Site icon Vistara News

Detective Agency: ಡಿಟೆಕ್ಟಿವ್‌ ಏಜೆನ್ಸಿಗಳಿಗೆ ಅನಧಿಕೃತವಾಗಿ ಸಿಡಿಆರ್‌ ನೀಡುತ್ತಿದ್ದ ಕಾನ್ಸ್‌ಟೇಬಲ್‌ ಅರೆಸ್ಟ್‌

Detective Agency

ಬೆಂಗಳೂರು: ಡಿಟೆಕ್ಟಿವ್‌ ಏಜೆನ್ಸಿಗಳಿಗೆ (Detective Agency) ಅನಧಿಕೃತವಾಗಿ ಸಿಡಿಆರ್ ನೀಡುತ್ತಿದ್ದ ಕಾನ್ಸ್‌ಟೇಬಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುನಿರತ್ನ ಬಂಧಿತ ಪೊಲೀಸ್‌ ಸಿಬ್ಬಂದಿ.

ಸಿಸಿಬಿ ಪೊಲೀಸರು ಕಳೆದ ಮೇ ತಿಂಗಳಲ್ಲಿ ಡಿಟೆಕ್ಟಿವ್‌ ಏಜೆನ್ಸಿಗಳ ಮೇಲೆ ದಾಳಿ ಮಾಡಿ ಕೆಲವರನ್ನು ಬಂಧನ ಮಾಡಿದ್ದರು. ಈ ಸಂಬಂಧ ಮೂರು ಪ್ರಕರಣಗಳು ದಾಖಲಿಸಿದ್ದರು. ಇದರ ಸಂಬಂಧ ತನಿಖೆ ಮುಂದುವರೆಸಿದ್ದ ಸಿಸಿಬಿ ಪೊಲೀಸರು, ಸಿಐಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸಟೇಬಲ್ ಮುನಿರತ್ನ ಈ ಡಿಟೆಕ್ವಿವ್‌ ಏಜೆನ್ಸಿಗಳಿಗೆ ಸಿಡಿಆರ್‌ ನೀಡುತ್ತಿದ್ದ.

ಅಕ್ರಮ ಸಿಡಿಆರ್ ಪಡೆಯುತ್ತಿದ್ದ ನಾಗೇಶ್ವರ್ ರೆಡ್ಡಿ ಹಾಗೂ ಮಾಹಿತಿ ಸೋರಿಕೆ ಮಾಡುತ್ತಿದ್ದ ಮುನಿರತ್ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮುನಿರತ್ನ ಅಧಿಕೃತ ಪ್ರಕರಣಗಳ ಜತೆ ಡಿಟೆಕ್ವಿವ್‌ ಏಜೆನ್ಸಿ ಅವರು ನೀಡುತ್ತಿದ್ದ ನಂಬರ್ ಸೇರಿಸಿ ಕೊಡುತ್ತಿದ್ದ.

ಮುನಿರತ್ನ ಸಿಐಡಿ ಟೆಕ್ನಿಕಲ್ ಸೆಲ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಕೆಲವು ಪೊಲೀಸ್ ಅಧಿಕಾರಿಗಳ ಪತ್ನಿಯರು ಸಿಡಿಆರ್ ಪಡೆದಿರುವುದು ಪತ್ತೆಯಾಗಿದೆ. ತಮ್ಮ ಪತಿಯ ಸಿಡಿಆರ್‌ ಅನ್ನು ಡಿಟೆಕ್ಟಿವ್‌ ಏಜೆನ್ಸಿಗಳ ಮೂಲಕ ಪಡೆದಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Assault Case : ಕಾರು ಚಾಲಕನ ಮುಖಕ್ಕೆ‌ ಉಗಿದು, ಗೂಂಡಾಗಿರಿ ಮಾಡಿದ ಆಟೋ ಡೈವರ್‌

ಸ್ಕೂಟರ್‌ನಲ್ಲಿ ಬರುತ್ತಿದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್‌ ಪೇದೆ!

ತುಮಕೂರು: ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಸಿನೀಮಿಯ ಶೈಲಿಯಲ್ಲಿ ಕಳ್ಳನೊಬ್ಬನನ್ನು ಹಿಡಿದಿರುವ ಘಟನೆ (Police Raid) ನಡೆದಿದ್ದು, ಕಳ್ಳನನ್ನು ಹಿಡಿಯುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮಂಜೇಶ್@420 ಮಂಜ @ಹೊಟ್ಟೆ ಮಂಜ ಪೊಲೀಸ್ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ. ಕೊರಟಗೆರೆ ಪೊಲೀಸ್ ಠಾಣೆಯ ಪೇದೆ ದೊಡ್ಡಲಿಂಗಯ್ಯ ಕಳ್ಳನನ್ನು ಹಿಡಿದವರು. ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 420 ಮಂಜನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯ ಸಿಗ್ನಲ್ ಬಳಿ ಪೇದೆ ಸೆರೆ ಹಿಡಿದಿದ್ದಾರೆ.

ಕಳ್ಳ ಮಂಜ ಮತ್ತು ಪೊಲೀಸ್‌ ಪೇದೆ ದೊಡ್ಡಲಿಂಗಯ್ಯ

ಸಿಗ್ನಲ್‌ನಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಕಳ್ಳನನ್ನು ಪೇದೆ ಅಡ್ಡಗಟ್ಟಿದ್ದಾರೆ. ಆದರೂ ಅವರನ್ನು ಎಳೆದುಕೊಂಡು ಕಳ್ಳ ಮುಂದೆ ಸಾಗಿದ್ದಾನೆ. ಪಟ್ಟು ಬಿಡದ ಪೊಲೀಸ್‌, ಕಳ್ಳನನ್ನು ಬೆನ್ನಟ್ಟಿ ಕಾಲನ್ನು ಹಿಡಿದು ನೆಲಕ್ಕೆ ಬೀಳಿಸಿದ್ದಾರೆ. ಬಳಿಕ ಅಲ್ಲಿದ್ದ ಟ್ರಾಫಿಕ್‌ ಪೊಲೀಸರು ಕಳ್ಳನನ್ನು ಹಿಡಿಯಲು ನೆರವಾಗಿದ್ದಾರೆ. ನಂತರ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿ ಕಳ್ಳನಿಗೆ ಹಿಗ್ಗಾಮುಗ್ಗಾ ಬಾರಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

https://vistaranews.com/wp-content/uploads/2024/08/WhatsApp-Video-2024-08-07-at-8.15.12-PM.mp4

ಖತರ್ನಾಕ್ ಕಳ್ಳನಿಗೆ ಚಿನ್ನದ ಸರ ಹಾಕಿರುವ ವೃದ್ಧೆಯರೇ ಟಾರ್ಗೆಟ್. ವೃದ್ಧೆಯರನ್ನೇ ಟಾರ್ಗೆಟ್ ಮಾಡಿ, ಪಿಂಚಣಿ, ಸರ್ಕಾರದ ಸವಲತ್ತು ಕೊಡಿಸುತ್ತೇನೆಂದು ನಂಬಿಸಿ, ಚಿನ್ನದ ಸರ ಕದ್ದು ಖತರ್ನಾಕ್ ಮಂಜ ಪರಾರಿಯಾಗುತ್ತಿದ್ದ. ಈತನ ವಿರುದ್ಧ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಹೆಬ್ಬೂರು ಪೊಲೀಸ್ ಠಾಣೆ ಸೇರಿ ಸುಮಾರು 10ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದವು.

https://vistaranews.com/wp-content/uploads/2024/08/WhatsApp-Video-2024-08-07-at-8.15.12-PM-1.mp4

ಸುಮಾರು 1 ತಿಂಗಳಿಂದ ಪೊಲೀಸರ ಕೈಗೆ ಸಿಗದೇ ಕಣ್ತಪ್ಪಿಸಿ ಓಡಾಡುತ್ತಿದ್ದ 420 ಮಂಜ, ಬೆಂಗಳೂರಿನ ಮತ್ತಿಕೆರೆ ಕಡೆಯಿಂದ ಸದಾಶಿವನಗರ ಪೊಲೀಸ್ ಠಾಣೆ ಕಡೆಗೆ, ಬಿಳಿ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಬರುತ್ತಿರುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದರು. ಸದಾಶಿವನಗರ ಠಾಣೆ ಸಿಗ್ನಲ್ ಬಳಿ 420 ಮಂಜನನ್ನು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ದೊಡ್ಡಲಿಂಗಯ್ಯ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನ ಹಿಡಿದಿದ್ದಾರೆ.

ಸದ್ಯ ಖತರ್ನಾಕ್ ಕಳ್ಳ 420 ಮಂಜನನ್ನು ಬಂಧಿಸಿ ಕೊರಟಗೆರೆ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version