Site icon Vistara News

DJ Halli Double Murder: ಅಮೃತಹಳ್ಳಿ ಜೋಡಿ ಕೊಲೆ; ಸುಪಾರಿ ನೀಡಿದ ವ್ಯಕ್ತಿ, ಆಮ್‌ ಆದ್ಮಿ ಪಾರ್ಟಿ ಮುಖಂಡನ ಬಂಧನ

arun kumar double murder culprit djhalli

ಬೆಂಗಳೂರು: ಅಮೃತಹಳ್ಳಿ ಪಂಪಾನಗರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಕೊಲೆ ಮಾಡಲು ಸುಪಾರಿ ನೀಡಿದ ಅರುಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಮೃತಹಳ್ಳಿ ಪೊಲೀಸರಿಂದ ಆರೋಪಿಯ ಬಂಧನ ನಡೆದಿದೆ. ಜಿ-ನೆಟ್ ಎಂಬ ಕಂಪನಿಯ ಮಾಲೀಕನಾಗಿದ್ದ ಅರುಣ್ ಕುಮಾರ್ ಆಮ್‌ ಆದ್ಮಿ ಪಕ್ಷದ ಮುಖಂಡನೂ ಆಗಿದ್ದ. ಸೈಕೋ ಫೆಲಿಕ್ಸ್‌ನಿಂದ ಮೃತರಾದ ಫಣೀಂದ್ರ ಸುಬ್ರಹ್ಮಣ್ಯ ಅವರು ಅದೇ ಕಂಪನಿಯಲ್ಲಿ ಹೆಚ್‌ಆರ್ ಆಗಿದ್ದರು. ಕೊಲೆಯಾದ ಇನ್ನೊಬ್ಬರಾದ ವಿನು ಕುಮಾರ್ ಈ ಕಂಪನಿಯ ಸಿಇಓ‌ ಆಗಿದ್ದರು.

8 ತಿಂಗಳ ಹಿಂದೆ ಫಣೀಂದ್ರ ಮತ್ತು ವಿನು ಕುಮಾರ್ ಜಿ-ನೆಟ್ ತೊರೆದು ಏರ್‌ಆನ್‌ ಎಂಬ ತಮ್ಮದೇ ಹೊಸ ಕಂಪನಿ‌ ಸ್ಥಾಪಿಸಿದ್ದರು. ಹಳೆಯ ಕಂಪನಿಯ ಗ್ರಾಹಕರನ್ನು ತಮ್ಮತ್ತ ಸೆಳೆದುಕೊಂಡಿದ್ದರು. ಇದರಿಂದ ಜಿ-ನೆಟ್‌ ಸಾಕಷ್ಟು ನಷ್ಟ ಅನುಭವಿಸಿತ್ತು. ಇದರಿಂದ ಕೆರಳಿದ ಅರುಣ್‌ ಕುಮಾರ್‌, ಈ ಹಿಂದೆಯೇ ಪರೋಕ್ಷವಾಗಿ ಫಣೀಂದ್ರಗೆ ವಾರ್ನ್ ಮಾಡಿದ್ದ. ಫಣೀಂದ್ರರ ಅಣ್ಣನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ʼನನ್ನ ಬಳಿ ಗಾಂಜಾ ಹುಡುಗರಿದ್ದಾರೆ, ಏನಾದ್ರೂ ಆದ್ರೆ ನನಗೆ ಗೊತ್ತಿಲ್ಲʼ ಎಂದಿದ್ದ.

ಬ್ಯುಸೆನೆಸ್‌ನಲ್ಲಿ ಇದು ಸಾಮಾನ್ಯ ಎಂದು ಫಣೀಂದ್ರ ಸುಮ್ಮನಾಗಿದ್ದರು. ನಂತರ ಅರುಣ್ ಹಾಗೂ ಫೆಲಿಕ್ಸ್ ಇಬ್ಬರೂ ಹತ್ಯೆ ಸಂಚು ನಡೆಸಿದ್ದರು. ಫಣೀಂದ್ರನನ್ನು ಮುಗಿಸುವುದಾಗಿ ಅರುಣ್ ಮುಂದೆ ಫೆಲಿಕ್ಸ್‌ ಹೇಳಿದ್ದ. ಇದಕ್ಕೆ ಏನು ಬೇಕಾದರೂ ಸಪೋರ್ಟ್ ಮಾಡ್ತೀನಿ ಎಂದಿದ್ದ ಅರುಣ್. ನಂತರ ಕೊಲೆ ಮಾಡುವ ಉದ್ದೇಶದಿಂದಲೇ ಫಣೀಂದ್ರ ಬಳಿ ಕೆಲಸಕ್ಕೆ ಬರುವ ನಾಟಕವನ್ನು ಫೆಲಿಕ್ಸ್‌ ಮಾಡಿದ್ದ.

ಇದಕ್ಕೆ ಜಿ-ನೆಟ್‌ನಲ್ಲಿ ಕೆಲಸ ನಿರ್ವಹಿಸುತ್ತಿ ಸಂತೋಷ್ ಹಾಗೂ ಗಾಂಜಾ ಸ್ನೇಹಿತನಾಗಿದ್ದ ವಿನಯ್‌ನನ್ನು ಸೇರಿಸಿಕೊಂಡಿದ್ದ. ಏರ್‌ಆನ್‌ ಕಛೇರಿಗೆ ಹೋಗಿ ಪ್ಲಾನ್‌ನಂತೆಯೇ ಕೊಲೆ ಮಾಡಿ ತಪ್ಪಿಸಿಕೊಂಡಿದ್ದರು. ಆದರೆ ಅರುಣ್‌ ಮೇಲೂ ಅನುಮಾನ ಹೊಂದಿದ್ದ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಸುಪಾರಿ ಸತ್ಯ ಬಾಯ್ಬಿಟ್ಟಿದ್ದಾನೆ.

ಮೃತನ ಮೇಲಿತ್ತು ಚೀಟಿಂಗ್ ಕೇಸ್

ಕೇರಳ ಮೂಲದ ವಿನುಕುಮಾರ್ ಮೇಲೆ ಕೇರಳದಲ್ಲಿ ಚೀಟಿಂಗ್ ಕೇಸ್ ಇತ್ತು ಎಂಬುದು ಗೊತ್ತಾಗಿದೆ. ಕೇರಳದ ಬಾಲರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಪಲ್ ಟ್ರೀ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ವಂಚನೆ ಎಸಗಿದ ಕುರಿತು ಬೀನಾಜಿ ಎಂಬವರು ದೂರು ನೀಡಿದ್ದರು. ಕೇರಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.

ಇದನ್ನೂ ಓದಿ: DJ Halli Double Murder: ಡಬಲ್‌ ಮರ್ಡರ್‌ ಆರೋಪಿಯ ಸೈಕೋ ಅವತಾರ ಹೀಗಿದೆ ನೋಡಿ! ಈತನನ್ನು ಹಿಡಿದದ್ದು ಹೇಗೆ?

Exit mobile version