ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಅವರ ಪತ್ನಿಯ ವಿರುದ್ಧ ಅವಹೇಳಕಾರಿ ಪೋಸ್ಟ್‌ಗಳನ್ನು ಮಾಡಿದ ಕಿಡಿಗೇಡಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಅವಹೇಳಕಾರಿ ಪೋಸ್ಟ್ ಮಾಡಲಾಗಿತ್ತು. ಇನ್‌ಸ್ಟಾಗ್ರಾಂನ ಟ್ರೋಲ್ ಕನ್ನಡಿಗ ಎಂಬ ಪೇಜ್‌ನಲ್ಲಿ ಸಿಎಂ ಕುಟುಂಬಸ್ಥರ ವಿರುದ್ದ ಪೋಸ್ಟ್ ಮಾಡಲಾಗಿತ್ತು. ಫೇಸ್‌ಬುಕ್‌ನ ಕೃತಿಕಾ ಕೃತಿ ಎಂಬ ಖಾತೆಯಲ್ಲಿ ಸಿಎಂ ಪತ್ನಿ ವಿರುದ್ಧ ಅವಹೇಳಕಾರಿ ಪೋಸ್ಟ್ ಮಾಡಲಾಗಿದೆ.
ಈ ಬಗ್ಗೆ ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್ ಅವರಿಂದ ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ. ದೂರು ಆಧರಿಸಿ ಅಪರಿಚಿತರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ IPC ಸೆಕ್ಷನ್ 153,153A,505(2) ಅಡಿ FIR ದಾಖಲಾಗಿದೆ.
ಹಿಂದೂ ಜಾಗರಣ ವೇದಿಕೆ ಸಂಚಾಲಕನ ಮೇಲೆ ಹಲ್ಲೆ
ಶಿವಮೊಗ್ಗ: ಹಿಂದೂ ಜಾಗರಣಾ ವೇದಿಕೆ ಸಹ ಸಂಚಾಲಕನ ಮೇಲೆ ಯುವಕರಿಂದ ಹಲ್ಲೆ (Assault case) ನಡೆದಿದೆ. ನಡುರಸ್ತೆಯಲ್ಲಿ ಅಡ್ಡಗಟ್ಟಿ ಯುವಕರಿಂದ ಹಲ್ಲೆ ನಡೆದಿದ್ದು, ಹಲ್ಲೆ ಮಾಡಿದ ದೃಶ್ಯ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.
ಹಿಂದೂ ಜಾಗರಣ ವೇದಿಕೆ ಸಹ ಸಂಚಾಲಕ ಶಿವಕುಮಾರ್ ಮೇಲೆ ಶಿವಮೊಗ್ಗ ನಗರದ ತೀರ್ಥಹಳ್ಳಿ ಮುಖ್ಯರಸ್ತೆಯ ವಿಜಯ ಮೋಟಾರ್ಸ್ ಮುಂಭಾಗದ ರಸ್ತೆಯಲ್ಲಿ ಹಲ್ಲೆ ನಡೆದಿದೆ. ಏರ್ಪೋರ್ಟ್‌ನನಲ್ಲಿ ಟ್ಯಾಕ್ಸಿ ಡ್ರೈವಿಂಗ್ ಕೆಲಸ ಮಾಡುತ್ತಿರುವ ಸಂತೆಕಡೂರು ಗ್ರಾಮದ ಶಿವಕುಮಾರ್, ಸರ್ಕಾರಿ ಬಸ್ ನಿಲ್ದಾಣಕ್ಕೆ ಪ್ಯಾಸೆಂಜರ್ ಡ್ರಾಪ್ ಮಾಡಿ ಹೋಗುವಾಗ ಹಲ್ಲೆ ನಡೆಸಲಾಗಿದೆ.
ಸ್ಕೂಟಿ ಹಾಗೂ ಬೈಕಿನಲ್ಲಿ ಬಂದ 4 ಜನ ಯುವಕರಿಂದ ಹಲ್ಲೆ ನಡೆದಿದ್ದು, ಅವಾಚ್ಯವಾಗಿ ನಿಂದಿಸಿ, ದಾಳಿ ಮಾಡಲಾಗಿದೆ. ನಿನ್ನ ಗಾಡಿ ನಂಬರ್ ನೋಡಿಕೊಂಡಿದ್ದೇವೆ, ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಲಾಗಿದೆ. ನಡುರಸ್ತೆಯಲ್ಲಿ ಹಲ್ಲೆ ಮಾಡುತ್ತಿರುವುದನ್ನು ಸ್ಥಳೀಯರು ತಡೆದಿದ್ದು, ಗಾಯಗೊಂಡ ಶಿವಕುಮಾರ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಶಿವಕುಮಾರ್, ಪಾರ್ಕ್‌ನಲ್ಲಿ ಕುಳಿತ ಮುಸ್ಲಿಂ ಯುವಕ-ಹಿಂದೂ ಯುವತಿಯರ ಬಗ್ಗೆ ಮಾಹಿತಿ ನೀಡುತ್ತಿದ್ದ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ವಿಚಾರ ತಿಳಿಸುತ್ತಿದ್ದ. ಇದೇ ಕಾರಣಕ್ಕೆ ಯುವಕರ ಗುಂಪು ಫಾಲೋ ಮಾಡಿ ಹಲ್ಲೆ ಮಾಡಿರುವ ಶಂಕೆ ಇದೆ. ವೈಯಕ್ತಿಕ ಕಾರಣಗಳಿರುವ ಸಾಧ್ಯತೆ ಹಿನ್ನೆಲೆಯೂ ಪೊಲೀಸರಿಂದ ತನಿಖೆಯಾಗುತ್ತಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Moral Policing: ಹಿಂದು ಯುವತಿಗೆ ಲವ್ ಪ್ರಪೋಸ್ ಮಾಡ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ