ಬೆಂಗಳೂರು: ಭಾರತ ಒಂದು ಹಿಂದು ರಾಷ್ಟ್ರವಾಗಿದ್ದು, ಧರ್ಮದಲ್ಲೆ ನಂಬಿಕೆಯನ್ನು ಇಟ್ಟುಕೊಂಡು ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದ್ದಾರೆ.
ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಮಂಗಳವಾರ ನಡೆದ ತಿಗಳ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಇದು ಹಿಂದು ರಾಷ್ಟ್ರ ಎಂದರು. ವೇದಿಕೆ ಮೇಲೆ ಕುಳಿತಿದ್ದ ಶಾಸಕ ಎನ್.ಎ. ಹ್ಯಾರಿಸ್ ಅವರ ಹೆಸರನ್ನು ಕೂಗಿ ಮತ್ತೊಮ್ಮ, ಇದು ಹಿಂದು ರಾಷ್ಟ್ರ ಎಂದು ತಿಳಿಸಿದರು. ಹಿಂದು, ಮುಸ್ಲಿಂ, ಕ್ರೈಸ್ತರು, ಇಲ್ಲಿ ಎಲ್ಲ ಜಾತಿಗಳೂ ಅವರವರ ಧರ್ಮವನ್ನು ನಂಬಿಕೊಂಡು ಬಂದಿದ್ದಾರೆ. ದೇವನೊಬ್ಬ ನಾಮ ಹಲವು ಎಂದು ಎಲ್ಲ ಧರ್ಮಗಳ ಬಗ್ಗೆ ವ್ಯಾಖ್ಯಾನ ಮಾಡುತ್ತೇವೆ.
ಧರ್ಮರಾಯ, ದ್ರೌಪತಿ ಎನ್ನುವುದು ಈ ಸಮಾಜದ ಆಧಾರ ದೈವಗಳು. ಇಡೀ ಹಿಂದು ಧರ್ಮ ಉಳಿದುಕೊಂಡಿರುವುದೇ ಧರ್ಮರಾಯನ ಧರ್ಮತ್ವದಿಂದ. ಇದರ ಮೇಲೆ ನಾನು ಭಾಷಣ ಮಾಡಿದ್ದೇನೆ. ದ್ರೌಪದಿಯ ಗುಣಗಳನ್ನು ಅನೇಕ ಸಂದರ್ಭದಲ್ಲಿ ತಿಳಿಸಿದ್ದೇನೆ. ನೂರಾರು ನಾಟಕಕಗಳಿಗೆ ಹೋಗಿದ್ದೇನೆ. ಒಬ್ಬ ಮನುಷ್ಯ ಯಶಸ್ಸು ಕಾಣಬೇಕೆಂದರೆ ಧರ್ಮರಾಯನ ಧರ್, ಕರ್ಣನ ದಾನತ್ವ, ಅರ್ಜುನನ ಗುರಿ ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ.
ಮಾತು ಕೊಡುವುದು ಮುಖ್ಯವಲ್ಲ, ನಾವು ಅದನ್ನು ಉಳಿಸಿಕೊಂಡು ಹೋಗಬೇಕು. ತಿಗಳ ಸಮುದಾಯ ಪಾಂಡವರ ವಂಶಸ್ಥರು ಎನ್ನಲಾಗುತ್ತದೆ. ಈ ಸಮಾಜದ ಜೊತೆಗೆ ಬೆಳೆದವನು ನಾನು. ರಾಜಕುಮಾರ್ ಅಪಹರಣ ಆದಾಗ ಯಾರು ಪೊಲೀಸರೂ ಹೋಗಿರಲಿಲ್ಲ. ಐವತ್ತು ಜನ ಸಿಕಾರಿಧಾರರನ್ನು ಕರೆಸಿ, ಎಂ.ಎಸ್. ಕೃಷ್ಣ ಅವರ ಮನೆಗೆ ಕರೆಸಿ, ಮಾತಾಡಿ, ಅವರನ್ನು ಕಾಡಿನಲ್ಲಿ ಶೋಧನೆ ಮಾಡಲು ಕಳಿಸಿದರು. ಧೈರ್ಯವಾಗಿ ಶೋಧನೆ ಮಾಡಲು ಬಂದಿದ್ದರು ಈ ಸಮುದಾಯದವರು.
ಪಿ.ಆರ್ ರಮೇಶ ಅವರನ್ನು ಮೇಯರ್ ಮಾಡುವ ವಿಚಾರದಲ್ಲಿ ಎಸ್ ಎಂ.ಕೃಷ್ಣ ಅವರ ಜೊತೆ ಜಗಳ ಆಡಿದ್ದೆ. ಸಿಎಂ ನಾಗರಾಜ್ ರಾಜಾಜಿನಗರ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅವರಿಗೆ ಟಿಕೆಟ್ ತಪ್ಪಿಸಿ, ನರೇಂದ್ರ ಬಾಬುಗೆ ಟಿಕೆಟ್ ಕೊಡಿಸಿದ್ದೆವು. ನರೇಂದ್ರ ಬಾಬು ಹೋದ, ಹೋಗುವಾಗ ಹೇಳಿ ಹೋದ ಅದು ಬೇರೆ ವಿಚಾರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಮಾಜಕ್ಕೆ ಅಭಿವೃದ್ಧಿ ಪ್ರಾಧಿಕಾರ ಮಾಡ್ತೇವೆ. ಬೆಂಗಳೂರಿನ ಕರಗ ಮಾಡಲು ಹಣ ನೀಡಲು ಹಿಂದೆಮುಂದೆ ಮಾಡ್ತಾ ಇದ್ದಾರೆ. ನೀವು ಒಂದು ಅರ್ಜಿ ಹಿಡಿದು ಬನ್ನಿ, ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನ ಭೇಟಿ ಮಾಡಿಸಿ, ಮಾತಾಡುತ್ತೇನೆ. ಕರಗ ಮಾಡಲು ಹಣ ಮೀಸಲು ಇಡುತ್ತೇವೆ. ಅದು ಪಾಲಿಕೆ ಬಜೆಟ್ ಆಗಿರಬಹುದು, ರಾಜ್ಯ ಬಜೆಟ್ ಆಗಿರಬಹುದು, ಒಟ್ಟಿನಲ್ಲಿ ಬಜೆಟ್ ಮೀಸಲು ಇಡುತ್ತೇವೆ. ಇದು ಕಾಂಗ್ರೆಸ್ ದ ಪಕ್ಷದ ಗ್ಯಾರಂಟಿ ಎಂದರು.