Site icon Vistara News

DJ Halli Double Murder: ಡಬಲ್‌ ಮರ್ಡರ್‌ ಆರೋಪಿಯ ಸೈಕೋ ಅವತಾರ ಹೀಗಿದೆ ನೋಡಿ! ಈತನನ್ನು ಹಿಡಿದದ್ದು ಹೇಗೆ?

dj halli double murder culprit felix

ಬೆಂಗಳೂರು: ರಾಜಧಾನಿಯ ಡಿ.ಜೆ ಹಳ್ಳಿಯಲ್ಲಿ ನಡೆದ ಡಬಲ್ ಮರ್ಡರ್‌ (DJ Halli Double Murder) ನಂತರದ ಮೂರೇ ಗಂಟೆಗಳಲ್ಲಿ ಪೊಲೀಸರು (Bangalore police) ಮೂವರು ಆರೋಪಿಗಳನ್ನು ಚುರುಕಿನ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಇವರಲ್ಲಿ ಪ್ರಮುಖ ಆರೋಪಿಯಾಗಿರುವ ಫೆಲಿಕ್ಸ್‌ ಅಲಿಯಾಸ್‌ ಜೋಕರ್‌ ಫೆಲಿಕ್ಸ್‌ ಎಂಬಾತನ ಇನ್‌ಸ್ಟಾಗ್ರಾಂ ಅವತಾರಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.

ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖಾಕಿ ಖೆಡ್ಡಾಕ್ಕೆ ಕೆಡವಲಾಗಿದ್ದು, ಫೆಲಿಕ್ಸ್, ವಿನಯ್ ರೆಡ್ಡಿ, ಶಿವು ಬಂಧಿತ ಆರೋಪಿಗಳು. ಕೊಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿದ್ದ ಹಂತಕರು ಸಿಟಿ ಬಿಟ್ಟು ಕುಣಿಗಲ್ ತಲುಪುತ್ತಿದ್ದಂತೆ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದರು. ಟವರ್ ಡಂಪ್ ಅಧರಿಸಿ ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಪತ್ತೆಗೆ 5 ತಂಡ ರಚಿಸಲಾಗಿತ್ತು. ಘಟನೆ ನಡೆದ ಮೂರು ಗಂಟೆಯೊಳಗೆ ಪಾಪಿಗಳನ್ನು ಬಂಧಿಸಿ ಕರೆತರಲಾಗಿದೆ.

ಕೊಲೆಯಾದ ಫಣೀಂದ್ರ ಅವರು ಇತ್ತೀಚೆಗೆ ಫೆಲಿಕ್ಸ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಅದೇ ದ್ವೇಷದ ಹಿನ್ನೆಲೆಯಲ್ಲಿ ಫಣೀಂದ್ರರನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳಿಗೆ ವಿನುಕುಮಾರ್ ಅವರನ್ನು ಹತ್ಯೆ ಮಾಡುವ ಉದ್ದೇಶವಿರಲಿಲ್ಲ. ಫಣೀಂದ್ರರ ಹತ್ಯೆಯನ್ನು ತಡೆಯಲು ಹೋದಾಗ ವಿನುಕುಮಾರ್ ಅವರನ್ನು ಕಿರಾತಕರು ಕೊಲೆ ಮಾಡಿದ್ದರು. ವಿನಯ್ ಹಾಗೂ ಶಿವುಗೆ ಫಣೀಂದ್ರರ ಮೇಲೆ ಯಾವುದೇ ದ್ವೇಷವಿರಲಿಲ್ಲ. ಫೆಲಿಕ್ಸ್ ಮಾತನ್ನು ಕೇಳಿ ಹತ್ಯೆಗೆ ಕೈ ಜೋಡಿಸಿದ್ದರು. ಫೆಲಿಕ್ಸ್ ಶಿವಮೊಗ್ಗ ಮೂಲದವನಾಗಿದ್ದು, ವಿನಯ್ ರೂಪೇನ ಅಗ್ರಹಾರದವನಾಗಿದ್ದಾನೆ.

ವಿಚಿತ್ರ ಮನುಷ್ಯನಾಗಿದ್ದ ಆರೋಪಿ ಫೆಲಿಕ್ಸ್, ಮುಖ ಮತ್ತು ಮೈ ತುಂಬಾ ವಿಲಕ್ಷಣವಾದ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದ. ಮೈಗಿಡೀ ಹಾಲಿವುಡ್‌ನ ಜೋಕರ್‌ ಫಿಲಂನ ಖಳನಾಯಕನಂತೆ ಬಣ್ಣ ಬಳಿದುಕೊಂಡು ಅದರ ವಿಡಿಯೋ ಮಾಡಿ ತನ್ನ ಇನ್‌ಸ್ಟಾ ಖಾತೆಯಲ್ಲಿ ಅಪ್‌ಲೋಡ್‌ ಮಾಡಿಕೊಂಡಿದ್ದಾನೆ. ಇದನ್ನು ನೋಡಿದರೆ ಅಳ್ಳೆದೆಯವರು ಬೆಚ್ಚಿ ಬೀಳುವಂತಿದೆ. ಸ್ಮಶಾನದಲ್ಲಿ ಹುಡುಗಿಗೆ ತಾಳಿ ಕಟ್ಟಿ ಮದುವೆಯಾಗಿದ್ದ. ವಿಕಾರವಾದ ಸ್ವರದಲ್ಲಿ ಹಾಡುತ್ತಿದ್ದರೂ, ನಾನು ರ್ಯಾಪರ್ ಎಂದು ಇನ್ಸ್ಟಾದಲ್ಲಿ ಬಿಲ್ಡಪ್ ಕೊಟ್ಟುಕೊಂಡಿದ್ದ. ಕತ್ತಿಗೆ ಡೂಪ್ಲಿಕೇಟ್ ಬಂಗಾರದ ಹಾರಗಳನ್ನು ಹಾಕಿಕೊಂಡು ಶೋಕಿ ಮಾಡುತ್ತಿದ್ದ. ಈತನ ಅವತಾರವನ್ನು ಕಂಡು ಈ ಹಿಂದೆ ಆತ ಕೆಲಸದಲ್ಲಿದ್ದ ಸ್ಥಳಗಳ ಸಹೋದ್ಯೋಗಿಗಳು ಆಕ್ಷೇಪಿಸಿದ್ದರು. ಇದರಿಂದಾಗಿಯೇ ಆತ ಕೆಲಸ ಕಳೆದುಕೊಂಡಿದ್ದ ಎನ್ನಲಾಗಿದೆ.

ಕೊಲೆಗೂ ಮುನ್ನ ಬಿಲ್ಡಪ್ ಸ್ಟೇಟಸ್ ಹಾಕಿದ್ದ ಫೆಲಿಕ್ಸ್, ಕೊಲೆ ನಂತರವೂ ಇನ್ಸ್ಟಾದಲ್ಲಿ ಕೊಲೆ ಮಾಡಿರೋದಾಗಿ ಬಿಲ್ಡಪ್ ಕೊಟ್ಟಿದ್ದಾನೆ. ʼಪೇಪರ್ ಮುಂದುಗಡೆ ಬರ್ಕೊ ಬೆಂಗ್ಳೂರ್ ನಂದುʼ ಎಂದು ಬರೆದಿದ್ದ. ಮೃತ ಡೆಡ್ಲಿ ರೌಡಿ ಸೋಮನ ಸಹಚರ ರೌಡಿ, ಈರುಳ್ಳಿ ಬಾಬು ಜೊತೆಗೆ ತಾನಿರುವ ಫೋಟೊ ಹಾಕಿ ಬಿಲ್ಡಪ್ ಕೊಟ್ಟಿದ್ದ.

ಇದನ್ನೂ ಓದಿ: Murder Case:‌ ಡಿ.ಜೆ.ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ

Exit mobile version