ಬೆಂಗಳೂರು: ಪಾರ್ಟ್ ಟೈಂ ಕೆಲಸದ ಆಸೆಗೆ ಬಿದ್ದ ಗೃಹಿಣಿಯೊಬ್ಬರು ಆನ್‌ಲೈನ್‌ನಲ್ಲಿ (cyber crime) ಏಳು ಲಕ್ಷದ ಮೂರು ಸಾವಿರ ರೂಪಾಯಿ ಹಣ ಕಳೆದುಕೊಂಡ ಬಗ್ಗೆ ದೂರು ದಾಖಲಾಗಿದೆ.
ಜೋಶ್ಬಾಯ ಎಂಬಾಕೆಗೆ ಟೆಲಿಗ್ರಾಂನಲ್ಲಿ ಮೆಸೇಜ್ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬ, ಚಲನಚಿತ್ರಗಳಿಗೆ ರಿವ್ಯೂ ನೀಡಿದರೆ ಕಮೀಷನ್ ಬರುತ್ತೆ ಎಂದು ಮೇಸೇಜ್ ಮಾಡಿದ್ದ. www.filmbitmax.com ಎಂಬ ಲಿಂಕ್ ಅನ್ನು ಕಳಿಸಿ ರಿಜಿಸ್ಟರ್ ಮಾಡಿಕೊಳ್ಳಲು ಹೇಳಿದ್ದ. ತನ್ನ ಬ್ಯಾಂಕ್‌ಗೆ ಅಟ್ಯಾಚ್ ಆಗಿರುವ ನಂಬರ್‌ನಿಂದ ಅಕೌಂಟ್ ನಂಬರ್, ಪಾನ್ ಕಾರ್ಡ್ ನಂಬರ್‌ಗಳನ್ನು ನಮೂದಿಸಿ ಮಹಿಳೆ ರಿಜಿಸ್ಟರ್ ಮಾಡಿದ್ದರು.
ನಂತರ ಆತ ಚಲನಚಿತ್ರಕ್ಕೆ ರಿವ್ಯೂ ಕೊಡುವ ಟಾಸ್ಕ್ ಆಕೆಗೆ ನೀಡಿದ್ದ. ಕಮೀಷನ್ ಆಸೆಗೆ ಆತ ಹೇಳಿದಂತೆ ಕ್ಲಿಕ್ ಮಾಡುತ್ತಾ ಹೋಗಿದ್ದ ಮಹಿಳೆ, ನಂತರ ಹಂತಹಂತವಾಗಿ 7 ಲಕ್ಷದವರೆಗೂ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಸೌತ್ ಈಸ್ಟ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸರಿಗೂ ಆನ್‌ಲೈನ್ ವಂಚನೆ
ಆನ್‌ಲೈನ್ ವಂಚನೆಗೊಳಗಾಗುವವರಲ್ಲಿ ಪೊಲೀಸರೇನೂ ಹಿಂದೆ ಬಿದ್ದಿಲ್ಲ. ಸೆಂಟ್ರಲ್ ರಿಸರ್ವ್ ಪೊಲೀಸ್ ಸಿಬ್ಬಂದಿಯಾಗಿರುವ ಭದ್ರಯ್ಯ ವಂಚನೆಗೊಳಗಾದವರು.
ಬ್ಯಾಂಕ್ ಕಸ್ಟಮರ್ ಕೇರ್‌ನಿಂದ ಎಂದು ಕರೆ ಮಾಡಿದ್ದ ವ್ಯಕ್ತಿ, ನಿಮ್ಮ ಎಸ್‌ಬಿಐ ಅಕೌಂಟ್ ಬ್ಲಾಕ್ ಆಗಿದೆ, ಖಾತೆ ಮುಂದುವರಿಯಬೇಕು ಎಂದರೆ ಪಾನ್ ಕಾರ್ಡ್ ಅಪ್‌ಡೇಟ್ ಮಾಡಿ ಎಂದಿದ್ದ. ಇದನ್ನು ನಂಬಿದ ಭದ್ರಯ್ಯ, ಪಾನ್ ಕಾರ್ಡ್ ನಂಬರ್ ಅನ್ನು ಅಪ್‌ಡೇಟ್ ಮಾಡಿದ ಕೂಡಲೇ ಅವರ ಎರಡು ಅಕೌಂಟ್‌ಗಳಿಂದ 72 ಸಾವಿರದವರೆಗೂ ಹಣ ಕಡಿತಗೊಂಡಿದೆ. ಒಂದೇ ನಂಬರನ್ನು ಎರಡು ಬ್ಯಾಂಕ್ ಅಕೌಂಟ್‌ಗಳಿಗೆ ಲಿಂಕ್ ಮಾಡಿರುವ ಕಾರಣ ಆನ್‌ಲೈನ್ ವಂಚಕ ಎರಡೂ ಖಾತೆಗೂ ಕನ್ನ ಹಾಕಿದ್ದಾನೆ. ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ಇದನ್ನೂ ಓದಿ: Porcupine: ಮುಳ್ಳುಹಂದಿ ಗುಹೆಯಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು