Site icon Vistara News

Cylinder Blast: ಅಕ್ರಮ ರೀ ಫಿಲ್ಲಿಂಗ್‌ ಅಡ್ಡೆಯಾದ ಹುಳಿಮಾವು;ಸಿಲಿಂಡರ್ ಸ್ಫೋಟಕ್ಕೆ ಪಾತ್ರೆ ಅಂಗಡಿ ಛಿದ್ರ ಛಿದ್ರ

Cylinder blast in Hulimavu

ಬೆಂಗಳೂರು: ಭೀಕರ ಸಿಲಿಂಡರ್ ಸ್ಫೋಟವೊಂದು (Cylinder Blast) ಹುಳಿಮಾವು ಜನರನ್ನು ಬೆಚ್ಚಿ ಬೀಳಿಸಿದೆ. ಸಿಲಿಂಡರ್‌ ಸ್ಫೋಟ ಹೇಗಿತ್ತು ಎಂದರೆ ಏರಿಯಾ ಜನರಿಗೆ ಭೂಕಂಪದ ಅನುಭವವಾಗಿತ್ತು. ಸುಮಾರು ಒಂದು ಕಿ.ಮೀವರೆಗೆ ಶಬ್ಧ ಕೇಳಿಸಿದ್ದು, ಇನ್ನೂರು ಮೀಟರ್ ಸುತ್ತ ಮುತ್ತಲ ಮನೆ, ಅಂಗಡಿಗಳ ಕಿಟಕಿ ಗಾಜುಗಳು ಪೀಸ್ ಪೀಸ್ ಆಗಿವೆ.

ನಿನ್ನೆ ಗುರುವಾರ ರಾತ್ರಿ 10.55ಕ್ಕೆ ಸ್ಟೀಲ್ ಪಾತ್ರೆಯ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ರಾಹುಲ್ ದಾಸ್ ಎಂಬಾತನಿಗೆ ಗಾಯವಾಗಿದ್ದು, ಅಂಗಡಿಯ ಶೆಟರ್ ಪುಡಿ ಪುಡಿಯಾಗಿ ಪಾತ್ರೆಗಳೆಲ್ಲವು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದೆ. ರಸ್ತೆಯಲ್ಲಿ ನಿಂತಿದ್ದ ಎರಡು ಸ್ಕೂಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ರಸ್ತೆಯ ಎದುರು ಮನೆಯಲ್ಲಿದ್ದ ಕಬ್ಬಿಣದ ಗೇಟ್ ಉಢೀಸ್‌ ಆಗಿದೆ.

ಪಾತ್ರೆ ಅಂಗಡಿಯು ಸುರೇಶ್ ದಾಸ್ ಎಂಬುವವರಿಗೆ ಸೇರಿದ್ದು, ಕೆಲಸ ಮುಗಿಸಿ ಶೆಟರ್ ಕ್ಲೋಸ್ ಮಾಡಿ ಹೋಗಿದ್ದರು. ಈ ರಾಹುಲ್‌ ದಾಸ್‌ ಅಂಗಡಿಯಲ್ಲಿ ಕೆಲಸಗಾರನಾಗಿದ್ದ. ಇದೇ ಅಂಗಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ರೀ ಫಿಲ್ಲಿಂಗ್ ಕೂಡ ಮಾಡಲಾಗುತ್ತಿತ್ತು. ಅಂಗಡಿಯೊಳಗೆ ಗ್ಯಾಸ್ ಲೀಕ್ ಆಗಿದೆ. ಇದೇ ವೇಳೆ ಅಂಗಡಿಯ ಮುಂಭಾಗ ಎಲೆಕ್ಟ್ರಿಕ್ ಸ್ಕೂಟರ್‌ಗೆ ಚಾರ್ಜ್ ಮಾಡಲಾಗುತ್ತಿತ್ತು. ಚಾರ್ಜರ್ ತೆಗೆಯುವ ವೇಳೆ ಸ್ಪಾರ್ಕ್ ಆಗಿ ಸ್ಫೋಟಗೊಂಡಿರುವ ಶಂಕೆ ಇದೆ. ಸಿಲಿಂಡರ್‌ ಸ್ಫೋಟದಿಂದ ಪಾತ್ರೆ ಅಂಗಡಿ ಗೋಡೆ ಕುಸಿದು ಬಿದ್ದಿದೆ. ಸ್ಫೋಟದಿಂದ ಸುತ್ತಮುತ್ತ ಇರುವ ಕಟ್ಟಡಗಳಿಗೆ ಹಾನಿಯಾಗಿದೆ.

ಇದನ್ನೂ ಓದಿ: Drugs Seized : ಓಲಾ, ಊಬರ್ ಡ್ರೈವಿಂಗ್ ಜತೆಗೆ ಡ್ರಗ್ಸ್‌ ಮಾರಾಟ; 6 ಕೋಟಿ ರೂ.ಮೌಲ್ಯದ ಡ್ರಗ್ಸ್‌ ಸೀಜ್‌

ಪ್ರಾಣಾಪಾಯದಿಂದ ಪಾರಾದ ಒಂದು ತಿಂಗಳ ಮಗು

ಸ್ಫೋಟ ಸಂಭವಿಸಿದ ಅಂಗಡಿ ಎದುರಿನಲ್ಲಿರುವ ಮನೆಯ ಎರಡನೇ ಮಹಡಿಯಲ್ಲಿ ಮಗುವೊಂದು ಮಲಗಿತ್ತು. ಸ್ಫೋಟದ ತೀವ್ರತೆಗೆ ಮಗು ಇದ್ದ ರೂಮಿನ ಕಿಟಕಿ ಗಾಜು ಪುಡಿ ಪುಡಿಯಾಗಿತ್ತು. ಮಂಚದ ಮೇಲೆ ಮಗು ಇದ್ದಿದ್ದರಿಂದ ಬಚಾವ್ ಆಗಿದೆ. ಸ್ಫೋಟದ ಬಳಿಕ ತಾಯಿ ತಕ್ಷಣಕ್ಕೆ ಮಗುವನ್ನು ಎತ್ತೊಯ್ದಿದ್ದಾರೆ.

ಇನ್ನೂ ಸ್ಫೋಟದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಸೆಕೆಂಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಅಂಗಡಿ ಛಿದ್ರ ಛಿದ್ರಗೊಂಡಿದೆ. ಎದುರು ಮನೆಯೊಳಗೆ ಧೂಳು ನುಗ್ಗಿದೆ. ಸ್ಫೋಟಕ್ಕೂ ಮೊದಲು ರಸ್ತೆಯಲ್ಲಿ ಆಗಷ್ಟೇ ಎರಡು ಬೈಕ್‌ಗಳು ಪಾಸ್‌ ಆಗಿದ್ದವು. ಎರಡು ಸೆಕೆಂಡ್ ತಡವಾಗಿದ್ದರೂ ಪ್ರಾಣಪಕ್ಷಿಯೇ ಹಾರಿಹೋಗುತ್ತಿತ್ತು.

ಇನ್ನೂ ಮೈ-ಕೈ ಸುಟ್ಟು ನರಳಾಡುತ್ತಿದ್ದರು ಗಾಯಾಳು ರಾಹುಲ್ ದಾಸ್ ಗಲ್ಲಾ ಪೆಟ್ಟಿಗೆ ಹುಡುಕಾಡುತ್ತಿದ್ದ. ಅಂಗಡಿಯ ಒಳಭಾಗದಲ್ಲೇ ಇದ್ದ ರಾಹುಲ್ ದಾಸ್ ಸಿಲಿಂಡರ್‌ ಸ್ಫೋಟ್‌ವಾಗುತ್ತಿದ್ದಂತೆ ಹೊರಗೆ ಬಂದಿದ್ದ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗಾಯಾಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಅಕ್ರಮ ರೀ ಫಿಲ್ಲಿಂಗ್‌

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹುಳಿಮಾವು ಸುತ್ತಾಮುತ್ತಾ ಅಕ್ರಮ ರೀ ಫಿಲ್ಲಿಂಗ್ ತಲೆ ಎತ್ತಿದೆ. ಸ್ಫೋಟ ಸಂಭವಿಸಿದ ರಸ್ತೆಯಲ್ಲೇ 5 ಕ್ಕೂ ಹೆಚ್ಚು ರೀ ಫಿಲ್ಲಿಂಗ್ ಅಡ್ಡ ಇದೆ. ಹೀಗಾಗಿ ಹುಳಿಮಾವು ಠಾಣೆ ಪೊಲೀಸರು ಎಲ್ಲಾ ಅಂಗಡಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version