೊಸೀಜರ್ ಮುಗಿಸಿ, ಆರು ತಿಂಗಳು ನಗರಕ್ಕೆ ಬರದಂತೆ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ನಾಗನಿಗೆ ಎಚ್ಚರಿಕೆ ನೀಡಿದ್ದಾರೆ. ಕೊಲೆ, ಕೊಲೆಯತ್ನ, ರಾಬರಿ, ವಾಹನ ಕಳವು, ಡಕಾಯಿತಿ, ಕಿಡ್‌ನ್ಯಾಪ್ ಸೇರಿ ಹಲವು ಪ್ರಕರಣದಲ್ಲಿ ವಿಲ್ಸನ್ ಗಾರ್ಡನ್ ನಾಗ ಆರೋಪಿಯಾಗಿದ್ದಾನೆ.
ಕಟ್ಟುನಿಟ್ಟಿನ ವಾಹನ ತಪಾಸಣೆ
ಚುನಾವನಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ನಗರಕ್ಕೆ ಪ್ರವೇಶಿಸುವ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸುವ ಕೆಲಸವನ್ನು ಮಾಡುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರ ಸೂಚನೆಯಂತೆ ಕಟ್ಟುನಿಟ್ಟಾಗಿ ವಾಹನ ತಪಾಸಣೆ ನಡೆಸಲಾಗುತ್ತಿದೆ.
ಬಹುಮುಖ್ಯವಾಗಿ ಹೊರ ಜಿಲ್ಲೆಗೆ ಸಂಪರ್ಕಸುವ ಚಿಕ್ಕಜಾಲ, ದೊಡ್ಡಬಳ್ಳಾಪುರ ರಸ್ತೆ, ಹೊಸೂರು ರಸ್ತೆಗಳಲ್ಲಿ ಪ್ರತಿ ವಾಹನವನ್ನೂ ತಪಾಸಣೆ ಮಾಡಲು ಸೂಚನೆ ನೀಡಲಾಗಿದೆ. ಈ ಹಿನ್ನಲೆ ನಗರದಲ್ಲಿ ಚೆಕ್ ಪೋಸ್ಟ್ಗಳಲ್ಲಿ ಹೆಚ್ಚಿನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ನಗರಕ್ಕೆ ಅಕ್ರಮವಾಗಿ ಬರುವ ನಗದು ಹಾಗು ಮತದಾರರಿಗೆ ಅಮಿಷ ಒಡ್ಡುವ ಯಾವುದೇ ವಸ್ತುಗಳಿದ್ದರೂ ಅದರನ್ನ ವಶಕ್ಕೆ ಪಡೆಯಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Anekal Shootout | ಆನೇಕಲ್‌ನಲ್ಲಿ ಇಬ್ಬರು ಕಿರಾತಕರಿಗೆ ಗುಂಡೇಟು; ಕ್ರೈಂ ಲೋಕದ ಪಾತಕಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್