ಬೆಂಗಳೂರು: ಕೋರ್ಟ್ ಕಲಾಪದ ವೇಳೆ ಅಶ್ಲೀಲ ವಿಡಿಯೋ (obscene video) ಪ್ಲೇ ಆಗುವ ಪ್ರಕರಣಗಳು ವರದಿಯಾಗುತ್ತಿದ್ದು, ಅಂಥ ಎರಡನೇ ಪ್ರಕರಣ (Cyber Crime) ರಾಜ್ಯದಲ್ಲಿ ವರದಿಯಾಗಿದೆ. ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಸ್‌ಎಟಿ) ವಿಡಿಯೋ ಕಾನ್ಫರೆನ್ಸ್ ವೇಳೆ ಈ ಕೃತ್ಯ ನಡೆದಿದೆ.
ಕೆಎಸ್‌ಎಟಿ ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೋ ಪ್ರದರ್ಶಿಸಲಾಗಿದೆ. ಘಟನೆ ಬಗ್ಗೆ ಕೆಎಸ್‌ಎಟಿಯ ಅಧಿಕಾರಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸೆಂಟ್ರಲ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೊ ಕಾನ್ಫರೆನ್ಸ್ ವೇಳೆ ಅಪರಿಚಿತರು ಲಾಗಿನ್ ಆಗಿ ಆಕ್ಷೇಪಾರ್ಹ ವಿಡಿಯೋ ಪ್ರದರ್ಶಿಸಿದ್ದಾರೆ. ಲಾಗಿನ್ ಆಗಿದ್ದ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಅಧಿಕಾರಿಗಳು ಆನ್‌ಲೈನ್ ಕಲಾಪ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಐಟಿ ಕಾಯಿದೆ ಸೆಕ್ಷನ್ 67, 67a ಅಡಿ ಪ್ರಕರಣ ದಾಖಲಾಗಿದೆ.
ಅಶ್ಲೀಲ ವಿಡಿಯೋ ಪ್ರದರ್ಶಿಸಿದ ಕಿಡಿಗೇಡಿಗಳ ಬಗ್ಗೆ ಪೊಲೀಸರ ತನಿಖೆ ನಡೆದಿದೆ. ಕೆಲವೇ ದಿನಗಳ ಹಿಂದೆ ಹೈಕೋರ್ಟ್ ಕಲಾಪದ ಸಂದರ್ಭದಲ್ಲಿ ಅಶ್ಲೀಲ ವಿಡಿಯೋ ಪ್ರದರ್ಶಿಸಿದ್ದು ವರದಿಯಾಗಿತ್ತು. ಕೋರ್ಟ್ ಕಲಾಪದ ಲೈವ್ ಸ್ಟ್ರೀಮಿಂಗ್ ಹ್ಯಾಕ್ ಮಾಡಿದ್ದು, ಬಳಿಕ ಅಶ್ಲೀಲ ದೃಶ್ಯಗಳನ್ನೆಲ್ಲ ಅಪ್ಲೋಡ್ ಮಾಡಿದ್ದಾರೆ. ಇದರಿಂದಾಗಿ ಮುಜುಗರಕ್ಕೆ ಒಳಗಾಗಬೇಕಾಯಿತು. ಹ್ಯಾಕ್ ಆಗಿದ್ದು ತಿಳಿಯುತ್ತಿದ್ದಂತೆ ಹೈಕೋರ್ಟ್ ಸಿಬ್ಬಂದಿ ಕೇಂದ್ರ ವಿಭಾಗ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುವ ಐಡಿ ಹಾಗೂ ಪಾಸ್‌ವರ್ಡ್‌ಗಳು ಗುಪ್ತವಾಗಿರುತ್ತವೆ. ಇವು ಹೊರಗೆ ಸೋರಿಕೆಯಾದರೆ ಮಾತ್ರ ಕಲಾಪದ ವೇಳೆ ವಿಡಿಯೋ ಪ್ರದರ್ಶಿಸಲು ಸಾಧ್ಯ. ಹೀಗಾಗಿ ಕಾನ್ಫರೆನ್ಸ್ ಮಾಹಿತಿ ಹೊಂದಿದ ಒಳಗಿನವರೇ ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: Cyber crime : ಹೈಕೋರ್ಟ್ ಲೈವ್ ಸ್ಟ್ರೀಮಿಂಗ್‌ನಲ್ಲಿ ಹರಿದಾಡಿದ ಅಶ್ಲೀಲ ದೃಶ್ಯ!