ಬೆಂಗಳೂರು: ಕ್ರೀಡಾ ತರಬೇತಿಗಾಗಿ ಬೆಂಗಳೂರಿಗೆ ಬಂದಿದ್ದ ಪಂಜಾಬಿ ಆಟಗಾರ್ತಿಯ ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ದೂರು ದಾಖಲಿಸಲಾಗಿದೆ.
ಸಾಯ್ ಸ್ಪೋರ್ಟ್ಸ್ ಇಂಡಿಯಾದಲ್ಲಿ ಟೆಕ್ವಾಂಡೋ ಆಟದ ತರಬೇತಿಗಾಗಿ ನಗರಕ್ಕೆ ಬಂದ ಪಂಜಾಬಿನ ಯುವತಿ ಇಲ್ಲಿನ ಹಾಸ್ಟೆಲ್‌ನಲ್ಲಿ ನೆಲೆಸಿದ್ದರು. ಅದೇ ಹಾಸ್ಟೆಲ್‌ನಲ್ಲಿ ಮತ್ತೊಬ್ಬ ವಾಲಿಬಾಲ್ ಆಟಗಾರ್ತಿ ಕೂಡ ಇದ್ದು, ಪಂಜಾಬಿ ಕ್ರೀಡಾಪಟು ಸ್ನಾನ ಮಾಡುವ ವೇಳೆ ಕದ್ದು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು.
ಈ ವೇಳೆ ಅನುಮಾನಗೊಂಡು ಪಕ್ಕದ ಬಾತ್ ರೂಂನಲ್ಲಿದ್ದ ಯುವತಿಯನ್ನು ಪಂಜಾಬಿ ಕ್ರೀಡಾಪಟು ಪ್ರಶ್ನಿಸಿದಾಗ, ವಾಲಿಬಾಲ್ ಆಟಗಾರ್ತಿ ತಪ್ಪೊಪ್ಪಿಕೊಳ್ಳದೆ ತನ್ನ ಮೊಬೈಲ್ ಒಡೆದು ಹಾಕಿದ್ದಳು. ಈ ಹಿನ್ನೆಲೆಯಲ್ಲಿ ಪಂಜಾಬಿ ಆಟಗಾರ್ತಿ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ
ನೆಲ್ಯಾಡಿ: ಯುವಕನೊಬ್ಬ ಮೊಬೈಲ್‌ನಲ್ಲಿ ಸ್ಟೇಟಸ್ (Whatsapp status)ಹಾಕಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಚ್ಲಂಪಾಡಿ ಗ್ರಾಮದಲ್ಲಿ ಮಾರ್ಚ್ 30ರ ಮಧ್ಯರಾತ್ರಿ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ರೆನೀಶ್ (27) ಮೃತ ಯುವಕ. ಈತನ ತಂದೆ ಕೆಲವು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನ ಸಹೋದರ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದ. ಮಾ.30ರಂದು ರಾತ್ರಿ ಪಕ್ಕದ ಉಣ್ಣಿಕೃಷ್ಣನ್ ನಾಯರ್ ಎಂಬವರ ಮನೆಯಲ್ಲಿ ಊಟ ಮಾಡಿ, ಕೇರಂ ಆಡಿ ಮನೆಗೆ ಹೋಗಿದ್ದ.
ಮಧ್ಯರಾತ್ರಿ 12 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್‌ನಲ್ಲಿ ಸ್ಟೇಟಸ್ ಬರೆದುಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿರುವ ಗೆಳೆಯರು ಉಣ್ಣಿಕೃಷ್ಣನ್‌ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.
ಅವರೂ ರೆನೀಶ್ ಮನೆಗೆ ತಲುಪುವುದರೊಳಗೆ ಆತ ಮರಕ್ಕೆ ನೇಣುಬಿಗಿದುಕೊಂಡಿದ್ದ. ತಕ್ಷಣ ಹಗ್ಗ ಬಿಚ್ಚಿ ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಯಿತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ಇದನ್ನೂ ಓದಿ: 30 ಕೋಟಿ ರೂ. ಆಸ್ತಿ ಇದ್ದರೂ 3 ಹೊತ್ತು ಊಟ ಹಾಕದ ಮಗ, ಮಾತ್ರೆ ಸೇವಿಸಿ ತಂದೆ-ತಾಯಿ ಆತ್ಮಹತ್ಯೆ