ಬೆಂಗಳೂರು: ಫೈಟ್ ಮಾಸ್ಟರ್ ರವಿವರ್ಮ (Ravi Varma) ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿ ಡಿಫರೆಂಟ್ ಡ್ಯಾನಿ (Different Danny) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅವಹೇಳನಕಾರಿ ಹೇಳಿಕೆ, ಜೀವ ಬೆದರಿಕೆ ಹಾಕಿರುವ ರವಿವರ್ಮ ವಿರುದ್ಧ ದೂರು ದಾಖಲಾಗಿದೆ. ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಸಿನಿಮಾದ ಫೈಯರ್ ಫೈಟ್ ನಾನು ಮಾಡಿದ್ದು, ಆದರೆ ಈ ಸೀನ್ ಫೈಯರ್ ಫೈಟ್ ನಾನೇ ಮಾಡಿದ್ದು ಎಂದು ರವಿವರ್ಮ ಸುಳ್ಳು ಹೇಳಿದ್ದಾರೆ ಎಂದು ಡ್ಯಾನಿ ಕಿಡಿಕಾರಿದ್ದಾರೆ.
ಫೈರ್ ಫೈಟ್ ಮಾಡಿದ್ದು ನಾನು ಆದರೆ ರವಿವರ್ಮ ಕ್ರೆಡಿಟ್ ತೆಗೆದುಕೊಂಡು, ಬಾಲಿವುಡ್‌ನಲ್ಲಿ ಅವಕಾಶವನ್ನು ಪಡೆದುಕೊಂಡರು ಎಂದು ಡ್ಯಾನಿ ಆರೋಪಿಸಿದ್ದಾರೆ. ಫೈಯರ್ ಫೈಟಿಂಗ್ ನಾನೇ ಮಾಡಿದ್ದು ಎಂದು ಪ್ರಭುದೇವನ್‌ರಿಗೆ ಹೇಳಿ ಬಾಲಿವುಡ್‌ಗೆ ಹೋಗಿದ್ದಾರೆ. ಇವರ ಈ ಸುಳ್ಳು ಹೇಳಿಕೆಯನ್ನು ನಾನು ಖಾಸಗಿ ಸುದ್ದಿ ವಾಹಿನಿಯಲ್ಲಿ ಹೇಳಿದ್ದೆ. ಹೀಗಾಗಿ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಡ್ಯಾನಿ ಆರೋಪಿಸಿದ್ದಾರೆ.
ರವಿವರ್ಮ ನಾಲ್ಕೈದು ಬಾರಿ ನನಗೆ ಕರೆ ಮಾಡಿದ್ದರು. ಆದರೆ ಕೌಟುಂಬಿಕ ಕಾರಣಕ್ಕೆ ನಾನು ಕರೆ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ನನ್ನ ಸಹಾಯಕನಾದ ಕೆ.ಪಿ ಮಂಜುಗೆ ರವಿವರ್ಮ ಫೋನ್ ಮಾಡಿ, ನನ್ನ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲದೆ ಕೊಲೆ ಬೆದರಿಕೆ ಹಾಕಿ, ಇವನನ್ನು ಮಾಸ್ತಿಗುಡಿ ದುರಂತದ ಸಮಯದಲ್ಲೇ ಮುಗಿಸಬೇಕಿತ್ತು. ಆದರೆ ನಮ್ಮ ಅಕ್ಕ ತಡೆದಿದ್ದಕ್ಕೆ ಸುಮ್ಮನಾಗಿಬಿಟ್ಟೆ. ಈಗಲೂ ನನ್ನ ಬಗ್ಗೆ ಮೀಡಿಯಾ ಮುಂದೆ ಮಾತನಾಡುತ್ತಿದ್ದಾನೆ. ಈಗ ಅವನನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎತ್ತಿಬಿಡಿಸುತ್ತೇನೆಂದು ಬೆದರಿಕೆ ಮಾತುಗಳನ್ನಾಡಿದ್ದಾರೆ ಎಂದು ಡ್ಯಾನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರವಿವರ್ಮ ಅವರು ಡ್ಯಾನಿ ಅವರ ಸ್ಟಂಟ್ ಸಹಾಯಕ ಮಂಜು ಜತೆ ಮಾತಾನಾಡಿರುವ ಆಡಿಯೋ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಆಡಿಯೋದಲ್ಲಿ ಫೈಟ್ ಮಾಸ್ಟರ್ ರವಿ ವರ್ಮ ಅವಾಚ್ಯ ಪದವನ್ನು ಬಳಕೆ ಮಾಡಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಫರೆಂಟ್ ಡ್ಯಾನಿ, ಜಾಕಿ ರೀ ರಿಲೀಸ್ ಸಮಯದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರವಿವರ್ಮ, ಜಾಕಿ ಸಿನಿಮಾದಲ್ಲಿ ಎಲ್ಲ ಫೈಟಿಂಗ್ ಸೀನ್‌ಗಳನ್ನು ನಾನೇ ಮಾಡಿದ್ದು, ಫೈರ್ ಫೈಟಿಂಗ್ ಡ್ಯಾನಿ ಮಾಡಿದ್ದರು. ಆದರೆ ಆ ಫೈರ್ ಫೈಟಿಂಗ್‌ನಲ್ಲಿ ಇನ್ನು ಏನೋ ಬೇಕಿತ್ತು ಎಂದು ಹೇಳಿಕೆ ನೀಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ