ಬೆಂಗಳೂರು: ಯಾವುದೇ ಜಾತಿಯ ಹೆಸರನ್ನು ಹಿಡಿದು ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಲ್ಹಾದ ಜೋಶಿ ಅವರ ಕುರಿತು ಎಚ್.ಡಿ. ಕುಮಾರಸ್ವಾಮಿ ಟೀಕೆಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಯಾವ ಉದ್ದೇಶದಿಂದ ಹಾಗೆ ಹೇಳಿದರು ಗೊತ್ತಿಲ್ಲ. ಕುಮಾರಸ್ವಾಮಿ ಅವರೆ ಹೀಗೆ ಹೇಳಿರಬೇಕು. ಆ ರೀತಿ ಜಾತಿ ಹೆಸರನ್ನ ಇಟ್ಡುಕೊಂಡು ಮಾತನಾಡುವುದು ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಶೋಭೆ ತರಲ್ಲ. ಒಂದು ಸಮುದಾಯವನ್ನು ಎಳೆದು ತಂದು ಹಾಗೆ ಮಾತನಾಡುವುದು ಸರಿಯಲ್ಲ. ಎಲ್ಲ ಜಾತಿ ಸಮುದಾಯದಲ್ಲೂ ಅನೇಕ ಉಪ ಸಮಯದಾಯಗಳು ಇದ್ದೆ ಇರುತ್ತವೆ ಎಂದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಈಗಾಗಲೇ ಚುನಾವಣಾ ಸಮಿತಿ ಸಭೆ ಆಗಿದೆ. ಪಾರದರ್ಶಕ ಟಿಕೆಟ್ ಹಂಚಿಕೆ ಮಾಡಬೇಕಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಮತ್ತು ಮಹಿಳೆಯರಿಗೆ ಟಿಕೆಟ್ ನೀಡಬೇಕು. ಸರ್ವೆ ಅಭಿಪ್ರಾಯ, ಕಾರ್ಯಕರ್ತರ ಅಭಿಪ್ರಾಯ ಪಡೆದು ಹಂಚಿಕೆ ಮಾಡ್ತೇವೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ, ಅಸಮಾಧಾನ ಆಗದ ರೀತಿಯಲ್ಲಿ ಟಿಕೆಟ್ ಹಂಚಿಕೆ ಮಾಡ್ತೇವೆ ಎಂದರು.
ಪಾಕಿಸ್ತಾನದ ಸರ್ವೆ ರಿಪೋರ್ಟ್ ಎಂಬ ಸಿಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಮಾತ್ರ. ಬಿಜೆಪಿ ತರಹ ಆಪರೇಷನ್ ಮಾಡಿ ಅಧಿಕಾರಕ್ಕೆ ಬರಲ್ಲ. ನಾವು ಸ್ವಂತ ಬಲದ ಮೇಲೆ ಈ ಹಿಂದೆಯೂ ಅಧಿಕಾರಕ್ಕೆ ಬಂದಿದ್ದೇವೆ. ಬಿಜೆಪಿ ಇತಿಹಾಸದಲ್ಲೇ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಸಿ. ಟಿ. ರವಿಗೆ ಪಾಕಿಸ್ತಾನದ ಮೇಲೆ ಇಷ್ಟು ಪ್ರೀತಿ ಯಾಕೆ ಗೊತ್ತಿಲ್ಲ. ಪದೇಪದೆ ಪಾಕಿಸ್ತಾನದ ಹೆಸರು ಹೇಳ್ತಾರೆ ಎಂದರು.
ಬಿಜೆಪಿಯವರು ಕೋಮುಗಲಭೆ ಸೃಷ್ಟಿಸುವ ಸಾಧ್ಯತೆಯಿದೆ ಎಂಬ ಸಂಸದ ಡಿ.ಕೆ. ಸುರೇಶ್ ಹೇಳಿಕೆ ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್, ಡಿ.ಕೆ. ಸುರೇಶ್ ಹೇಳಿರುವುದು ನೂರಕ್ಕೆ ನೂರು ಸತ್ಯ. ಸಿ.ಟಿ. ರವಿಯವರಿಗೆ ನಮ್ಮ ದೇಶದ ಜನರ ಮೇಲೆ ನಂಬಿಕೆ ಇಲ್ಲ ಅನಿಸುತ್ತದೆ. ಅವರಿಗೆ ಪಾಕಿಸ್ತಾನದವರ ಮೇಲೆ ಹೆಚ್ಚು ನಂಬಿಕೆ. ಇದೇ ದಿನಾಂಕದಂದು ೧೯೪೮ ಆರ್‌ಎಸ್‌ಎಸ್ ಅನ್ನು ಪಟೇಲ್ ಅವರು ಬ್ಯಾನ್ ಮಾಡಿದ್ದವರು. ನಾಜಿ ಸಂತತಿ, ಫ್ಯಾಸಿಸ್ಟ್ ಮನೊಭಾವದವರಿಗೆ ಕೋಮುಗಲಭೆಗಳೇ ಒಂದು ಸ್ಟ್ರಾಟಜಿ. ನೂರು ಬಾರಿ ಸುಳ್ಳು ಹೇಳುವುದು, ಕೋಮು ಗಲಭೆಗಳನ್ನು ಮಾಡಿಸುವುದೇ ಅವರ ಸ್ಟ್ರಾಟಜಿ. ಯಾರಾದರೂ ಸಾಯಲಿ ಅಂತಲೇ ಕಾಯ್ತಾ ಇರ್ತಾರೆ. ಸತ್ತವರ ಮನೆಗೆ ಹೋಗಿ ಕೋಮು ಬಣ್ಣವನ್ನು ಬಳಿಯುತ್ತಾರೆ ಎಂದು ಹೇಳಿದರು.